ಹೊಸನಗರ : ತಾಲೂಕು ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಇಂದು ತಾಲೂಕಿನಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆ ನಿಲ್ಲಿಸಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ತಮ್ಮ ಕನಿಷ್ಠ ಬೇಡಿಕೆಗಳಿಗಾಗಿ ಪ್ರತಿಭಟನಾ ಪ್ರದರ್ಶನ ನಡೆಸಿ ತಾಲೂಕು ಆಡಳಿತಕ್ಕೆ ಬೇಡಿಕೆಗಳ ಮನವಿ ಸಲ್ಲಿಸಿದರು.

ಫೆಡರೇಷನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಕೆ. ಹೊಸಕೊಪ್ಪ, ತಾಲೂಕು ಸಂಘದ ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷೆ ಜ್ಯೋತಿ ನಾಗರಾಜ್ ಖಜಾಂಚಿ, ವನಜಾಕ್ಷಿ ಮತ್ತಿತರ ಪದಾಧಿಕಾರಿಗಳು ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿ, ಬಿಸಿಯೂಟ ತಯಾರಿಕರಿಗೆ ಕನಿಷ್ಠದಲ್ಲಿ ಕನಿಷ್ಠ ವೇತನ ರಾಜ್ಯ ಸರ್ಕಾರ ನೀಡುತ್ತಿದ್ದು ಇದರಿಂದ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಕನಿಷ್ಠ ಕೂಲಿಯಾಳು ಪಡೆಯದ 2700 ರೂ.ಗಳ ಮಾಸಿಕ ಸಂಭಾವನೆ ನೀಡುತ್ತಿದ್ದಾರೆ.

ಬಿಸಿಯೂಟ ತಯಾರಿಕರಿಗೆ ಸರ್ಕಾರ ಮಾಸಿಕ 21,000 ರೂ.ಗಳ ವೇತನ ಜಾರಿಗೊಳಿಸಬೇಕು ಉತ್ತರಪ್ರದೇಶ ಅಲಹಾಬಾದ್ ಹೈಕೋರ್ಟ್ ಆದೇಶಿಸುವಂತೆ ನನ್ನ ಕೆಲಸ ಕಾಯಂಗೊಳಿಸಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕು ಬಿಸಿಯೂಟ ತಯಾರಿಕೆ ಯೋಜನೆ ಎನ್ನುವುದನ್ನು ಬದಲಾಯಿಸಿ ನಿರಂತರ ಕಾರ್ಯಕ್ರಮ ಎಂದು ಮಾರ್ಪಡಿಸಬೇಕು. ಬಿಸಿಯೂಟ ಅಡಿಗೆ ತಯಾರಕರನ್ನು ಕಾರ್ಮಿಕರು ಎಂದು ಘೋಷಿಸಿ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು. 60 ವರ್ಷದ ಮೀರಿದ ತಯಾರಿಕರಿಗೆ 2 ಲಕ್ಷ ರೂ.ಗಳ ಇಡುಗಂಟು ನೀಡಬೇಕು ಹಾಗೂ ಮಾಸಿಕ 3000 ರೂ.ಗಳ ಪಿಂಚಣಿ ನೀಡಬೇಕು ಎಂದು ಆಗ್ರಹಿಸುವ ಮನವಿಯನ್ನು ಗ್ರೇಡ್-2 ತಹಸಿಲ್ದಾರ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ರವರಿಗೆ ಸಲ್ಲಿಸಿದರು.


