ಮಕ್ಕಳ ಆರೋಗ್ಯಕ್ಕೆ ಲಸಿಕೆ ಅತಿ ಅವಶ್ಯಕ ; ಚನ್ನಬಸಪ್ಪ

0 36


ಶಿವಮೊಗ್ಗ: ಮಕ್ಕಳ ಆರೋಗ್ಯಕ್ಕೆ ಲಸಿಕೆ ಅತ್ಯವಶ್ಯವಾಗಿದ್ದು, ನಿರ್ಲಕ್ಷ್ಯ ವಹಿಸದೆ ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸಬೇಕೆಂದು ಶಾಸಕರಾದ ಚನ್ನಬಸಪ್ಪ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಹೊಸಮನೆಯ ದೊಡ್ಡಮ್ಮ ದೇವಸ್ಥಾನ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಲಸಿಕೆಗಳು ಅತಿ ಅವಶ್ಯಕವಾಗಿದೆ. ಸಾರ್ವತ್ರಿಕ ಲಸಿಕೆ ಕುರಿತು ಜಾಗೃತಿ ಮೂಡಿಸಬೇಕು. ಆಶಾ-ಅಂಗನವಾಡಿ ಕಾರ್ಯಕರ್ತೆಯರು ಈ ಕೆಲಸವನ್ನು ಮಾಡುತ್ತಿದ್ದಾರೆ. ಅಂಗನವಾಡಿ ಕೇಂದ್ರವಿದ್ದರೆ ಅಲ್ಲಿ ಆರೋಗ್ಯವಂತ ತಾಯಂದಿರು ಇದ್ದಾರೆಂದು ಅರ್ಥ ಎಂದ ಅವರು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.


ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ಸರ್ಕಾರ ತಾಯಂದಿರು ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಅದ್ಭುತವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ತಾಯಿ-ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ನೀಡುವುದು ತನ್ನ ಕರ್ತವ್ಯವೆಂದು ತಿಳಿದು ಸರ್ಕಾರ ಗರ್ಭಾವಸ್ಥೆಯಿಂದಲೇ ತಾಯಿ-ಮಗುವಿಗೆ ಪೌಷ್ಟಿಕ ಆಹಾರದಿಂದ ಹಿಡಿದು ಲಸಿಕೆ ನೀಡುವ ತನಕ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ.


ಹೆಣ್ಣುಮಕ್ಕಳ ಪ್ರಾತಿನಿಧ್ಯ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಬಳಿ ಪ್ರತಿ ಮಗುವಿನ ವಿವರ ಇರಲಿದೆ. ಇಂತಹ ಕಾರ್ಯಕ್ರಗಳ ಕುರಿತು ಜಾಗೃತಿ ಮೂಡಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವೈದ್ಯರ ಪಾತ್ರ ಮಹತ್ತರವಾಗಿದ್ದು ಕೋವಿಡ್ ಸಮಯದಲ್ಲಿ ಜೀವದಾತರಾಗಿ ಕೆಲಸ ಮಾಡಿದ್ದಾರೆ. ಈಗಲೂ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಅವರ ಸೇವೆಯನ್ನು ಶ್ಲಾಘಿಸಿದರು.


ಪಾಲಿಕೆ ವಿರೋಧಪಕ್ಷದ ನಾಯಕಿ ರೇಖಾ ರಂಗನಾಥ ಮಾತನಾಡಿ, ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಒಂದು ಉತ್ತಮ ಕಾರ್ಯಕ್ರಮವಾಗಿದ್ದು ಲಸಿಕೆ ಬಿಟ್ಟು ಹೋದ ಎಲ್ಲ ಮಕ್ಕಳು ಮತ್ತು ಗರ್ಭಿಣಿಯರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಲಸಿಕೆ ಕುರಿತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗೆ ಮಾಹಿತಿ ನೀಡುತ್ತಾರೆ. ಇದರ ಸದುಪಯೋಗ ಪಡೆಯಬೇಕೆಂದರು.


ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ ಮಾತನಾಡಿ, ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.


ತೀವ್ರತರ ಮಿಷನ್ ಇಂದ್ರಧನುಷ್ ಅಭಿಯಾನ 3 ಸುತ್ತಿನಲ್ಲಿ ನಡೆಯಲಿದೆ. 2023 ರ ಆಗಸ್ಟ್ 7 ರಿಂದ 12, ಸೆಪ್ಟೆಂಬರ್ 11 ರಿಂದ 16, ಅಕ್ಟೋಬರ್ 9 ರಿಂದ 14 ನಡೆಯಲಿದೆ. ವಯಸ್ಸಿಗನುಗುಣವಾಗಿ ಲಸಿಕೆ ಪಡೆಯದೆ/ಬಿಟ್ಟು ಹೋದ/ಲಸಿಕೆ ವಂಚಿತರಾದ 0-5ವರ್ಷದೊಳಗಿನ ಮಕ್ಕಳನ್ನು ಮತ್ತು ಬಾಕಿ ಇರುವ ಗರ್ಭಿಣಿ ಸ್ತೀಯರಿಗೆ ಈ ಕಾರ್ಯಕ್ರಮದಡಿ ಸಂಪೂರ್ಣ ಲಸಿಕೆ ನೀಡಲು ಕಾರ್ಯಯೋಜನೆ ರೂಪಿಸಲಾಗಿದೆ. ವಿಶೇಷವಾಗಿ ದಡಾರ-ರುಬೆಲ್ಲಾ ತಡೆಗಟ್ಟುವುದು, ಇತ್ತೀಚೆಗೆ ಸೇರ್ಪಡೆಗೊಂಡ ಪಿಸಿವಿ ಹಾಗೂ 3ನೇ ಡೋಸ್ ಆಗಿ ಸೇರ್ಪಡೆಗೊಂಡ ಐಪಿವಿ ಲಸಿಕಾಕರಣ ಪ್ರಗತಿ, ಡಿಪಿಟಿ, ಬೂಸ್ಟರ್, ಒಪಿವಿ ಲಸಿಕೆ ಪ್ರಗತಿ ಹೆಚ್ಚಿಸಲಾಗುವುದು.
ಜಿಲ್ಲೆಯಲ್ಲಿ 569 ಗರ್ಭಿಣಿಯರು, 2 ರಿಂದ 3ವರ್ಷದೊಳಗಿನ 2653 ಮಕ್ಕಳು, ಮತ್ತು 2 ರಿಂದ 5 ವರ್ಷದೊಳಗಿನ 32 ಮಕ್ಕಳನ್ನು ಲಸಿಕೆಗೆ ಗುರುತಿಸಲಾಗಿದೆ. 464 ಲಿಕಾ ಅಧಿವೇಶನ, 100 ಹೈರಿಸ್ಕ್ ಏರಿಯಾ ಗುರಿತಿಸಲಾಗಿದೆ ಎಂದರು.


ಯು-ವಿನ್ ಪೋರ್ಟಲ್ ಮೂಲಕ ಲಸಿಕೆ ಪಡೆಯುವ ಫಲಾನುಭವಿಗಳು ಆನ್‍ಲೈನ್ ನೋಂದಣಿ ಮಾಡಿಸಿಕೊಳ್ಳಬಹುದು. ಈ ಪೋರ್ಟಲ್ ಮೂಲಕ ಲಸಿಕಾ ಅಧಿವೇಶನ ಬುಕ್ ಮಾಡಿಕೊಳ್ಳಬಹುದು. ಲಸಿಕೆ ಕುರಿತಾಗಿ ಎಸ್‍ಎಂಎಸ್, ಸರ್ಟಿಫಿಕೇಟ್ ಪಡೆಯಬಹುದಾಗಿದ್ದು ಕೋವಿನ್ ರೀತಿಯಲ್ಲಿ ಇದು ಕೆಲಸ ಮಾಡಲಿದೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಮೆಗ್ಗಾನ್ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಕಾರ್ಯಕ್ರಮಾಧಿಕಾರಿಗಳಾದ ಡಾ.ಓ.ಮಲ್ಲಪ್ಪ, ಡಾ.ಮಂಜುನಾಥ ನಾಗಲೀಕರ್, ಡಾ.ಹರ್ಷವರ್ಧನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸಂತೋಷ್ ಕುಮಾರ್, ಸಿಡಿಪಿಓ ಚಂದ್ರಪ್ಪ, ಇತರೆ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಸೂಪರ್‍ವೈಸರ್, ಕಾರ್ಯಕರ್ತೆಯರು, ತಾಯಂದಿರು ಇದ್ದರು.

Leave A Reply

Your email address will not be published.

error: Content is protected !!