ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ಸಂಪೂರ್ಣ ಪರೋಕ್ಷ ಬೆಂಬಲ ; ಹಿನ್ನೀರು ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ದಂಧೆ !!

0
1035

ಹೊಸನಗರ: ತಾಲೂಕಿನಾದ್ಯಂತ ಅಕ್ರಮ ಮರಳು ಗಣಿಗಾರಿಕೆ ದಂಧೆ ರಾಜಾರೋಷವಾಗಿ ನಡೆಯುತ್ತಿರುವುದು ಕಂಡು ಬಂದಿದೆ.

ತಾಲೂಕಿನ ಸುತ್ತಾ, ಮತ್ತಿಕೊಪ್ಪ, ಹೆಬೈಲು, ಹರಿದ್ರಾವತಿ, ತೋಟದಕೊಪ್ಪ, ಮಣಸಟ್ಟೆ, ರಾಮಚಂದ್ರಾಪುರ, ಸೊನಲೆ, ಕಪ್ಪೆಹೊಂಡ,, ಈಚಲಗೊಪ್ಪ, ನಂಜಹಳ್ಳಿ, ಮಾವಿನಹೊಳೆ ಸೇರಿದಂತೆ ಹತ್ತಾರು ಕಡೆಗಳಲ್ಲಿ ಹಗಲಿರುಳೂ ಟಿಪ್ಪರ್, ಪಿಕಪ್ ವಾಹನಗಳಲ್ಲಿ ಮರಳು ಸಾಗಾಟ ನಡೆಸಲಾಗುತ್ತಿದೆ. ಶಿವಮೊಗ್ಗ, ಭದ್ರಾವತಿ, ಸೊರಬ, ಸಾಗರ, ಶಿಕಾರಿಪುರದ ವರೆಗೂ ಮರಳು ನಿರಂತರವಾಗಿ ಸಾಗಾಟಾವಾಗುತ್ತಿದ್ದು, ಪ್ರತಿ ಲೋಡಿಗೆ 40000 ದಿಂದ 20000 ರೂ. ವರೆಗೂ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಕಾರ್ಯಚರಣೆ ಮರೆತ ಇಲಾಖೆಗಳು:

ಅಕ್ರಮ ಮರಳು ಹಿಡಿಯುವಲ್ಲಿ ಖ್ಯಾತಿ ಪಡೆದ ಭೂ ಮತ್ತು ಗಣಿ ಇಲಾಖೆ ಇತ್ತಿಚೇಗೆ ಸುದ್ಧಿ ಇಲ್ಲದೇ ಕುಳಿತಿರುವುದು ನೋಡಿದರೆ ಪರೋಕ್ಷವಾಗಿ ರಾಜಕೀಯ ನಾಯಕರು ಹಿಡಿಯಲು ಅಡ್ಡಿ ಪಡಿಸುತ್ತಿದ್ದಾರೆ ಎಂಬ ಧ್ವನಿ ಹೊಸನಗರದ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಜಿಲ್ಲಾಧಿಕಾರಿಗಳು ಖಡಕ್ ಸೂಚನೆಯನ್ನು ಕಂದಾಯ ಇಲಾಖೆಗೆ ಆಕ್ರಮ ಮರಳು ಹಿಡಿಯಲು ಸೂಚನೆ ನೀಡಿದ್ದು ಆದರೆ ಟಿಪ್ಪರ್ ಲಾರಿ ಹಿಡಿದ ಒಂದು ಗಂಟೆಯ ಒಳಗೆ ಅಷ್ಟೋ-ಇಷ್ಟೋ ದಂಡ ಕಟ್ಟಿಸಿಕೊಂಡು ಬಿಡುವ ಪರಿಸ್ಥಿತಿ ಬಂದಿದ್ದು ಇಲ್ಲವಾದರೆ ರಾಜಕೀಯ ನಾಯಕರಿಂದ ಬೈಗುಳ ಕೇಳಿಸಿಕೊಳ್ಳಬೇಕಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ

ಪೊಲೀಸ್, ಲೋಕೋಪಯೋಗಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳು ಅಕ್ರಮ ಮರಳು ತಡೆಯುವಲ್ಲಿ ಜವಾಬ್ದಾರಿ ಹೊಂದಿವೆ. ಟಾಸ್ಕ್ ಫೋರ್ಸ್ ಕೂಡಾ ಇದಕ್ಕಾಗಿಯೇ ರಚಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಯಾವ ಇಲಾಖೆ ಅಧಿಕಾರಿಗಳೂ ಸಹಾ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಮುಂದಾಗದೇ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಜಗಜ್ಜಾಹೀರಾಗಿದೆ.

ರಾಜಕೀಯ ಪಕ್ಷಗಳ ನಾಯಕರ ಪರೋಕ್ಷ ಬೆಂಬಲ:

ಅಕ್ರಮ ಮರಳು ಸಾಗಾಟದ ವಿಚಾರದಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳು ಪರೋಕ್ಷ ಬೆಂಬಲ ನೀಡುತ್ತಿದ್ದರೆ, ಇತ್ತ ವಿರೋಧ ಪಕ್ಷದವರೂ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಕೇವಲ ನಾಯಕರ ನಡುವೆ ಕೆಸರೆರಚಾಟ ನಡೆಯುತ್ತಿದೆಯೇ ಹೊರತು, ಅಕ್ರಮವನ್ನು ಖಂಡಿಸುವ ವಿಷಯದಲ್ಲಿ ಮೌನಕ್ಕೆ ಜಾರಿದ್ದಾರೆ.

ಮರಳು ಧಂದೆಯಲ್ಲಿಯ ಪಕ್ಷದ ಕಾರ‍್ಯಕರ್ತರು: ವಿಶೇಷವೆಂದರೆ ಅಕ್ರಮ ಮರಳು ದಂಧೆ ನಡೆಸುತ್ತಿರುವ ಬಹುತೇಕ ಲಾರಿ ಮಾಲಿಕರು ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದ ಕಾರ‍್ಯಕರ್ತರಾಗಿದ್ದಾರೆ. ಬೇರೆ ವಿಷಯದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಸಿಕೊಳ್ಳುವ ಇವರು ಅಕ್ರಮ ಮರಳು ಸಾಗಾಟದ ವಿಷಯದಲ್ಲಿ ಮಾತ್ರ ಒಗ್ಗಾಟ್ಟಾಗಿರುವುದು ನೈತಿಕ ಅಧಃಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸ್ಥಳೀಯರಿಗಿಲ್ಲ ಆಧ್ಯತೆ:

ಇಷ್ಟೆಲ್ಲಾ ಅಕ್ರಮದ ನಡುವೆ ಸ್ಥಳೀಯ ನಿವಾಸಿಗಳಿಗೆ ಯಾವುದೇ ಮರಳು ಸುಲಭದಲ್ಲಿ ಸಿಗುತ್ತಿಲ್ಲ. ಮರಳು ತುಂಬುವ ಕಾರ್ಮಿಕರು ಸಹಾ ಹೊರರಾಜ್ಯದವರು. ದೀಪದ ಕೆಳಗೆ ಕತ್ತಲೆ ಎನ್ನುವಂತೆ ಅಧಿಕ ದರದಲ್ಲಿ ಮರಳು ಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿನ ಮಧ್ಯಮವರ್ಗ ಹಾಗೂ ಬಡವರ ಪಾಲಿನ ಪರಿಸ್ಥಿತಿಯಾಗಿದೆ.

ಚೆಕ್‌ಪೋಸ್ಟ್, ಸಿಸಿಕ್ಯಾಮರಾ ಯಾವುದೂ ಇಲ್ಲ:

ಅಕ್ರಮ ಸಾಗಾಟ ತಡೆಗೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಕ್ಯಾಮೆರಾ ಅಳವಡಿಸಬೇಕು, ಚೆಕ್‌ಪೋಸ್ಟ್ ಸ್ಥಾಪಿಸಬೇಕು ಎನ್ನುವ ನಿಯಮವಿದ್ದರೂ, ಗಾಳಿಗೆ ತೂರಲಾಗಿದೆ. ಸರಕಾರಕ್ಕೆ ಕೋಟ್ಯಾಂತರ ರೂ. ರಾಜಧನ ನಷ್ಟವಾಗುತ್ತಿರುವ ಜೊತೆಗೆ, ಶರಾವತಿ ನದಿ ಸಂಪೂರ್ಣ ಬತ್ತಿಹೋಗುವ ಹಂತಕ್ಕೆ ಬಂದಿದೆ.

ಕಾಣೆಯಾದ ಪರಿಸರ ಹೋರಾಟಗಾರರು:

ಪರಿಸರ ಹೋರಾಟಗಾರರು ಸಹಾ ಮರಳು ದಂಧೆ ವಿರುದ್ದ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ತಮ್ಮ ಲಾಭಕ್ಕಾಗಿ ಪರಿಸರ ಉಳಿಸುವ ಸೋಗು ಹಾಕಿರುವ ಪರಿಸರ ಕಾರ‍್ಯಕರ್ತರು ಮರಳು ಅಕ್ರಮ ಕಂಡೂ ಕಾಣದಂತಿರುವುದು ವಿಪರ‍್ಯಾಸ.

ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಿಗೆ ನೋಟಿಸ್ ಜಾರಿ: ತಹಶೀಲ್ದಾರ್

ಹೊಸನಗರ ತಾಲ್ಲೂಕಿನಲ್ಲಿ ಆಕ್ರಮವಾಗಿ ಮರಳು ಸಾಗಾಟವಾಗುತ್ತಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಸ್ಥಳಗಳಿಗೆ ತಹಶೀಲ್ದಾರ್ ವಿ.ಎಸ್. ರಾಜೀವ್, ಶಿರಾಸ್ಥೆದಾರ್ ಸುಧೀಂದ್ರಕುಮಾರ್ ಹಾಗೂ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ದೀಪುರವರು ಭೇಟಿ ನೀಡಲಾಗಿದ್ದು ಅಲ್ಲಿ ಅಕ್ರಮ ಮರಳು ಸಂಗ್ರಹಣೆ ಮತ್ತು ಹೊರ ರಾಜ್ಯದ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಯಾವ ಯಾವ ಸ್ಥಳಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಹೊರ ರಾಜ್ಯದವರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಇಲ್ಲಿಂದ ಕಳುಹಿಸಬೇಕೆಂದು ಭೂ ಮತ್ತು ವಿಜ್ಞಾನ ಇಲಾಖೆಗೆ ರಕ್ಷಣಾ ಇಲಾಖೆಗೆ ಹಾಗೂ ಆಕ್ರಮ ಮರಳು ಸಂಬಂಧಪಟ್ಟ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಮುಂದಿನ ದಿನದಲ್ಲಿ ಹಗಲು-ರಾತ್ರಿ ಎನ್ನದೇ ಕಂದಾಯ ಇಲಾಖೆಯ ನೇತೃತ್ವದ ತಂಡ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಅಕ್ರಮ ಮರಳು ಸಾಗಾಣಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಹಿಸುವುದಾಗಿ ತಹಶೀಲ್ದಾರ್ ರಾಜೀವ್‌ರವರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here