ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ | ಶೈಕ್ಷಣಿಕ ಸಾಲಕ್ಕೆ ಹೆಚ್ಚಿನ ಗಮನ ಹರಿಸಲು ಸಂಸದರ ಸೂಚನೆ

0 38


ಶಿವಮೊಗ್ಗ: ಬ್ಯಾಂಕ್‌ಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ನೀಡಿ, ಸಾಲ ಪಡೆಯುವಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬ್ಯಾಂಕುಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿಎಲ್‍ಆರ್‍ ಸಿ) ಮತ್ತು ಡಿಸಿಸಿ ಬ್ಯಾಂಕರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2022-23 ನೇ ಸಾಲಿನಲ್ಲಿ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಕೇವಲ ಶೇ. 8.76 ಪ್ರಗತಿ ಸಾಧಿಸಲಾಗಿದೆ. 466.1 ಕೋಟಿ ಗುರಿಯಲ್ಲಿ 44.81 ಕೋಟಿ ಮಾತ್ರ ಸಾಲ ನೀಡಲಾಗಿದೆ. ಶೈಕ್ಷಣಿಕ ಗುರಿ ಸಾಧಿಸಲು ತೊಡಕಾಗಿರುವ ಅಂಶಗಳ ಕುರಿತು ಬ್ಯಾಂಕುಗಳು ಮತ್ತು ಜಿ.ಪಂ ಸಿಇಓ ಪರಿಶೀಲನೆ ನಡೆಸಬೇಕು. ಬಂದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಹಾಗೂ ಸ್ವಲ್ಪ ಉದಾರತೆಯಿಂದ ನಡೆದುಕೊಂಡಲ್ಲಿ ಹೆಚ್ಚು ಅರ್ಜಿಗಳು ಬರಬಹುದು. ಈ ನಿಟ್ಟಿನಲ್ಲಿ ಕ್ರಮ ವಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ತಿಳಿಸಿದರು.

ವಸತಿ ಯೋಜನೆಗೆ ಸಂಬಂಧಿಸಿದಂತೆ ರೂ.1173.08 ಕೋಟಿ ಗುರಿಗೆ 146.51 ಕೋಟಿ ವೆಚ್ಚ ಮಾಡಿ ಶೇ12.49 ಪ್ರಗತಿ ಸಾಧಿಸಲಾಗಿದೆ. ಈ ವಿಷಯವಾಗಿ ಸಹ ಗಮನ ಹರಿಸಿ, ನಿಗದಿತ ಗುರಿ ಸಾಧಿಸಬೇಕೆಂದರು.
ಪಿಎಂ ಸ್ವನಿಧಿ ಯೋಜನೆಯಡಿ ಮೊದಲನೇ ಹಂತದ ಸಾಲ ರೂ. 10 ಸಾವಿರವನ್ನು 5290 ಫಲಾನುಭವಿಗಳು, ರೂ. 20 ಸಾವಿರವನ್ನು 1882 ಮತ್ತು ರೂ. 50 ಸಾವಿರ ಸಾಲವನ್ನು 173 ಜನರು ಪಡೆದಿದ್ದು, ಹಂತ ಹಂತವಾಗಿ ಫಲಾನುಭವಿಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಸಮತೋಲನವಾಗಿ ಸಾಲವನ್ನು ಫಲಾನುಭವಿಗಳು ತೆಗೆದುಕೊಳ್ಳಲು ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದರು.
ಪ್ರಧಾನಮಂತ್ರಿ ಮುದ್ರಾ ಯೋಜನೆಯ ಶಿಶು, ಕಿಶೋರ್ ಮತ್ತು ತರುಣ್ ಯೋಜನೆ ಸೇರಿದಂತೆ ಒಟ್ಟು 101779 ಖಾತೆಗಳಿದ್ದು ರೂ.87854.88 ಲಕ್ಷ ಸಾಲ ವಿತರಣೆಯಾಗಿದೆ. ಸ್ಟ್ಯಾಂಡ್ ಅಪ್ ಇಂಡಿಯಾದಡಿ ಎಸ್‍ಸಿ/ಎಸ್‍ಟಿ ಮಹಿಳೆಯರಿಗೆ ಕಳೆದ ತ್ರೈಮಾಸಿಕದಲ್ಲಿ 52 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪಿಎಂಜೆಜೆಬಿವೈ ಅಪಘಾತ ವಿಮೆ ಯೋಜನೆಯಡಿ271271 ಫಲಾನುಭವಿಗಳು, ಪಿಎಂಎಸ್‍ಬಿವೈ ಅಡಿಯಲ್ಲಿ 564134 ಮತ್ತು ಪಿಎಂಜನ್‍ಧನ್ ಯೋಜನೆಯಡಿ 7298 ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಹಾಗೂ ಬ್ಯಾಂಕ್ ಪ್ರಸ್ತುತ ನಡೆಸುತ್ತಿರುವ ಸ್ಯಾಚುರೇಷನ್ ಕ್ಯಾಂಪ್‍ಗಳಲ್ಲಿ ಫಲಾನುಭವಿಗಳು ಹೆಚ್ಚು ಸಂಖ್ಯೆಯಲ್ಲಿ ಈ ಸೌಲಭ್ಯಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಪಿಎಂಇಜಿಪಿ(ಪ್ರಧಾನಮಂತ್ರಿ ಉದ್ಯೋಗಸೃಷ್ಟಿ ಕಾರ್ಯಕ್ರಮ) ಯಡಿ ಹೊಸ ಉದ್ಯಮ ಆರಂಭಿಸುವವರಿಗೆ ಬ್ಯಾಂಕುಗಳು ಉತ್ತೇಜನ ನೀಡಬೇಕು. 2022-23 ನೇ ಸಾಲಿನಲ್ಲಿ ಈ ಯೋಜನೆಯಡಿ 180 ಅರ್ಜಿಗಳು ಬಂದಿದ್ದು 75 ಮಂಜೂರಾಗಿವೆ. ಮಂಜೂರಾದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಸೌಲಭ್ಯ ನೀಡಬೇಕೆಂದು ತಿಳಿಸಿದರು. ಹಾಗೂ ಮಹಿಳಾ ಉದ್ಯಮಿಗಳಿಗೆ ದೊರಕಬಹುದಾದ ಯೋಜನೆಗಳು, ಸೌಲಭ್ಯಗಳ ಕುರಿತು ಮುಂದಿನ ತ್ರೈಮಾಸಿಕ ಸಭೆಯಲ್ಲಿ ಮಾಹಿತಿ ತಿಳಿಸುವಂತೆ ಅಧಿಕಾರಿಗಳು ತಿಳಿಸಿದರು.
ಪಾಲಿಕೆ ವಸತಿ ವಿಭಾಗದ ಅಧಿಕಾರಿ ಶಶಿಧರ್ ಮಾತನಾಡಿ, ಗೋವಿಂದಾಪುರ ವಸತಿ ಯೋಜನೆಯಡಿ ಈಗಾಗಲೇ 600 ಮನೆಗಳನ್ನು ಲಾಟರಿ ಮೂಲಕ ಹಂಚಿದ್ದು, ಫಲಾನುಭವಿಗಳಿಗೆ ಬ್ಯಾಂಕ್‍ಗಳಿಂದ ಸಾಲ ಮಂಜೂರಾದಲ್ಲಿ ಮನೆಗೆ ಪ್ರವೇಶಿಸಲು ಸಿದ್ದರಿದ್ದಾರೆ. ಹಾಗೂ ಇನ್ನೂ 600 ಮನೆಗಳು ಸಿದ್ದವಿದ್ದು ಅವರ ಅರ್ಜಿಗಳು ಬ್ಯಾಂಕಿನಲ್ಲಿ ಬಾಕಿ ಇವೆ. ಫಲಾನುಭವಿ ಸಾಲಕ್ಕೆ ಸಂಬಂಧಿಸಿದಂತೆ ಅವರ ವಯಸ್ಸಿನ ಆಧಾರದಲ್ಲಿ ನಿಗದಿತ ಸಾಲ ದೊರೆಯುವಲ್ಲಿ ಕಷ್ಟವಾಗುತ್ತಿದೆ. ಆದ್ದರಿಂದ ಕೋವಾಲೆಂಟ್ ಸಾಲ ನೀಡಿದಲ್ಲಿ ಸಮಸ್ಯೆಗೆ ಪರಿಹಾರ ಒದಗಬಹುದು ಎಂದರು.
ಗೋವಿಂದಾಪುರ ಆಶ್ರಯ ವಸತಿ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು ಮೊದಲ ಹಂತದಲ್ಲಿ 600 ಜನರಿಗೆ ಮನೆಗಳ ವಿತರಣೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಲ ನೀಡುವಲ್ಲಿ ಉದ್ಭವ ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಫಲಾನುಭವಿಗಳಿಗೆ ಸಾಲ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.


ಜಿಲ್ಲೆಯ ಬ್ಯಾಂಕುಗಳ ಸಿಡಿ ಅನುಪಾತ (ಕ್ರೆಡಿಟ್ ಡೆಪೋಸಿಟ್) ಕಳೆದ ಸಾಲಿಗಿಂತ ಶೇ.6 ಹೆಚ್ಚಿರುವುದು ಸಂತಸದ ವಿಚಾರ. ರಾಜ್ಯದಲ್ಲಿ ಟಾಪ್-3 ಸ್ಥಾನಕ್ಕೆ ಬರಲು ಸೂಕ್ತ ತಯಾರಿ ನಡೆಸಬೇಕು. ಬ್ಯಾಂಕುಗಳಲ್ಲಿ ಠೇವಣಿ, ಅಡ್ವಾನ್ಸ್‍ನಲ್ಲಿ ಉತ್ತಮ ಪ್ರಗತಿ ಇದೆ. ಕಡಿಮೆ ಸಿಡಿ ರೇಷಿಯೋ ಇರುವ ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಉತ್ತಮ ಪ್ರಗತಿ ಸಾಧಿಸಬೇಕು.
ಬಿ.ವೈ.ರಾಘವೇಂದ್ರ, ಸಂಸದರು

ಕೆನರಾ ಬ್ಯಾಂಕ್ ಎಜಿಎಂ ವೆಂಕಟರಾಮುಲು ಪ್ರಾಸ್ತಾವಿಕವಾಗಿ ಮಾತನಾಡಿ, ಲೀಡ್ ಬ್ಯಾಂಕ್‍ನಡಿ 325 ಶಾಖೆಗಳಿದ್ದು, 2023 ನೇ ಸಾಲಿನ ಮಾರ್ಚ್ 31 ರವರೆಗೆ 38,149 ಕೋಟಿ ವ್ಯವಹಾರ ನಡೆದಿದೆ. ಕಳೆದ ಬಾರಿ ಜಿಲ್ಲೆಯ ಸಿಡಿ ಅನುಪಾತ ಶೇ.67 ಇದ್ದು ಈ ಬಾರಿ ಶೇ.73 ಕ್ಕೆ ಏರಿಕೆಯಾಗಿದ್ದು ಶೇ.6 ಪ್ರಗತಿಯಾಗಿದೆ.
ಕೃಷಿ ರಂಗದಲ್ಲಿ 2022 ರ ಮಾರ್ಚ್ ರಿಂದ 2023 ರ ಮಾರ್ಚ್‍ವರೆಗೆ ಶೇ.78. ಗುರಿ ಸಾಧಿಸಲಾಗಿದೆ. ಎಂಎಸ್‍ಎಂಇ ಕ್ಷೇತ್ರದಲ್ಲಿ 116.24, ಶಿಕ್ಷಣದಲ್ಲಿ 8.76, ವಸತಿ ಶೇ. 12.49 ಇತರೆ ಆದ್ಯತಾ ವಲಯದಲ್ಲಿ ಶೇ. 13.84, ಒಟ್ಟು ಆದ್ಯತಾ ವಲಯದಲ್ಲಿ ಶೇ73.01 ಸೇರಿದಂತೆ ಎಲ್ಲ ವಲಯಗಳು ಸೇರಿ ಶೇ.78.87 ಪ್ರಗತಿ ಸಾಧಿಸಲಾಗಿದೆ ಎಂದು ವಿವರಣೆ ನೀಡಿದರು.
ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳು ಸಹಕಾರ, ಸಮನ್ವಯತೆ ಸಾಧಿಸಿಕೊಂಡು ಉತ್ತಮ ಪ್ರಗತಿ ಸಾಧಿಸಬೇಕು. ಅರ್ಹರಾದ ಎಲ್ಲ ಫಲಾನುಭವಿಗಳಿಗೆ ಶೀಘ್ರದಲ್ಲಿ ಸೌಲಭ್ಯ ಕೊಡಬೇಕು. ಬ್ಯಾಂಕುಗಳಲ್ಲಿರುವ ಅನ್ಯಭಾಷೆಯವರು ಆದಷ್ಟು ಶೀಘ್ರದಲ್ಲಿ ಕನ್ನಡ ಕಲಿತು ಗ್ರಾಹಕರಿಗೆ ಸಹಕರಿಸಬೇಕು.
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಕೃಷಿ, ಎಂಎಸ್‍ಎಂಇ, ವಸತಿ, ಶಿಕ್ಷಣ, ಆದ್ಯತಾ ವಲಯಗಳಲ್ಲಿ ಸೌಲಭ್ಯ ನೀಡುವಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಬ್ಯಾಂಕ್‌ಗಳು ಮುಂದಿನ ತ್ರೈಮಾಸಿಕದೊಳಗೆ ನಿಗದಿತ ಗುರಿಯನ್ನು ಸಾಧಿಸಬೇಕು. ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಪ್ರಗತಿ ತೀರ ಕಡಿಮೆ ಇದೆ. ದಾಖಲಾತಿಗಳು ಸಮರ್ಪಕವಾಗಿಲ್ಲವೆಂದು ಹೇಳಿ ಅರ್ಜಿ ತಿರಸ್ಕರಿಸುವುದು ಸೂಕ್ತವಲ್ಲ. ನಿಯಮಗಳನ್ನು ಕೊಂಚ ಸಡಿಲಗೊಳಿಸಿ ವಿದ್ಯಾರ್ಥಿಗಳಿಗೆ ಸಾಲ ನೀಡಬೇಕು. ಮತ್ತು ಎಂಎಸ್‍ಎಂಇ ಗುರಿ ಸಾಧನೆ ಕಡೆ ಗಮನ ಹರಿಸಬೇಕು. ಜಿಲ್ಲೆಯಲ್ಲಿ 11 ಸಾವಿರ ಸ್ವಸಹಾಯ ಗುಂಪುಗಳಿದ್ದು, ಮಹಿಳೆಯರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ಗ್ರಾ.ಪಂ ಮಟ್ಟದಲ್ಲಿ ಇಂತಹ ಗುಂಪುಗಳು ಸ್ವಉದ್ಯೋಗಕ್ಕಾಗಿಕೆಲವು ಪ್ರಾಜೆಕ್ಟ್‍ಗಳನ್ನು ಹಾಕಿಕೊಂಡಿದ್ದು, ಬ್ಯಾಂಕುಗಳು ಇವುಗಳನ್ನು ಪರಿಶೀಲಿಸಿ ಸಾಲವನ್ನು ನೀಡಿ ಸಹಕರಿಸಬೇಕೆಂದು ವಿನಂತಿಸಿದರು.


ಆರ್‍ ಬಿಐ ಎಲ್‍ಡಿಓ ಬಿಸ್ವಾಸ್ ಮಾತನಾಡಿ, ಜಿಲ್ಲೆಯ 5 ಬ್ಯಾಂಕುಗಳು ಪ್ರಗತಿಯಲ್ಲಿ ಹಿಂದಿವೆ. ನಿಗದಿತ ಪ್ರಗತಿ ಸಾಧಿಸಲು ಕ್ರಮಗಳನ್ನು ಕೈಗೊಂಡು ಪ್ರಗತಿ ಸಾಧಿಸಬೇಕು. ಎಲ್‍ಡಿಎಂ ಈ ಕುರಿತು ಪರಿಶೀಲಿಸಬೆಕು. ಹಾಗೂ ಪ್ರತಿ ಗ್ರಾಮೀಣ ಬ್ಯಾಂಕುಗಳು ಪ್ರತಿ ತಿಂಗಳು ಎಫ್‍ಎಲ್ ಸಿ ಶಿಬಿರಗಳನ್ನು ಮಾಡಿ ಜನರಿಗೆ ಮಾಹಿತಿ ನೀಡಬೇಕು. ವಿವಿಧ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದರು.
ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನಿಂತ ಪ್ರಾಯೋಜಿತ ಹೊಳಲೂರಿನ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರ ನಿರುದ್ಯೋಗಿಗಳಿಗೆ ತರಬೇತಿ ನೀಡುತ್ತಾ ಉತ್ತಮ ಕಾರ್ಯ ಮಾಡುತ್ತಿದ್ದು, ಇತರೆಡೆಗೂ ತೆರಳಿ ತರಬೇತಿ ನೀಡುವಂತೆ ಸಂಸದರು ಸಲಹೆ ನೀಡಿದರು.
ನಬಾರ್ಡ್ ಡಿಡಿಎಂ ಶರತ್ ಗೌಡ ಮಾತನಾಡಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರ್ ನಾಥ್ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಬ್ಯಾಂಕುಳ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!