ಸಂಸ್ಕಾರವಿಲ್ಲದ ವಿದ್ಯೆ ಉಪಯೋಗಕ್ಕೆ ಬಾರದು ; ಕಲಗೋಡು ರತ್ನಾಕರ್

0 544

ರಿಪ್ಪನ್‌ಪೇಟೆ : ಸಂಸ್ಕಾರವಿಲ್ಲದ ವಿದ್ಯೆ ಉಪಯೋಗಕ್ಕೆ ಬಾರದೆಂದು ಜಿಪಂ ಮಾಜಿ ಅಧ್ಯಕ್ಷ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಹೇಳಿದರು.

ಕೋಡೂರು ಗ್ರಾಮದ ಬ್ಲಾಸಂ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಜೀವನದ ಮೌಲ್ಯಗಳನ್ನು ಬೆಳೆಸುವ ಸಂಸ್ಕಾರಯುತ ಶಿಕ್ಷಣವೇ ವ್ಯಕ್ತಿತ್ವ ನಿಮಾರ್ಣಕ್ಕೆ ಭದ್ರ ಅಡಿಪಾಯ. ವಿದ್ಯೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಬೆಳೆಯಬೇಕು. ಶಿಕ್ಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ ಎಂದರು.

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಯುತ ಹಾಗೂ ಸಂಸ್ಕಾರಯುತ ಶಿಕ್ಷಣದ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ವಾತಾವರಣ ಶಾಲೆಗಳಲ್ಲಿ ಇರಬೇಕು ಎಂದ ಅವರು, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಇವೆರಡರ ಮಧ್ಯೆ ನಮ್ಮ ಸಾಧನೆ ಬಹಳ ಮುಖ್ಯ. ಹಿರಿಯರು ಹೇಳುವಂತೆ ಸತ್ತು ಬದುಕಬೇಕು ಬದುಕಿಯೂ ಸತ್ತಂತಿರಬಾರದು. ಸತ್ತ ಮೇಲು ನಮ್ಮ ಹೆಸರು ಉಳಿದರೆ ಮಾತ್ರ ಆ ಬದುಕಿಗೊಂದು ಸಾರ್ಥಕತೆ ದೊರಕುತ್ತದೆ ಎಂದು ಹೇಳಿ, ಆಸ್ತಿಯ ಕಡೆ ಹೆಚ್ಚು ಗಮನಕೊಡದೆ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಕೋಡೂರಿನಲ್ಲಿ ಈಗಾಗಲೇ 28 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಶಾಲೆ ಪ್ರಾರಂಭವಾಗಿದೆ. ಇನ್ನೂ ಕೆಪಿಎಸ್ ಶಾಲೆ ಹಾಗೂ ಹೊಸನಗರ ತಾಲೂಕಿನ ನಾಲ್ಕು ಹೋಬಳಿಗೆ ಒಂದೊಂದರಂತೆ ಅಂಬೇಡ್ಕರ್ ಶಾಲೆ ತೆರೆಯುವ ಚಿಂತನೆ ನಡೆಯುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿ, ಮುಂದಿನ ದಿನಗಳಲ್ಲಿ ಹೊಸನಗರವನ್ನ ಹೊಸ ನಗರವನ್ನಾಗಿ ನಾವೆಲ್ಲರೂ ಸೇರಿ ಮಾಡೋಣ ಎಂದರು‌.

ಪ್ರಾಸ್ತಾವಿಕ ಮಾತನಾಡಿದ ಬ್ಲಾಸಂ ಸಂಸ್ಥೆಯ ಮುಖ್ಯಸ್ಥ ಸುಧಾಕರ, ಆಂಗ್ಲ ಮಾಧ್ಯಮದಲ್ಲಿ ಸರ್ವಾಂಗೀಣ ಬೆಳವಣಿಗೆಗೆ ಈ ವಿದ್ಯಾಸಂಸ್ಥೆ ಪ್ರಾರಂಭವಾಗಿದೆ. ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ನಮ್ಮ ಗುರಿಯಾಗಿದೆ. ಸ್ವಾಮಿ ವಿವೇಕಾನಂದರ ನುಡಿಯಂತೆ ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳಾಗೋಣ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಮೂಲೆಗದ್ದೆ ಶ್ರೀ ಅಭಿನವ ಚನ್ನಬಸಪ್ಪ ಸ್ವಾಮೀಜಿಗಳು, ತಾಯಿ ಸಂಸ್ಕಾರಭರಿತ ಶಿಕ್ಷಣ ನೀಡಿದರೆ ಆ ಮಕ್ಕಳು ಉತ್ತಮರಾಗಿ ಬೆಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಆರದಿರುವ ದೀಪ ಎಂದರೆ ಅದು ವಿದ್ಯಾ ಸಂಸ್ಥೆ ಮಾತ್ರ. ಕುವೆಂಪು, ಅಕ್ಕಮಹಾದೇವಿ, ಅಲ್ಲಮಪ್ರಭು ಅಂತಹ ಮಹಾನ್ ವ್ಯಕ್ತಿಗಳು ಜನಿಸಿದ ಹೆಮ್ಮೆಯ ಜಿಲ್ಲೆ ನಮ್ಮದು. ವಿವೇಕಾನಂದರಂತೆ ಸಮಾಜ ಕಟ್ಟುವ ಕೆಲಸ ಮಾಡೋಣ. ಬಾಳು ಹಸನಾಗಲು ಮೊದಲು ನಮ್ಮಲ್ಲಿರುವ ಹೊಟ್ಟೆಕಿಚ್ಚು ಬಿಡಬೇಕು. ದಾನ ಧರ್ಮಾದಿಗಳನ್ನು ಹೆಚ್ಚು ಹೆಚ್ಚು ಮಾಡಬೇಕು ಎಂದು ಹೇಳಿ, ಬ್ಲಾಸಂ ವಿದ್ಯಾ ಸಂಸ್ಥೆ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಡಾ. ಚಿಕ್ಕಕೊಮಾರಿಗೌಡ ದತ್ತಿ ಪುರಸ್ಕೃತರಾದ ಕಲಗೋಡು ರತ್ನಾಕರ್ ಅವರನ್ನು ವಿದ್ಯಾಸಂಸ್ಥೆ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಇನ್ನೂ ಕೋಡೂರಿನ ಬಿ. ಕೃಷ್ಣಯ್ಯ ಶೆಟ್ಟಿ, ಪ್ರಥಮದರ್ಜೆ ಗುತ್ತಿಗೆದಾರ ಬಿ.ಜಿ. ಜಗದೀಶ್, ನಿವೃತ್ತ ಸೈನಿಕರಾದ ಷಣ್ಮುಖ ಮುಂಬಾರು, ಚೌಡಪ್ಪ ಕೆ.ಪಿ. ಹುಂಚ ರೋಡ್ ಮತ್ತು ಅರಣ್ಯ ರಕ್ಷಕ ಕೆ.ಪಿ. ನರಸಿಂಹ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾದಾಯಿನಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಬಿ.ಜಿ ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ಸುಧಾಕರ್, ಸದಸ್ಯರಾದ ಜಯಪ್ರಕಾಶ್, ಸುನಂದ, ಶೇಖರಪ್ಪ ಎಲ್, ಅನ್ನಪೂರ್ಣ, ರೇಖಾ, ಪ್ರೀತಿ, ಸವಿತಾ, ಮಂಜಪ್ಪ, ಶಿಕ್ಷಣ ಸಂಯೋಜಕ ಪ್ರದೀಪ್, ಶಿಕ್ಷಕ ವೃಂದ, ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು, ಮತ್ತಿತರರು ಇದ್ದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

Leave A Reply

Your email address will not be published.

error: Content is protected !!