ಮಲೆನಾಡಿನಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ, ಕಾವೇರದ ಚುನಾವಣಾ ರಣಕಣ

0 203

ರಿಪ್ಪನ್‌ಪೇಟೆ: ಒಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಮೇಲ್ಮಟ್ಟದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆಂಬ ಕೂಗು ಕೇಳುತ್ತಿರುವುದು ವಾಸ್ತವ್ಯದಲ್ಲಿ ಸತ್ಯವಾಗಿ ಮತದಾರರಲ್ಲಿ ಮೂಡುವಂತಾಗಿರುವುದು ನಿಜವಾಗಿದೆ ಎಂಬುದಕ್ಕೆ ಹೊರತಾಗಿಲ್ಲ.

ಹೌದು, ಬರುವ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿ ಪ್ರಚಾರ ಕಾರ್ಯ ಸಹ ಜೋರಾಗಿಯೇ ಸಾಗಿತ್ತಾದರೂ ಕೂಡಾ ಎರಡು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಲ್ಲದವರಂತೆ ಮಾಡಿದೆ ಪ್ರಕೃತಿ. ಒಂದು ಕಡೆ ಮಲೆನಾಡಿನಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ನಷ್ಟು ತಲುಪಿದ ತಾಪಮಾನ. ಯಮಪಾಪದ ಬಿಸಿಲು ಈ ನಡುವೆ ಚುನಾವಣೆ ಕಾವೇರುವುದಾದರೂ ಹೇಗೆ? ಮೊಬೈಲ್, ಯುಟ್ಯೂಬ್ ಹಾಗೂ ದೂರದರ್ಶನದಂತಹ ಸಮೀಕ್ಷೆಯನ್ನಾದರಿಸಿ ಗ್ರಾಮೀಣ ಭಾಗದ ಮತದಾರರು ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಒಂದು ಕಡೆಯಲ್ಲಿ ಅಭಿವೃದ್ಧಿಯ ಹರಿಕಾರ ಎಂದೇ ಬಿಂಬಿತರಾದ ಬಿ.ವೈ.ರಾಘವೇಂದ್ರ ಕಾರ್ಯವೈಖರಿ ಮತದಾರರಲ್ಲಿ ಮನೆ ಮಾತಾಗಿದ್ದರೂ ಕೂಡಾ ಅವರಿಗೆ ಅಡ್ಡಗಾಲಾಗಿ ಸ್ವಪಕ್ಷದ ಮಗನಿಗೆ ಟಿಕೆಟ್ ಸಿಗದೆ ವಂಚಿತಗೊಂಡು ಅಸಮದಾನದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿರುವ ಈಶ್ವರಪ್ಪ ಇನ್ನೂ ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಈ ಬಾರಿ ನಮಗೆ ಗೆಲುವು ಎಂದು ಬೀಗುವ ಕಾಂಗ್ರೆಸ್ ಪಕ್ಷದ ನಾಯಕರು ಕಾರ್ಯಕರ್ತರು ಪಟ್ಟಣದಲ್ಲಿ ರೋಡ್ ಷೋ ಮಾಡಿ ಮತಗಳಿಸುವ ಹುನ್ನಾರದಲ್ಲಿದ್ದು ಮೋದಿ ವರ್ಚಸ್ಸಿನಲ್ಲಿ ನಮ್ಮ ಬಿಜೆಪಿ ಗೆಲುತ್ತದೆಂಬ ಅಹಂಕಾರದಲ್ಲಿ ಗ್ರಾಮಾಂತರ ಪ್ರದೇಶದ ಮತದಾರರ ಮನೆ ಬಾಗಿಲು ಮುಟ್ಟದೆ ಎರಡು ಪಕ್ಷದ ಕಾರ್ಯಕರ್ತರು ಮುಖಂಡರು ಟಾಟಾ ಮಾಡಿಕೊಂಡು ಹೋಗುತ್ತಿದ್ದಾರೆಂದು ಮತದಾರರು ತಮ್ಮ ಅಂತರಾಳದ ಮಾತನ್ನು ಮಾಧ್ಯಮದವರ ಮುಂದೆ ಬಿಚ್ಚಿಟ್ಟಿದ್ದು ಹೀಗೆ.

ಕಾಂಗ್ರೆಸ್ ಸಭೆಯಲ್ಲಿ ಈ ಹಿಂದಿನ ಶಾಸಕರು ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ತಂದಿಲ್ಲ ಮುಳುಗಡೆ ಸಂತ್ರಸ್ತರ ಬಗ್ಗೆ ಶಾಸನ ಸಭೆಯಲ್ಲಿ ಚಕಾರ ಎತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸುತ್ತಿದ್ದು ಜಲಜೀವನ್ ಮಿಷನ್ ಕಾಮಗಾರಿಗೆ ನಮ್ಮ ರಾಜ್ಯ ಸರ್ಕಾರದಿಂದ 427 ಕೋಟಿ ರೂ‌. ಅನುದಾನ ಬಿಡುಗಡೆ ಮಾಡುವುದರೊಂದಿಗೆ ಹೊಸನಗರ ತಾಲ್ಲೂಕಿನ ನೂರಾರು ಗ್ರಾಮಗಳಿಗೆ ಚಕ್ರಾನಗರ ಡ್ಯಾಂ ನಿಂದ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದೆಂದು ಹೇಳಿ ಹೊಸನಗರ ತಾಲ್ಲೂಕು ಕೇಂದ್ರದಲ್ಲಿ ಇತ್ತೀಚೆಗೆ ಶಿಕ್ಷಣ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದಾರೆಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಾ ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಕಾಮಗಾರಿಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನುದಾನ ಕೊಟ್ಟು ಮಾಡುತ್ತಿರುವುದಾಗಿ ಹೇಳಿಕೆ ನೀಡುತ್ತಿದ್ದರೂ ಕೂಡಾ ವಿರೋಧ ಪಕ್ಷ ಬಿಜೆಪಿಯವರು ಏನೂ ಪ್ರತಿಕ್ರಿಯೆ ನೀಡದೇ ಮತದಾರರಿಗೆ ಮನವರಿಕೆ ಮಾಡದೇ ಇರುವುದರ ಹಿಂದಿನ ಒಳಮರ್ಮ ಏನು ಎಂಬುದು ಮಾತ್ರ ಮತದಾರರಲ್ಲಿ ಯಕ್ಷ ಪ್ರಶ್ನೆಯಾಗಿದೆ.

ಒಟ್ಟಾರೆಯಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚುನಾವಣೆ ನಡೆಯುತ್ತದೆ ಆದರೆ ಗ್ರಾಮೀಣ ಪ್ರದೇಶದ ಮತದಾರರ ಮನ ಗೆಲ್ಲುವತ್ತಾ ಇನ್ನು ಮುಂದಾಗದಿರುವುದು ಮಾತ್ರ ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣೆ ಬಂತೆಂದರೆ ಸಾಕು ಇಸ್ತ್ರಿ ಮಾಡಿದ ಖಡಕ್ ಬಿಳಿ ಖಾದಿ ಬಟ್ಟೆ ತೊಟ್ಟು ಮುಂದೆ ಬರುವಂತಹ ನಾಯಕರುಗಳಿಗೆ ಈ ಬಾರಿ ಬಿಸಿಲ ತಾಪ ಕೈಕೊಟ್ಟಂತೆ ಕಾಣುತ್ತಿದೆಯೋ ಅಥವಾ ಸಂಪನ್ಮೂಲದ ಕೊರತೆಯೋ ಏನೋ. ಯಾವ ಪಕ್ಷದ ನಾಯಕರು ಹಳ್ಳಿಗಳ ಕಡೆ ಮುಖ ಮಾಡದೇ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಂತೆ ಕಾಣುತ್ತಿದೆ.

ಕಾಂಗ್ರೆಸ್‌ನವರಿಗೆ ಗ್ಯಾರಂಟಿ ಜೊತೆ ಚಿತ್ರ ನಟ ಶಿವರಾಜ್‌ಕುಮಾರ್ ಹೆಸರಿನಲ್ಲಿ ಗೆಲುವು ನಮ್ಮದೇ ಎಂಬ ಭ್ರಮೆ. ಇನ್ನೂ ಬಿಜೆಪಿಯವರಿಗೆ ಮೋದಿ, ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರಪ ಅಭಿವೃದ್ಧಿಯೇ ನಮ್ಮ ಗೆಲುವು ಎನ್ನುವ ಭ್ರಮಾ ಲೋಕದಲ್ಲಿ ಗ್ರಾಮೀಣ ಮತದಾರರನ್ನು ಮರೆತಂತೆ ಕಾಣುತ್ತಿರುವುದಂತು ನಿಜವಾಗಿದೆ.

Leave A Reply

Your email address will not be published.

error: Content is protected !!