ಹೊಸನಗರ ತಾಲ್ಲೂಕು ಆರ್ಯ ಈಡಿಗ ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ; ಬಂಡಿ ರಾಮಚಂದ್ರ ಸ್ಪಷ್ಟನೆ

0
796

ಹೊಸನಗರ : ಇಲ್ಲಿನ ಆರ್ಯಈಡಿಗ ವಿದ್ಯಾವರ್ಧಕ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರ ಸ್ಪಷ್ಟಪಡಿಸಿದ್ದಾರೆ.

ಅವರು ಸಂಘದ ಕಛೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ತಮ್ಮ ಅಧ್ಯಕ್ಷತೆಯಲ್ಲಿ ಸಂಘವು ಅತ್ಯಂತ ಪಾರದರ್ಶಕವಾದ ಆಡಳಿತ ನೀಡಿದೆ. ನಿಯಮಿತವಾಗಿ ಲೆಕ್ಕಪತ್ರ ಪರಿಶೋಧನೆ ನಡೆಸಲಾಗಿದೆ. ವಾರ್ಷಿಕ ಮಹಾಸಭೆ ಸೇರಿದಂತೆ ಆಡಳಿತ ಮಂಡಳಿ ಸಭೆ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲಾ ನಿರ್ದೇಶಕರು, ಸದಸ್ಯರ ಬಹುಮತದಂತೆ ಸಭೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

2007ರಲ್ಲಿ ತಾವು ಸಂಘದ ನೇತೃತ್ವ ವಹಿಸಿಕೊಳ್ಳುವ ಸಂದರ್ಭದಲ್ಲಿ ಸಂಘದಿಂದ ಸ್ಥಳೀಯ ಸಂಸ್ಥೆಗೆ 4 ಲಕ್ಷ ರೂ. ತೆರಿಗೆ ಬಾಕಿ ಇತ್ತು. ಸಂಘಕ್ಕೆ ಕೇವಲ ಮಾಸಿಕ 13 ಸಾವಿರ ಬಾಡಿಗೆಆದಾಯ ಬರುತ್ತಿತ್ತು. ಅಂತಹ ಕ್ಲಿಷ್ಟ ಪರಿಸ್ಥಿತಿಯಿಂದ ಇಂದು ಸುಧಾರಣೆಗೊಂಡಿದೆ. ಸಂಘದ ಭವಿಷ್ಯದ ಉದ್ದೇಶಗಳಿಗಾಗಿ ಸುಮಾರು 10 ಕೋಟಿ ರೂ. ಮೌಲ್ಯದ 3 ಎಕರೆ ಭೂಮಿಯನ್ನು ಮಂಜೂರು ಮಾಡಿಸಿಕೊಳ್ಳಲಾಗಿದೆ. ಕಳೆದ 15 ವರ್ಷಗಳಲ್ಲಿ ರೂ.60 ಲಕ್ಷರೂ. ಬಾಡಿಗೆ ಆದಾಯ ಸಂಗ್ರಹಿಸಲಾಗಿದ್ದು, ಈ ಹಣದಲ್ಲಿ ವಾಣಿಜ್ಯ ಸಂಕೀರ್ಣದಅಭಿವೃದ್ಧಿ, ಕಟ್ಟಡ ನಿರ್ಮಾಣ, ದುರಸ್ತಿ ಕಾರ್ಯ ನಡೆಸಲಾಗಿದೆ. ಪ್ರಸ್ತುತಸರಕಾರ ಹಾಗೂ ಸಮಾಜದ ಎಲ್ಲಾ ಗಣ್ಯರ ಸಹಕಾರದಿಂದ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಕಾರ‍್ಯಕೈಗೊಳ್ಳಲಾಗಿದ್ದು, ಕಾಮಗಾರಿ ಮುಕ್ತಾಯದ ಹಂತ ತಲುಪಿದೆ ಎಂದರು.

ಮಾಜಿ ಶಾಸಕ ಬಿ.ಸ್ವಾಮಿರಾವ್‌ ಅವರು ಈಡಿಗ ಸಮಾಜದ ಹಿರಿಯರಾಗಿದ್ದು, ಜನರನ್ನುಗೊಂದಲಕ್ಕೀಡು ಮಾಡುವಂತಹ ಈ ತರಹದ ಹೇಳಿಕೆಯನ್ನು ನೀಡುವುದು ಅವರ ಘನತೆಗೆ ತಕ್ಕದ್ದಲ್ಲ. ಅವರ ನಿರೀಕ್ಷೆ ಇನ್ನೂ ದೊಡ್ಡದಿರಬಹುದು. ಆ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂಘಕ್ಕೆ ಬದಲಾವಣೆ ತರುವ ಅಗತ್ಯವಿಲ್ಲ ಎಂದು ಸಂಘದ ನಿರ್ದೇಶಕ ಬಿ.ಜಿ.ನಾಗರಾಜ್ ತಿಳಿಸಿದರು.

ಸಂಘದಲ್ಲಿ ಉತ್ತಮ ರೀತಿಯ ಕೆಲಸ ಕಾರ್ಯ ನಡೆಯುತ್ತಿದ್ದು ಸಮಾಜದ ಎಲ್ಲ ಸದಸ್ಯರ ಸಹಕಾರದಿಂದ ಉತ್ತಮ ಕೆಲಸ ಮಾಡಲಾಗುತ್ತಿದೆ ಈ ಯಶಸ್ಸು ಸಹಿಸದ ಕೆಲವರು ಸಂಘದ ಬಗ್ಗೆ ಮಾತನಾಡುವುದು ಸರಿಯಲ್ಲ ಹಿರಿಯರು ಶಾಸಕರಾಗಿದ್ದವರು ಸಂಘದ ಬಗ್ಗೆ ಮಾತನಾಡುವುದು ಸರಿಯಲ್ಲ ಸಂಘದ ಏಳಿಗೆಗಾಗಿ ನಮ್ಮೆಲ್ಲರಿಗೂ ಅವರ ಸಹಕಾರ ಅತ್ಯಗತ್ಯವಾಗಿದೆ ಎಂದು ಸಂಘದ ಕಾರ್ಯದರ್ಶಿ ಮಾವಿನಕಟ್ಟೆ ಲೇಖನಮೂರ್ತಿಯವರು ಈ ಸಂದರ್ಭದಲ್ಲಿ ಮಾತನಾಡಿದರು.

ಈ ಪತ್ರಿಕಾಘೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎರಗಿ ಉಮೇಶ್, ಕಾರ‍್ಯದರ್ಶಿ ಲೇಖನಮೂರ್ತಿ, ನಿರ್ದೇಶಕರಾದ ರಾಮಚಂದ್ರಪ್ಪ, ನಾಗರಾಜ ಹೆಬ್ಬೈಲು, ಮುರಳೀಧರ, ಶ್ರೀಪತಿ ವಾಟಗದ್ದೆ, ಟೀಕಪ್ಪ, ಲೋಕೇಶ, ಶೇಖರಪ್ಪ, ಮಂಜಪ್ಪ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here