ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ | ಕ್ಷೇತ್ರ ಉಳಿವಿಗಾಗಿ ಹೋರಾಟ ಅನಿವಾರ್ಯ: ಬಿ. ಸ್ವಾಮಿರಾವ್

0
838

ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಇಂದು ಹೋರಾಟ ಅನಿವಾರ್ಯವಾಗಿದೆ. ತಾಲ್ಲೂಕಿನಲ್ಲಿ ಮತದಾರರನ್ನು ಒಗ್ಗೂಡಿಸಿ ವಿಧಾನಸೌಧದ ಹೋರಾಟ ನಡೆಸುತ್ತೇವೆ ಎಂದು ಹೊಸನಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನಸಭಾ ಕ್ಷೇತ್ರದ ಹೋರಾಟ ಸಮಿತಿ ಅಧ್ಯಕ್ಷ ಬಿ. ಸ್ವಾಮಿರಾವ್‌ರವರು ಹೇಳಿದರು.

ಪಟ್ಟಣದಲ್ಲಿ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿಯಿಂದ ರಸ್ತೆ ತಡೆದು ಪ್ರತಿಭಟಿಸಿ ಹಾಗೂ ವಿಧಾನಸಭಾ ಕ್ಷೇತ್ರವನ್ನು ಮರಳಿ ನೀಡುವಂತೆ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ, ರಾಜ್ಯ ಮತ್ತು ಕೇಂದ್ರ ಚುನಾವಣೆ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ ಸ್ವಾಮಿರಾವ್, ವಿಧಾನಸಭಾ ಕ್ಷೇತ್ರವು ಹೊಸನಗರ ತಾಲ್ಲೂಕಿನಲ್ಲಿ ಈ ಹಿಂದೆ ಅಸ್ತಿತ್ವದಲ್ಲಿತ್ತು ಆದರೆ ನಂತರದ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆಯ ಸಮಯದಲ್ಲಿ ತೀರ್ಥಹಳ್ಳಿ ಹಾಗೂ ಸಾಗರ ಕ್ಷೇತ್ರಕ್ಕೆ ಸೇರಿಸಿ ಹೊಸನಗರ ಕ್ಷೇತ್ರವನ್ನು ಕೈ ಬಿಡಲಾಯಿತು. ಜನ ಸಂಖ್ಯೆಯ ಆಧಾರದ ಮೇಲೆ ವಿಂಗಡಣೆ ಮಾಡಿರುವುದರಿಂದ ಈ ರೀತಿಯ ಕ್ಷೇತ್ರ ನಷ್ಟಕ್ಕೆ ಕಾರಣವಾಯಿತು.

ಹೊಸನಗರ ತಾಲ್ಲೂಕು ಮಲೆನಾಡು ಗುಡ್ಡಗಾಡು ಪ್ರದೇಶ ಮತ್ತು ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ಈ ಕ್ಷೇತ್ರ ವಿವಿಧ ವಿದ್ಯುತ್ ಯೋಜನೆಗಳಿಗಾಗಿ ಆರು ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದ್ದು ಸಾಕಷ್ಟು ಭೂ ಪ್ರದೇಶ ಮುಳುಗಡೆಯಾಗಿದೆ. ಪ್ರಸ್ತುತ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖೆಯನ್ನು ಹೊಂದಿರುವುದರಿಂದ ಇದರ ಪಕ್ಕದ ತಾಲ್ಲೂಕಿನ ಪ್ರದೇಶ ಮತ್ತು ಜನಸಂಖ್ಯೆಯನ್ನು ಹೊಂದಿಸಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರು ಸ್ಥಾಪಿಸಬಹುದಾಗಿರುತ್ತದೆ.

ಈಶಾನ್ಯ ಭಾರತದ ಮೀಜೋರಾಂ, ಅಸ್ಸಾಂ, ಅರುಣಾಚಲ ಪದೇಶ, ನಾಗಲ್ಯಾಂಡ ಮುಂತಾದ ಕೆಲವು ರಾಜ್ಯಗಳಲ್ಲಿ ಭೌಗೋಳಿಕ ಪ್ರದೇಶವನ್ನು ಗಮನದಲ್ಲಿಟ್ಟಕೊಂಡು ಜನಸಂಖ್ಯೆಯನ್ನು ಪರಿಗಣಿಸದೆ ವಿಧಾನಸಭಾ ಕ್ಷೇತ್ರಗಳನ್ನು ರಚಿಸಲಾಗಿದೆ. ಆದುದರಿಂದ ಇದರ ಆಧಾರದ ಮೇಲೆ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರು ಸೃಷ್ಟಿಸಲಾಗಿದೆ.

ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರು ಸೃಷ್ಟಿಸುವುದು ಪ್ರಜಾ ಪ್ರಭುತ್ವದ ದೃಷ್ಠಿಯಿಂದ ಸೂಕ್ತವಾಗಿದ್ದು ಬೆಂಗಳೂರು ಒಂದೇ ನಗರಕ್ಕೆ 28 ವಿಧಾನಸಭಾ ಕ್ಷೇತ್ರಗಳಿವೆ. ಭೂಗೋಳಿಕವಾಗಿ ಹೊಸನಗರ ತಾಲ್ಲೂಕು ಬೆಂಗಳೂರಿಗಿಂತಲ್ಲೂ ಹೆಚ್ಚು ವಿಸ್ತಾರ ಹೊಂದಿದೆ. ಆದುದರಿಂದ ಪ್ರಜಾ ಪ್ರಭುತ್ವದ ದೃಷ್ಟಿಯಿಂದಲೂ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರು ಪರಿಶೀಲಿಸಿ ಹೊಸನಗರ ಜನತೆಗೆ ಹೊಸನಗರ ಕ್ಷೇತ್ರಕ್ಕೆ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು.

ಸಾಮಾಜಿಕ ಹೋರಾಟಗಾರ ಮತ್ತು ಕ್ಷೇತ್ರ ಹೋರಾಟ ಸಮಿತಿಯ ಸದಸ್ಯ ರಿಪ್ಪನ್‌ಪೇಟೆ ಟಿ.ಆರ್ ಕೃಷ್ಣಪ್ಪ ಮಾತನಾಡಿ, ಜಾರ್ಖಂಡ್ ಮಿಜೋರಾಂ ಸೇರಿದಂತೆ ಹಲವು ಸಣ್ಣ ಸಣ್ಣ ರಾಜ್ಯಗಳಲ್ಲಿ 25 ರಿಂದ 30 ಸಾವಿರ ಜನರಿಗೆ ಒಂದೊಂದು ವಿಧಾನಸಭಾ ಕ್ಷೇತ್ರಗಳಾಗಿವೆ ಆದರೆ ರಾಜ್ಯದಲ್ಲೇ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಹೊಸನಗರ ತಾಲ್ಲೂಕು ಶಾಸಕರಿಲ್ಲದೇ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದೆ ಹಿಂದೆ ಉಳಿದಿದೆ. ಆದ್ದರಿಂದ ಹೊಸನಗರದ ಅಭಿವೃದ್ಧಿಗೆ ಒಬ್ಬರು ಶಾಸಕರು ಬೇಕು ಎಂದು ತಿಳಿಸಿದರು.

ಈ ರಸ್ತೆ ತಡೆ ಹಾಗೂ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಅಂಬೇಡ್ಕರ್ ನಿಗಮ ಮಂಡಳಿಯ ನಿರ್ದೇಶಕ ಎನ್.ಆರ್.ದೇವಾನಂದ್, ಬಿಜೆಪಿ ಜಿಲ್ಲಾ ಕಮಿಟಿಯ ಕಾರ್ಯದರ್ಶಿ ಎ.ವಿ.ಮಲ್ಲಿಕಾರ್ಜುನ, ವಿಶ್ವ ಹಿಂದು ಪರಿಷತ್ ಸಂಘಟಕರಾದ ಸುಧೀಂದ್ರ ಪಂಡಿತ್, ವಿಶ್ವೇಶ್ವರ, ಶಾಸಕರ ಆಪ್ತ ಸಹಾಯಕರಾದ ಮಂಡಾಣಿ ಮೋಹನ್, ಚಂದ್ರಪ್ಪ, ವರ್ತಕರ ಸಂಘದ ಕಾರ್ಯದರ್ಶಿ ಹರೀಶ್, ನಾಡ ಹಬ್ಬಗಳ ಸಮಿತಿಯ ಸದಸ್ಯ ಶ್ರೀಧರ ಉಡುಪ, ನೇರ‍್ಲೆ ಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಣಪತಿ ಬಿಳಗೋಡು, ಪಟ್ಟಣ ಪಂಚಾಯಿತಿ ಅದ್ಯಕ್ಷೆ ಗುಲಾಬಿ ಮರಿಯಪ್ಪ, ಸದಸ್ಯರಾದ ಗಾಯಿತಿ ನಾಗರಾಜ್, ಶ್ರೀಪತಿರಾವ್, ನಗರ ಚಂದ್ರಶೇಖರ ಶೆಟ್ಟಿ, ಉಸ್ಮಾನ್ ಸಾಬ್, ತಾ.ಮ.ನರಸಿಂಹ, ಹೆಚ್.ಆರ್ ಪ್ರಕಾಶ್, ಮಹೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here