ಹೊಸನಗರ: ತಾಲ್ಲೂಕಿನ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೊಪ್ಪ ಗ್ರಾಮದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಹೊಸನಗರ ಆರೋಗ್ಯ ಇಲಾಖೆ ಹಾಗೂ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಮಾವಿನಕೊಪ್ಪ ಭಾಗದ ಸದಸ್ಯರಾದ ಮಹೇಂದ್ರರವರ ನೇತೃತ್ವದಲ್ಲಿ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಕೋವಿಡ್-19 ಲಸಿಕೆಯನ್ನು ಮಾವಿನಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದರು.
ಬುಧವಾರ ಬೆಳಿಗ್ಗೆ 9ಗಂಟೆಯಿಂದ ಲಸಿಕೆ ಚುಚ್ಚುವಿಕೆಯನ್ನು ಏರ್ಪಡಿಸಲಾಗಿದ್ದು ಮಧ್ಯಾಹ್ನದವರೆಗೆ ಸುಮಾರು 100 ಮಂದಿ ಗ್ರಾಮಸ್ಥರು ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಂಡರು.
ಸರ್ಕಾರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿರುವುದರಿಂದ ಯಾರು ಲಸಿಕೆಯನ್ನು ಪಡೆಯದೆ ಇರಬಾರದು ಎಂದು ತಾಲೂಕು ಆರೋಗ್ಯಕಾರಿ ಡಾ. ಸುರೇಶ್ ಈ ಸಂದರ್ಭದಲ್ಲಿ ತಿಳಿಸಿದರು.
ಕೊರೊನಾ ಅಲೆ ಮತ್ತೆ ತೀವ್ರಗೊಳ್ಳುತ್ತಿರುವದರಿಂದ ಲಸಿಕೆ ಪಡೆದು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಜತೆಗೆ ಇದು ನಮ್ಮ ಕರ್ತವ್ಯ ಎಂದರು. ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್, ಅಂಗನವಾಡಿಗಳಲ್ಲಿ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊರೊನಾ ವಿರುದ್ಧ ಹೋರಾಡಲು ಜನರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಜೊತೆಗೆ ನಮ್ಮ ಸುತ್ತಮುತ್ತಲ ಜನರನ್ನು ಪ್ರೇರೇಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶೋಭಾ, ದೇವಮ್ಮ, ಆಶಾ ಕಾರ್ಯಕರ್ತೆಯರಾದ ಜ್ಯೋತಿ, ಶ್ವೇತಾ, ಶೋಭಾ, ಅಂಗನವಾಡಿ ಕಾರ್ಯಕರ್ತೆ ಸುಜಾವತಿ, ಸಹಾಯಕಿಯರಾದ ನಾಗವೇಣಿ, ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ್, ಸಿಬ್ಬಂದಿಗಳಾದ ಧರ್ಮಪ್ಪ, ದಿವಾಕರ್, ಮೋಹನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.