ಹೊಸನಗರ ತಾಲೂಕು ವಿಧಾನಸಭಾ ಕ್ಷೇತ್ರವಾಗಲಿ ; ಸ್ವಾಮೀಜಿ ನೇತೃತ್ವದಲ್ಲಿ ಹೋರಾಟಕ್ಕೆ ಸಿದ್ಧತೆ

0
694

ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವ ವಿಷಯದಲ್ಲಿ ಸಂಘಟಿತವಾಗಿರುವ ಸಮಿತಿಯ ಸಭೆ ಶನಿವಾರ ಇಲ್ಲಿನ ಗಾಯತ್ರಿ ಮಂದಿರದಲ್ಲಿ ನಡೆಯಿತು.

ಸ್ಥಳೀಯ ಪ್ರಮುಖರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಯಿತು. ತಾಲೂಕಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ನಿಟ್ಟೂರು ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿಯವರು ಮಾತನಾಡಿ, ಹೊಸನಗರ‌ ತಾಲೂಕು ಈ ಹಿಂದೆ ವಿಧಾಸಭಾಕ್ಷೇತ್ರವಾಗಿತ್ತು. ಆದರೆ ಹಿಂದಿನ ಕ್ಷೇತ್ರ ವಿಂಗಡಣೆ ಸಮಯದಲ್ಲಿ ಇದು ತನ್ನ ಅಸ್ತಿತತ್ವ ಕಳೆದುಕೊಂಡಿದೆ. ಆದರೆ ವಿಧಾನಸಭಾ ಕ್ಷೇತ್ರವನ್ನಾಗಿ ಮರುಸ್ಥಾಪಿಸುವ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರತಿಯೊಬ್ಬರೂ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಹೋರಾಟಗಳಿಗೆ ಕಾನೂನು ತೊಡಕುಗಳು ಎದುರಾಗಬಹುದು. ಆದರೆ ಸಮಸ್ಯೆಗಳಿಗೆ ಇರುವ ಮಾರ್ಗೋಪಾಯಗಳನ್ನು ವಿಸ್ತೃತವಾಗಿ ಚರ್ಚಿಸಿ ಯೋಜನಾ ಬದ್ದ ಹೋರಾಟದ ಮೂಲಕ ಗಮನ ಸೆಳೆದು ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಾದ್ಯವಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯುವ ದಿಸೆಯಲ್ಲಿ ಹೋರಾಟ ಅನಿವಾರ‍್ಯವಾಗಿದೆ. ಮುಳುಗಡೆ ಸಂತ್ರಸ್ಥರ ತಾಲ್ಲೂಕಾಗಿರುವ ಹೊಸನಗರಕ್ಕೆ ವಿಧಾನಸಭಾಕ್ಷೇತ್ರ ಮಾನ್ಯತೆ ಅಗತ್ಯವಾಗಿ ಬೇಕಾಗಿದೆ. ಗ್ರಾಮ ಮಟ್ಟದಿಂದ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಪ್ರತಿಪಾದಿಸಿದರು.

ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಈಗಾಗಲೇ ರಾಜ್ಯ‌ ಮಟ್ಟದ ಹಲವು ರಾಜಕೀಯ ನಾಯಕರನ್ನು ಸಂಪರ್ಕ ಮಾಡಲಾಗಿದ್ದು, ಪಶ್ಚಿಮಘಟ್ಟ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಜನಸಂಖ್ಯೆನ್ನು ಆಧರಿಸುವ ಬದಲು ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ಭೌಗೋಳಿಕ ವ್ಯಾಪ್ತಿಯ ಆಧಾರದಂತೆ ಕ್ಷೇತ್ರ ಮರುಸ್ಥಾಪನೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸಂಘಟಿತರಾಗಬೇಕೆಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಮಾತನಾಡಿ, ಹಿಂದೆ ಕ್ಷೇತ್ರ ಮರು ವಿಂಗಡಣೆಯ ಸಂದರ್ಭದಲ್ಲಿ ತಾಲೂಕನ್ನು ಎರಡು ಕ್ಷೇತ್ರಗಳಿಗೆ ಹಂಚಲು ವಿರೋಧ ವ್ಯಕ್ತಪಡಿಸಲಾಗಿತ್ತು. ಈಗ ಕ್ಷೇತ್ರ ಮರುಸ್ಥಾಪನೆಗೆ ಕಾನೂನಾತ್ಮಕವಾಗಿ ಅವಕಾಶವಿದ್ದಲ್ಲಿ ಮುಂದುವರೆಯಬಹುದು ಎಂದು ಸಲಹೆ ನೀಡಿದರು.

ಸಾಮಾಜಿಕ ಹೋರಾಟಗಾರಟಿ.ಆರ್.ಕೃಷ್ಣಪ್ಪ, ಅಂಬೇಡ್ಕರ್ ನಿಗಮದ ನಿರ್ದೆಶಕ ಎನ್.ಆರ್.ದೇವಾನಂದ, ಚಾಬುಸಾಬ್, ವಾಟಗೋಡು ಸುರೇಶ್, ಕಲ್ಯಾಣಪ್ಪಗೌಡ, ತಾ.ಪಂ ಮಾಜಿ ಸದಸ್ಯರಾದ ಚಂದ್ರಮೌಳಿ, ವೀರೇಶ್ ಆಲವಳ್ಳಿ, ಎರಗಿ ಉಮೇಶ್, ಸುರೇಶ್ ಸ್ವಾಮಿರಾವ್, ಬೆಳೆಗೋಡು ಗಣಪತಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here