ಹೊಸನಗರ: ವಿದ್ಯಾರ್ಥಿಗಳ ಓದಿನ ಹಾದಿ ಈಗ ಬರಿ ಧೂಳು… ಧೂಳು… ಧೂಳು…!

0
792

ಹೊಸನಗರ: ರಾಜ್ಯ ಸರ್ಕಾರವು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ರಸ್ತೆ, ನೀರು, ಚರಂಡಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಆದರೆ ಹೊಸನಗರ ತಾಲ್ಲೂಕು ಇಂತಹ ಅಭಿವೃದ್ಧಿಯಿಂದ ಹಿಂದೆ ಬಿದ್ದಿರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ತಾಲ್ಲೂಕಿನಲ್ಲಿ ಎರಡು ಜನ ಶಾಸಕರಿದ್ದರೂ ರಸ್ತೆಯ ಅಭಿವೃದ್ಧಿಗೆ ಚಿಂತನೆ ನಡೆಸದಂತಾಗಿದೆ.

ಹೌದು, ಪಟ್ಟಣದ ಪರಿವೀಕ್ಷಣಾ ಕೇಂದ್ರದಲ್ಲಿ ಸುಸಜ್ಜಿತ ರಸ್ತೆ, ವಿಶ್ರಾಂತಿ ಕುರ್ಚಿಗಳಿದ್ದು, ವಾಯುವಿಹಾರಿಗಳಿಗೆ ಸುಸಜ್ಜಿತ ಸ್ಥಳವಾಗಿದೆ. ಆದರೆ ಇದೇ ಐ.ಬಿ ಮುಖಾಂತರ ರಾಮಕೃಷ್ಞ ವಿದ್ಯಾಸಂಸ್ಥೆ, ಬ್ರಹ್ಮ ಶ್ರೀ ಗುರು ನಾರಾಯಣ ಮಂದಿರ‌ ಮತ್ತು ಶರಾವತಿ ನದಿಯ ಜಾಕ್ ವೆಲ್ ಗೆ ಸಂಪರ್ಕ ನೀಡುವ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಕೊರೊನಾ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಶಾಲೆಯು ತೆರೆಯದಿದ್ದು, ಸರ್ಕಾರದ ಆದೇಶದ ನಂತರ ಶಾಲೆಗಳು ಪುನರಾರಂಭವಾಗಿದೆ. ಇಲ್ಲಿ 1 ರಿಂದ 10ನೇ ತರಗತಿಯವರೆಗೆ ಸುಮಾರು 1000 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದೇ ರೀತಿ ನೂರಕ್ಕೂ ಹೆಚ್ಚು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳಿಗೆ ಶಾಲೆಗೆ ಬಿಡಲು ನಡೆದು ಕೊಂಡು ಹೋಗುವುದಲ್ಲದೆ ತಮ್ಮ ತಮ್ಮ ವಾಹನಗಳಲ್ಲಿ ಕರೆದುಕೊಂಡು ಹೋಗುತ್ತಿರುತ್ತಾರೆ, ಅಂತೆಯೇ ಶಾಲೆಗೆ ಸಂಬಂಧಿಸಿದ ಶಾಲಾ ವಾಹನಗಳು ಕೂಡ ಈ ರಸ್ತೆಯ ಮುಖಾಂತರ ಸಂಚರಿಸುತ್ತದೆ, ಇದೇ ರಸ್ತೆಯಲ್ಲಿ ಶಾಲೆಯಿಂದ ಮುಂದೆ ನಡೆದರೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ದೇವಸ್ಥಾನ, ಇನ್ನು ಮುಂದೆ ಹೋದರೆ ನೀರು ಸರಬರಾಜು ಮಾಡುವ ಜಾಕ್ ವೆಲ್ ಕೂಡ ಇಲ್ಲಿ ಇದೆ. ಪ್ರತೀ ನಿತ್ಯ ಸಾವಿರಾರು ಜನ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಈ ಸಂಚಾರದಿಂದ ಇಲ್ಲಿ ಕಲ್ಲು,‌ ಮಣ್ಣು, ಧೂಳು ಎದ್ದು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ‌, ಶಾಲೆಗೆ ಬಿಡುವ ಪೋಷಕರಿಗೆ ಮತ್ತು ಈ ರಸ್ತೆಯ ಇಕ್ಕೆಲಗಳಲ್ಲಿ 15 ರಿಂದ 20 ಮನೆಗಳಿದ್ದು, ಪ್ರತಿ ನಿತ್ಯ ಧೂಳಿನಿಂದ ಅನಾರೋಗ್ಯದ ಭೀತಿ ಉಂಟಾಗುತ್ತಿದೆ.

ಎರಡನೇ ಹಂತದ ಕೊರೊನಾದ ಭೀತಿಯ ಈ ಸಂದರ್ಭದಲ್ಲಿ ಮುಖಕ್ಕೆ ಹಾಕುವ ಮಾಸ್ಕ್ ಕೂಡ ಧೂಳಿನಿಂದ ಕೂಡಿರುತ್ತದೆ. ಪ್ರತಿ ನಿತ್ಯ ಶಾಲೆಗೆ ಹೋಗುವ ಮತ್ತು ಶಾಲೆಗೆ ಬಿಡುವ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಇಲ್ಲಿನ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿರುವುದು ತಿಳಿದು ಬರುತ್ತಿದೆ.

ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ಬರುವ ಈ ರಸ್ತೆಯನ್ನು ಇಲಾಖೆಯ ಅಧಿಕಾರಿಗಳು ಹಾಗೂ ಅಲ್ಲಿಯ ಜನ ಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ಯಾವುದಾದರೊಂದು ಯೋಜನೆಯಡಿಯಲ್ಲಿ ಸರ್ಕಾರದಿಂದಾಗಲಿ ಅಥವಾ ಇಲಾಖೆಯಿಂದಾಗಲಿ ರಸ್ತೆ ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ನೆರವಾಗುವಂತೆ ಸಹಾಯ ಹಸ್ತ ನೀಡಬೇಕಿದೆ. ಸಾರ್ವಜನಿಕ ಹಿತ ಕಾಪಾಡುವ ಅಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕು ಎಂದು ಎಲ್ಲಾರ ಅಭಿಪ್ರಾಯವಾಗಿದೆ.

ವರದಿ: ಪುಷ್ಪಾವತಿ ಹೊಸನಗರ
ಜಾಹಿರಾತು

LEAVE A REPLY

Please enter your comment!
Please enter your name here