ಒಡವೆ ಆಸೆಗಾಗಿ ವೃದ್ಧೆ ಕೊಲೆಗೈದು ಕೆರೆಗೆ ಶವ ಎಸೆದಿದ್ದ ಹಂತಕರು ಅರೆಸ್ಟ್ ಆಗಿದ್ಹೇಗೆ…?

0 2,821

ರಿಪ್ಪನ್‌ಪೇಟೆ : ಹುಂಚ – ಕೋಡೂರು ಸಂಪರ್ಕಿಸುವ ರಸ್ತೆಯಲ್ಲಿರುವ ಹುಂಚದ ಮುತ್ತಿನಕೆರೆಯಲ್ಲಿ ಮಾ.18 ಮಧ್ಯಾಹ್ನ ಅಪರಿಚಿತ ವೃದ್ಧೆಯ ಶವವೊಂದು ಬೇಲಿ ಮಾಡಲು ಬಳಸುವ ಕಲ್ಲುಕಂಬ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಶವ ಮೃತಪಟ್ಟು ಎರಡ್ಮೂರು ದಿನವಾಗಿದ್ದರಿಂದ ಕೊಳೆತ ಸ್ಥಿತಿಯಲ್ಲಿತ್ತು. ವಿಷಯ ತಿಳಿಯುತ್ತಿದ್ದಂತೆ ರಿಪ್ಪನ್‌ಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ರವಾನಿಸಿದ್ದರು.

ಮೃತೆ ಜಯಮ್ಮ

ಶವದ ಗುರುತು ಪತ್ತೆ

ವಾರಸುದಾರರ ಪತ್ತೆಗಾಗಿ ಮೃತದೇಹವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಮಾ. 20 ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸಿದ್ದಪ್ಪ ಈತ ಇದು ತನ್ನ ಆತ್ತೆಯವರಾದ ಹೊಳಲೂರಿನ ಜಯಮ್ಮ (62) ಶವ ಎಂದು ಗುರುತಿಸಿದ್ದರು. ಬಳಿಕ ಮೃತಪಟ್ಟವರ ಕುರಿತು ಪೊಲೀಸರಿಗೆ ತಿಳಿದು ನಂತರ ರಿಪ್ಪನ್‌ಪೇಟೆ ಪೊಲೀಸರು ಕಲಂ 201, 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಈ ಕುರಿತು ತನಿಖೆ ಆರಂಭಿಸುತ್ತಾರೆ.

ತನಿಖೆ ಚುರುಕುಗೊಳಿಸಿದ ಪೊಲೀಸರು :

ಹೊಳಲೂರಿನಿಂದ ವೃದ್ಧೆಯು ಹೊಸನಗರ ತಾಲೂಕಿನ ಹುಂಚಕ್ಕೆ ಬಂದಿದ್ಯಾಕೆ ? ಅಷ್ಟು ದೂರದಿಂದ ಬಂದು ವೃದ್ದೆಯ ಶವ ಕೆರೆಯಲ್ಲಿ ಎಸೆದಿದ್ದೇಕೆ ?, ಹೀಗೆ ಹತ್ತು ಹಲವು ಪ್ರಶ್ನೆ, ಸಂಶಯಗಳೂ ಹುಟ್ಟಿಕೊಳ್ಳಲಾರಂಭಿಸಿದ್ದು, ಈ ಹಿನ್ನಲೆ ರಿಪ್ಪನ್‌ಪೇಟೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ತನಿಖೆ ವೇಳೆ ವೃದ್ಧೆಯನ್ನು ಅವಳ ಊರಿನಿಂದ ಕೆರೆ ಬಳಿ ಕರೆತಂದು ಮರ್ಡರ್ ಮಾಡಿರುವುದು ಗೊತ್ತಾಗುತ್ತದೆ.

ಇನ್ನು ಈ ಪ್ರಕರಣವನ್ನು ಕೈಗೆತ್ತಿಕೊಂಡ ಹೊಸನಗರ ಸಿಪಿಐ ಗುರಣ್ಣ ಹೆಬ್ಬಾಳ್ ಹಾಗೂ ಪಿಎಸ್‌ಐ ನಿಂಗರಾಜ್ ಕೆ ವೈ ನೇತೃತ್ವದ ತಂಡ ಕೊಲೆ ಪ್ರಕರಣ ಬೇಧಿಸಲು ಮುಂದಾಗಿದ್ದರು.

ಈ ವೃದ್ದೆಯ ಮಗಳು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆ. ಇಬ್ಬರು ಮೊಮ್ಮಕ್ಕಳಿದ್ದಾರೆ. ಈ ಮೊಮ್ಕಕ್ಕಳಿಗಾಗಿ ವೃದ್ಧೆಯು ಒಂದಿಷ್ಟು ಹಣ ಮತ್ತು ಚಿನ್ನಾಭರಣ ಕೂಡಿಸಿಟ್ಟಿದ್ದಳು. ಅಜ್ಜಿಯು ಆಶ್ರಮ, ಆಸ್ಪತ್ರೆ, ಬಟ್ಟೆಯಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ಆಶ್ರಮದಲ್ಲಿ ಸೀತಮ್ಮ ಎನ್ನುವ ವೃದ್ಧೆಯ ಜೊತೆಗೆ ಕೆಲಸ ಮಾಡಿಕೊಂಡಿದ್ದಳು. ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ನಂತರ ಸೀತಮ್ಮಳ ಸಂಬಂಧಿ ಕೋಡೂರಿನ ಯಳಗಲ್ಲು ನಿವಾಸಿ ಮಯೂರ ಭಟ್ (24) ಎಂಬಾತ ಹೊಳಲೂರಿಗೆ ಬಂದು ಹೋಗುತ್ತಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಾರೆ.

ಸೈಟ್ ಆಸೆ ತೋರಿಸಿದ ಹಂತಕರು !
ಬಳಿಕ ಜಯಮ್ಮಳ ಪರಿಚಯ ಮಯೂರನಿಗೆ ಆಗಿ, ಜಯಮ್ಮಳ ಬಳಿ 80 ಸಾವಿರಕ್ಕೂ ಅಧಿಕ ಹಣ ಕೈ ಸಾಲ ಮಯೂರು ಪಡೆದಿರುವ ಮಾಹಿತಿ ದೊರೆಯುತ್ತದೆ. ಈತ ಪಡೆದ ಸಾಲವನ್ನು ವಾಪಸ್ ತಿರುಗಿಸಲು ವಿಳಂಬ ಮಾಡಿದ್ದನು. ವೃದ್ಧೆಯು ಪದೇ ಪದೇ ಹಣ ಕೇಳಿದಾಗ ಈತನಿಗೆ ಮಾನಸಿಕ ಕಿರುಕುಳವಾಗುತ್ತಿತ್ತು.

ಇದರಿಂದ ಬೇಸತ್ತು ಮತ್ತು ಆಕೆಯ ಬಳಿ ಹಣ ಹಾಗೂ ಬಂಗಾರ ಇರುಬಹುದೆಂದು ಊಹಿಸಿ. ಒಂದು ವೇಳೆ ಈಕೆಯನ್ನು ಕೊಲೆ ಮಾಡಿದರೆ ಸಾಲವನ್ನು ಹಿಂದಿರುಗಿಸುವುದು ತಪ್ಪುತ್ತದೆ ಮತ್ತು ಆಕೆಯ ಬಳಿ ಇರುವ ಹಣ ಹಾಗೂ ಬಂಗಾರವೂ ಸಿಗಬಹುದೆಂಬ ಆಸೆಯಿಂದ ತನ್ನ ಸ್ನೇಹಿತನಾದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಜೊತೆ ಸೇರಿ ರಿಪ್ಪನ್‌ಪೇಟೆಯಲ್ಲಿ ಆಕೆಗೆ ಸೈಟ್ ಕೊಡಿಸುವುದಾಗಿ ನಂಬಿಸಿ ಮಾ. 16 ರಂದು ಜಯಮ್ಮನನ್ನು ರಿಪ್ಪನ್‌ಪೇಟೆಗೆ ಭರಮಾಡಿಕೊಂಡು, ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಬಾಳೂರು ಗ್ರಾಮದ ಹತ್ತಿರ ಕರೆದು ಕೊಂಡು ಹೋಗಿ ಕಾರಿನಲ್ಲಿ ಸಂಜೆ 5:30 ರ ಸುಮಾರಿಗೆ ಹಿಂಬದಿಯಿಂದ ಜಯಮ್ಮನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ, ಅದೇ ದಿನ ರಾತ್ರಿ 10:45ರ ಸುಮಾರಿಗೆ ಮೃತ ದೇಹವನ್ನು ಕಲ್ಲಿನ ಬೇಲಿ ಕಂಬಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು, ಹುಂಚದ ಮುತ್ತಿನ ಕೆರೆಯಲಿ ಎಸೆದು ಹೋಗಿರುವುದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ನಂತರ ಆರೋಪಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಲಾದ ವ್ಯಾಗನರ್ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಉಲ್ಟಾ ಆದ ಪ್ಲ್ಯಾನ್ !
ಆದರೆ, ಅಜ್ಜಿಯ ಬಳಿ ಚಿನ್ನಾಭರಣ ಮತ್ತು ಹಣ ದೋಚುವ ಅವರ ಪ್ಲ್ಯಾನ್ ಆ ದಿನ ಉಲ್ಟಾ ಆಗಿತ್ತು. ಹೌದು, ಅಜ್ಜಿಯು ಬರುವಾಗ ಚಿನ್ನಾಭರಣ ಮತ್ತು ಹಣ ತಂದಿರಲಿಲ್ಲ. ಮೈಮೇಲೆ ಅಲ್ಪಸ್ವಲ್ಪ ಚಿನ್ನಾಭರಣವಿತ್ತು. ಕೊಲೆ ಮಾಡಿದ ಬಳಿಕ ಇಬ್ಬರು ಸೇರಿ ಮೃತಪಟ್ಟ ವೃದ್ದೆಯ ಶವವನ್ನು ದೇಹಕ್ಕೆ ಬೇಲಿ ಕಲ್ಲು ಕಟ್ಟಿ ಹುಂಚದ ಮುತ್ತಿನಕೆರೆಗೆ ಹಾಕಿ ಇಬ್ಬರು ಎಸ್ಕೇಪ್ ಆಗಿದ್ದರು. ಆದರೆ, ಮೂರ್ನಾಲ್ಕು ದಿನದ ಬಳಿಕ ಅಜ್ಜಿಯ ಶವ ಕಂಬ ಸಮೇತ ನೀರಿನಿಂದ ಮೇಲಕ್ಕೆ ಬಂದಿದೆ. ಹೀಗೆ ರಿಪ್ಪನ್‌ಪೇಟೆ ಪೊಲೀಸರಿಗೆ ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ.

ಪೊಲೀಸರ ಜೊತೆಗೆ ಇದ್ದ ಕೊಲೆಗಾರ !
ಇನ್ನು ಮಯೂರ ಕೊಲೆ ಮಾಡಿದ ಬಳಿಕ ಗ್ರಾಮದಲ್ಲಿ ಮತ್ತು ಪೊಲೀಸರು ಜೊತೆಗೆ ಇದ್ದು ಹೈಡ್ರಾಮ ಮಾಡಿದ್ದನು. ದೃಶ್ಯಂ ಚಿತ್ರದಂತೆ ಮಯೂರ ಎಲ್ಲ ನಾಟಕವಾಡಿದ್ದನು. ಇದೀಗ ರಿಪ್ಪನ್‌ಪೇಟೆ ಪೊಲೀಸರು ಅಜ್ಜಿಯ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಹಂತಕರು ಕೊನೆಗೂ ಮಾವನ ಮನೆ ಸೇರಿದ್ದಾರೆ.

Leave A Reply

Your email address will not be published.

error: Content is protected !!