ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

0
666

ಹೊಸನಗರ: ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 4 ವರ್ಷಗಳಿಂದ ಆಗಿರುವ ಅಭಿವೃದ್ಧಿ ಶೂನ್ಯ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ಅವರು ಗಾಂದಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ತಾವು ಹಿಂದೆ ಶಾಸಕಾರಾಗಿದ್ದ ಅವಧಿಯಲ್ಲಿ ಹೊಸನಗರ ಪಟ್ಟಣದಲ್ಲಿ ಬಸ್‌ನಿಲ್ದಾಣ, ಅಗ್ನಿಶಾಮಕದಳ, ಮಿನಿವಿಧಾನಸೌಧ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ‍್ಯಗಳನ್ನು ಕೈಗೊಂಡಿದ್ದೆ. ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಆಸ್ಪತ್ರೆ ಕಟ್ಟಡ, ಆಶ್ರಯ ನಿವೇಶನಗಳ ನಿರ್ಮಾಣದಂತಹ ಗಮನಾರ್ಹ ಕೆಲಸ ಕಾರ್ಯಗಳು ಆಗಿದ್ದವು. ಆದರೆ ಈಗಿನ ಶಾಸಕರಾಗಿರುವ ಹಾಲಪ್ಪ ಅವರ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಏನು ಕೊಡುಗೆ ದೊರೆತಿದೆ ಎಂದು ಜನರೇ ಹೇಳಬೇಕಾಗಿದೆ ಎಂದು ಟೀಕೆ ಮಾಡಿದರು.

ಬಗರ್‌ಹುಕುಂ ಅರ್ಜಿ ವಿಲೇವಾರಿ, 94ಸಿ, 94ಸಿಸಿ ಹಕ್ಕುಪತ್ರ ವಿತರಣೆಯಲ್ಲಿ ಪ್ರಗತಿ ಕಂಡುಬಂದಿಲ್ಲ. 4 ವರ್ಷಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಆಶ್ರಯ ನಿವೇಶನ ಹಂಚಲಾಗಿದೆ. ಕಛೇರಿಗಳಲ್ಲಿ ಜನಸ್ನೇಹಿ ಆಡಳಿತವಿಲ್ಲ. ಗ್ರಾಮೀಣ ಜನತೆ ಹೋದರೆ ವಾರಗಟ್ಟಲೇ ಕಾಯುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದ ಅವರು ಹಸಿರುಮಕ್ಕಿ ಸೇತುವೆ ಕಾಮಗಾರಿ ಬಹುತೇಕ ನಿಂತುಹೋಗಿದೆ. ಸಿಗಂದೂರು ಸೇತುವೆ ಕೇಂದ್ರ ಸರಕಾರದ ಯೋಜನೆಯಾಗಿದೆ. ಇಲ್ಲಿನ ಶಾಸಕರ ಸಾಧನೆ ಏನು ಎಂದು ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನೂ ಸಹಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದನಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.

ಬೈಪಾಸ್ ಬೇಡ:

ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಹೊಸನಗರ ಪಟ್ಟಣಕ್ಕೆ ಬೈಪಾಸ್ ನಿರ್ಮಾಣ ಮಾಡುವುದು ಸರಿಯಲ್ಲ. ತಾಲೂಕು ಕೇಂದ್ರವಾಗಿದ್ದರೂ, ಆರ್ಥಿಕವಾಗಿ ಅಭಿವೃದ್ಧಿ ಕಂಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಲ್ಪಸ್ವಲ್ಪ ವ್ಯವಹಾರ ನಡೆಯುತ್ತಿದ್ದು, ಬೈಪಾಸ್ ರಸ್ತೆ ನಿರ್ಮಾಣ ಮಾಡುವುದರಿಂದ ಹೊಸನಗರ ಪಟ್ಟಣ ವ್ಯವಹಾರಿಕವಾಗಿ ಇನ್ನಷ್ಟು ಕುಸಿತ ಕಾಣಲಿದೆ. ಹಾಗಾಗಿ ಪಟ್ಟಣದ ಮಧ್ಯದಲ್ಲಿಯೇ ಹೆದ್ದಾರಿ ಹಾದು ಹೋಗುವಂತೆ ಯೋಜನೆ ರೂಪಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಕೆ.ಎಸ್. ಗುರುರಾಜ್ , ಪಟ್ಟಣ ಪಂಚಾಯಿತಿ ಸದಸ್ಯ ಕೆ.ಕೆ.ಅಶ್ವಿನಿಕುಮಾರ್, ಜಯನಗರ, ಗುರು, ಸಣ್ಣಕ್ಕಿ ಮಂಜು, ವೆದಾಂತಪ್ಪಗೌಡ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here