ಹೊಸನಗರದ ರಾಮಕೃಷ್ಣ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವ‌ | ಸಂಸ್ಕಾರ ಭರಿತ ಶಿಕ್ಷಣ ಪಡೆದವರು ಜೀವನದಲ್ಲಿ ಯಶಸ್ಸು ನಿಶ್ಚಿತ ; ಮೂಲೆಗದ್ದೆ ಶ್ರೀಗಳು

0 378

ಹೊಸನಗರ : ಜೀವಿತಾವಧಿಯಲ್ಲಿ ಮಾಡಿದ
ಸಮಾಜಮುಖಿ ಕಾರ್ಯಗಳು ಮಾಡಿದವರ ಹೆಸರು ಶಾಶ್ವತವಾಗಿ ಉಳಿದಿರುತ್ತದೆ‌ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಅವರು ಇಲ್ಲಿನ ರಾಮಕೃಷ್ಣ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಮಾತೆ ಶಾರದಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ವಿವೇಕಾನಂದ, ರಾಮಕೃಷ್ಣ ಪರಮಹಂಸರಂತಹ ಕಾಲದಲ್ಲಿ ಗತಿಸಿಹೋದ ಅದೆಷ್ಟೋ ಮಹಾತ್ಮರನ್ನು ನಾವು ಇಂದು ಸಹಾ ನೆನೆಯುತ್ತೇವೆ. ಅವರ ಉಸಿರಿಲ್ಲದಿದ್ದರೂ, ಹೆಸರು ಹಸಿರಾಗಿದೆ. ಅವರ ಬದುಕಿನ ಸಾರ್ಥಕತೆ ಅವರ ಹೆಸರನ್ನು ಅಜರಾಮರಗೊಳಿಸಿದೆ. ಇಂತಹ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ಸಂಸ್ಕಾರ ಭರಿತ ಶಿಕ್ಷಣ ಇಂದಿಗೆ ಅಗತ್ಯವಾಗಿದೆ. ಸುಶಿಕ್ಷಿತರೇ ಇಂದು ತಪ್ಪುದಾರಿ ತುಳಿಯುತ್ತಿರುವುದಕ್ಕೆ ಕಾರಣ ಶಿಕ್ಷಣದಲ್ಲಿ ಮೌಲ್ಯ ಕಡಿಮೆ‌ ಆಗಿರುವುದು. ಹಿಂದೆ ತಂದೆ-ತಾಯಿ-ಗುರು ಹಿರಿಯರ ಮಾತಿಗೆ ಮೌಲ್ಯವಿತ್ತು ವಿದ್ಯಾರ್ಥಿಗಳು ಗುರುಗಳನ್ನು ದೇವರಂತೆ ಕಾಣುತ್ತಿದ್ದರು ಆದರೆ‌ ಕಾಲ ಬದಲಾವಣೆಯಾಗಿದೆ. ಸುದ್ದಿವಾಹಿನಿಯು ಹಿರಿಯರನ್ನು ಗೌರವಿಸುವ ಕಾಲ‌ ದೂರವಾಗಿದೆ ಹಿಂದಿನವರು ಬೆಳಿಗ್ಗೆ ಎದ್ದಾಗ ಮನೆಯ ಮುಂದೆ ಬಳಿದು ತೋಳೆದು ರಂಗೊಲಿ ಹಾಕಿ ದೇವರನ್ನು ಒಳ ಕರೆದುಕೊಳ್ಳುತ್ತಿದ್ದರು ಆದರೆ ಇಂದಿನ ಪೀಳಿಗೆ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿದು ಇನ್ನೊಬ್ಬರಿಗೆ ಮೊಬೈಲ್ ಮೇಸೇಜ್ ಮಾಡಿ ನಂತರ ಮುಖ ತೊಳೆದುಕೊಂಡು ಟೀ, ಕಾಫಿಗೆ ಅಣಿಯಾಗುತ್ತಾರೆ. ತಂದೆ, ತಾಯಿ, ಗುರು ಹಿರಿಯರನ್ನು ಸರಿಯಾಗಿ ಗೌರವಿಸಿ ಆದರಿಸುವ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ ಎಂದರು.

ಶಿವಮೊಗ್ಗದ ಸೋಮಿನಕೊಪ್ಪದ ದೊಡ್ಡಮ್ಮದೇವಿ ದೇವಸ್ಥಾನದ ಗುರೂಜಿ ಶ್ರೀ ಸಿದ್ದಪ್ಪಾಜಿ ಮಾತನಾಡಿ, ವಿದ್ಯೆ ಇಲ್ಲದವರೂ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಕಾರಣ ಅವರ ವಿವೇಕ. ನಮ್ಮ ಉತ್ತಮ ನಡವಳಿಕೆಯಿಂದ ಜಗತ್ತನ್ನೇ ಗೆಲ್ಲಬಹುದು. ದೈವಾನುಗ್ರಹ ಇಲ್ಲದೇ ಮಾಡಿದ ಕೆಲಸಗಳಿಗೆ ನಿರೀಕ್ಷಿತ ಫಲಸಿಗಲಾರದು. ಧ್ಯಾನ, ಪ್ರಾರ್ಥನೆ,‌ ಯೋಗ ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆ ಪಡೆದಿವೆ. ಇವುಗಳನ್ನು ಒಳಗೊಂಡ ಶಿಕ್ಷಣವಷ್ಟೇ ಪರಿಪೂರ್ಣ ಎನಿಸುತ್ತದೆ ಎಂದರು.

ರಾಮಕೃಷ್ಣ ಶಾಲೆಯಲ್ಲಿ ಓದಿ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಿತ್ಯಾನಂದ ಅವರಿಗೆ ಈ ವೇಳೆ ಸನ್ಮಾನಿಸಲಾಯಿತು.

ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ‍್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ವಿದ್ಯಾಲಯದ ಸಂಸ್ಥಾಪಕ ದೇವರಾಜ್, ಪತ್ರಕರ್ತ ನಗರ ರಾಘವೇಂದ್ರ, ಮುಖ್ಯ ಶಿಕ್ಷಕಿ ಸರಿತಾ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!