ಹೊಸನಗರ: ಈ ಹಿಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಹಣ ಮಂಜೂರಾತಿ ಪಡೆಯುವುದು ಅದರಲ್ಲೂ ಮಲೆನಾಡಿಗೆ ನೆರವು ಪಡೆಯುವುದು ಮರೀಚಿಕೆ ಆಗಿತ್ತು. ಈಗಿನ ಕೇಂದ್ರ ಸರ್ಕಾರ ಅಭಿವೃದ್ಧಿ ಪಥದಲ್ಲಿ ಇದ್ದು ಎಲ್ಲಾ ಕಡೆ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿ ಬಳಸುತ್ತಿರುವುದರಿಂದ ನಾವು ಸಹ ಅಭಿವೃದ್ಧಿ ಕಾಣಬಹುದಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಹೊಸನಗನ – ಸಾಗರ ಸಂಪರ್ಕಿಸುವ ಪಟಗುಪ್ಪ ಸೇತುವೆಯನ್ನು 58 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಳಿಸಿ ಮಲೆನಾಡಿನ ಜನಮಾನಸದಲ್ಲಿ ಹಸಿರಾಗಿರುವಾಗಲೇ ಇಂದು ರಾಮಚಂದ್ರಪುರ ಗ್ರಾಪಂ ವ್ಯಾಪ್ತಿಯ ಕಾರಣಗಿರಿ (ಕಾರ್ಗಡಿ) ದೇವಸ್ಥಾನದ ಮುಂಭಾಗ 20 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 766c ರಾಣೆಬೆನ್ನೂರು-ಬೈಂದೂರು ರಸ್ತೆಯಲ್ಲಿ 3.02 ಕೋಟಿ ರೂ., ಮಡೋಡಿ ಬಳಿ 1.78 ಕೋಟಿ ರೂ., ಮತ್ತಿಮನೆ ಬಳಿ 6.38 ಕೋಟಿ ರೂ., ನಗರ ಚಿಕ್ಕಪೇಟೆ ಬಳಿ 3.22 ಕೋಟಿ ರೂ., ಅರೋಡಿ ಬಳಿ 2.38 ಕೋಟಿ ರೂ., ಕಾರಣಗಿರಿ ದೇವಸ್ಥಾನದ ಬಳಿ 1.43 ಕೋಟಿ ರೂ. ಬ್ರಹ್ಮೇಶ್ವರ ಬಳಿ ಹಾಗೂ 1.5 ಕೋಟಿ ರೂ. ಹೊಸನಗರ ಬಳಿ ನಿರ್ಮಾಣವಾಗಲಿರುವ ಸೇತುವೆಗಳಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿ, ಹೊಸನಗರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು 310 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಹಾಗೂ 7 ಕಿ.ಮೀ. ಅಂತರದ ಚಂಡಿಕಾವನ ಬಾಳೆಬರೆ ಘಾಟಿ ರಸ್ತೆಯನ್ನು ಸಹ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಹಣಕ್ಕಿಂತ ಹೃದಯವಂತಿಕೆ ಅಗತ್ಯವಿದ್ದು ಹೃದಯವಂತಿಕೆ ಹೊಂದಿದ್ದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಇದಕ್ಕೆ ಉದಾಹರಣೆ ಸಿಗಂದೂರು ಕಳಸವಳ್ಳಿ ಸೇತುವೆಯಾಗಿದೆ 2.15 ಕಿ.ಮೀ. ಉದ್ದದ ಸೇತುವೆ ದೇಶದ ಅತಿದೊಡ್ಡ ಸೇತುವೆಗಳಲ್ಲಿ ಎರಡನೆಯದಾಗಿದೆ.
ಸದ್ಯದಲ್ಲೇ ಬೆಕ್ಕೋಡಿ – ಸುತ್ತ ಸೇತುವೆಗಳಿಗೆ ಶಂಕುಸ್ಥಾಪನೆ ಮಾಡುವ ಇಂಗಿತ ವ್ಯಕ್ತಪಡಿಸಿದ ಸಂಸದರು, ಮುಂದಿನ ದಿನಗಳಲ್ಲಿ ಬಿಲ್ಸಾಗರ ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಭರವಸೆ ನೀಡಿದರು.
ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಮಾತನಾಡುವುದೇ ಸಾಧನೆ ಆಗಬಾರದು ನಮ್ಮ ಸಾಧನೆಗಳು ಮಾತನಾಡಬೇಕು ಇದಕ್ಕೆ ನಿದರ್ಶನ ಯುವ ಸಂಸದ ರಾಘವೇಂದ್ರರವರು, ಮಲೆನಾಡಿನಲ್ಲಿ ಗ್ರಾಮೀಣ ರಸ್ತೆ ಸೇತುವೆ ಶಾಲೆಗಳಿಗೆ ಅನುದಾನಗಳ ಅಗತ್ಯವಿದೆ. ಗ್ರಾಮೀಣ ಪ್ರದೇಶದ ಜನರ ಬಳಿ ಅದರಲ್ಲಿಯೂ ವಿದ್ಯಾರ್ಥಿಗಳ ಬಳಿ ಮೊಬೈಲ್ ಗಳಿದ್ದರೆ ಟವರ್ ಸಂಪರ್ಕವೇ ಇರುವುದಿಲ್ಲ. ಮಲೆನಾಡಿನ ದೊಡ್ಡ ಸಮಸ್ಯೆ ಟವರ್ ಸಂಪರ್ಕದ ಆಗಿದೆ. ಈ ಬಗ್ಗೆ ಬದಲಿ ವ್ಯವಸ್ಥೆಯ ಅಗತ್ಯತೆಯ ಬಗ್ಗೆ ಸಂಸದರ ಗಮನಸೆಳೆದರು.
ಈ ಸಂಧರ್ಭದಲ್ಲಿ ತಾಪಂ ಅಧ್ಯಕ್ಷ ಆಲವಳ್ಳಿ ವೀರೇಶ್, ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಆರ್ ದೇವಾನಂದ್, ಜಿಲ್ಲಾ ಬಿಜೆಪಿ ಮುಖಂಡರಾದ ಉಮೇಶ್ ಕಂಚುಗಾರ್, ಹೆಚ್.ಬಿ ಕಲ್ಯಾಣಪ್ಪಗೌಡ, ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಕಣಿವೆಬಾಗಿಲು ಸುಬ್ರಹ್ಮಣ್ಯ, ತಾಪಂ ಸದಸ್ಯರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪಿಡಿಒ ಗೋಪಾಲ್ ಸ್ವಾಗತಿಸಿದರು. ಕೆ.ವಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.