ಹೊಸನಗರ : ದಂತ ಸಮಸ್ಯೆ ಬಗ್ಗೆ ಕಾಳಜಿವಹಿಸುವವರು ತೀರಾ ವಿರಳ/ ಹಲ್ಲುಗಳು ಮನುಷ್ಯ ದೇಹದ ಪ್ರಮುಖ ಅಂಗವಾಗಿದೆ ಹಲ್ಲುಗಳ ಬಗ್ಗೆ ನಿರ್ಲಕ್ಷ್ಯ ಸಲ್ಲ ಎಂದು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಕ್ಕಳ ತಜ್ಞರು ಆದ ಡಾ. ಶಾಂತರಾಜ್ ಎಚ್ಚರಿಕೆ ನೀಡಿದರು.

ಅವರು ಇಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಾಹಿತಿ ಸಭಾಂಗಣದಲ್ಲಿ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯವಿದೆ. ಅದರಲ್ಲೂ ಗರ್ಭಿಣಿಯರಿಗೆ ಹಲ್ಲುಗಳ ರಕ್ಷಣೆ ತುಂಬಾ ಅಗತ್ಯ. ಗರ್ಭಿಣಿಯರಿಗೆ ಹಲ್ಲುಗಳ ಸಮಸ್ಯೆಯಿದ್ದರೆ ಅದು ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುವ ಕಾರಣ ಗರ್ಭಿಣಿಯರು ಹಲ್ಲುಗಳ ಬಗ್ಗೆ ತೀವ್ರ ಕಾಳಜಿ ವಹಿಸಬೇಕೆಂದು ಕರೆ ನೀಡಿದರು. ಉದಾಸೀನತೆ ಹಾಗೂ ಮಾಹಿತಿ ಕೊರತೆಯಿಂದ ಹಲ್ಲಿನ ಬಗ್ಗೆ ನಿರ್ಲಕ್ಷ್ಯಿಸುವುದು ಸಲ್ಲ ಎಂದರು.

ಜಿಲ್ಲಾ ದಂತ ನೋಡಲ್ ಅಧಿಕಾರಿ ಹಾಗೂ ತಜ್ಞದಂತ ವೈದ್ಯರಾದ ಡಾ. ಗುರುರಾಜ್ ರವರು ಮಾಹಿತಿ ನೀಡಿ ಹಲ್ಲು ನೋವು ಬಂದಾಕ್ಷಣ ಹಲ್ಲನ್ನು ಕೀಳಿಸುವ ಗೋಜಿಗೆ ಹೋಗದೆ ಅದರ ತಪಾಸಣೆ ಹಾಗೂ ಚಿಕಿತ್ಸೆಗೆ ಮುಂದಾಗಬೇಕು ಹಾಲು ಹಲ್ಲು ಹಾಗೂ ಉಬ್ಬುಹಲ್ಲು ಸಮಸ್ಯೆ ಇರುವ ಮಕ್ಕಳಿಗೆ 13 – 14 ವರ್ಷದ ಒಳಗೆ ಚಿಕಿತ್ಸೆ ನೀಡಬೇಕೆಂದರು. ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಂತವೈದ್ಯರಗಳ ಸೌಲಭ್ಯಗಳಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಹೊಸನಗರ ಸಾರ್ವಜನಿಕ ಆಸ್ಪತ್ರೆಯ ದಂತವೈದ್ಯೆ ಡಾ. ಆತ್ಮ ಶಿರಾಳಕೊಪ್ಪ, ಆರೋಗ್ಯ ಕೇಂದ್ರದ ದಂತವೈದ್ಯೆ ಡಾ.ಪ್ರತಿಮ ಕನ್ನಂಗಿ, ಆರೋಗ್ಯ ಕೇಂದ್ರದ ದಂತವೈದ್ಯ ಡಾ. ನಾಗರಾಜ ಭಾರ್ಗವ್ ಹೊಳೆಹೊನ್ನೂರು, ಆರೋಗ್ಯ ಕೇಂದ್ರದ ದಂತವೈದ್ಯ ಡಾ. ಮೋಹನ್ ಹೊಳಲೂರು, ಆರೋಗ್ಯ ಕೇಂದ್ರ ದಂತವೈದ್ಯ ಡಾ. ಸತೀಶ್, ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಗಜೇಂದ್ರ ಮಹಾಬಲೇಶ್ವರ ಜೋಯ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿವರ್ಗದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
