ಸ್ವಚ್ಛಂದ ಮನಸ್ಸಿನಿಂದ ಕನ್ನಡ ಸೇವೆಯಲ್ಲಿ ತೊಡಗಿ ; ರಾಜೇಗೌಡ

0 62

ಚಿಕ್ಕಮಗಳೂರು : ದೈನಂದಿನ ಚಟುವಟಿಕೆ ನಡುವೆಯು ಕನ್ನಡ ಕಟ್ಟುವಂತಹ ಕೆಲಸವನ್ನು ನಿರಂತರವಾಗಿ ಸೇನೆಯ ಮುಖಂಡರುಗಳು ಫಲಾಪೇಕ್ಷಿಯಿಲ್ಲದೇ ಸ್ವಚ್ಛಂದ ಮನಸ್ಸಿನಿಂದ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.


ನಗರದ ಕನ್ನಡಸೇನೆ ಕಚೇರಿಯಲ್ಲಿ ತರೀಕೆರೆ-ಅಜ್ಜಂಪುರ ಕ್ಷೇತ್ರಕ್ಕೆ ನೂತನ ಪದಾಧಿಕಾರಿಗಳನ್ನು ಶುಕ್ರವಾರ ನೇಮಕಗೊಳಿಸಿ ಮಾತನಾಡಿದ ಅವರು, ಕನ್ನಡವನ್ನು ಜೋಡಿಸುವ ಕಾಯಕದಲ್ಲಿ ನಿಷ್ಟೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.


ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಪರಂಪರೆಯಿದೆ. ಆ ನಿಟ್ಟಿನಲ್ಲಿ ನಾಡಿನ ಹಿರಿಮೆ, ಗರಿಮೆಯನ್ನು ಪಸರಿಸಲು ಸೇನೆಯ ಮುಖಂಡರುಗಳು ಕಾರ್ಯೋನ್ಮುಖರಾಗಿ ಪ್ರತಿನಿತ್ಯವು ವೈಯಕ್ತಿಕ ಬದುಕಿನ ಜೊತೆಗೆ ಸಾಮಾಜಿಕ ಸೇವೆ ಮೂಲಕ ಅತ್ಯಂತ ಪ್ರೀತಿಪೂರಕವಾದ ಕೆಲಸ ಮಾಡುತ್ತಿರುವುದು ಮರೆಯಲಾಗದು ಎಂದು ತಿಳಿಸಿದರು.


ಜಿಲ್ಲೆಯ ತರೀಕೆರೆ ಭಾಗದಲ್ಲಿ ನೂತನ ಅಧ್ಯಕ್ಷರು ಕಳೆದ ಹಲವಾರು ವರ್ಷಗಳಿಂದ ಬಡಮಕ್ಕಳಿಗೆ ನೋಟ್ ಪುಸ್ತಕ ಹಾಗೂ ವೃದ್ದರಿಗೆ ಹಣ್ಣುಹಂಪಲು, ಔಷಧಿ ವಿತರಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿ ಜವಾಬ್ದಾರಿ ವಹಿಸಲಾಗಿದೆ. ಮುಂಬರುವ ದಿನಗಳಲ್ಲೂ ಕನ್ನಡಕ್ಕೆ ಧಕ್ಕೆಯುಂಟಾದ ಸಂದರ್ಭದಲ್ಲಿ ದೃತಿಗೆಡದೇ ಹೋರಾಟಕ್ಕೆ ಮುಂದಾಗುವರು ಎಂಬ ವಿಶ್ವಾಶವಿದೆ ಎಂದರು.


ಪ್ರಸ್ತುತ ತರೀಕೆರೆ-ಅಜ್ಜಂಪುರ ಒಂದೇ ಕ್ಷೇತ್ರವಾಗಿ ರೂಪಿಸಿ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು ನೇಮಕಗೊಳಿಸಿದ್ದು ಕನ್ನಡ ಸೇನೆಯ ಕೀರ್ತಿಯನ್ನು ಎತ್ತಿಹಿಡಿಯುವರು ಎಂಬ ನಂಬಿಕೆಯಿದೆ. ಹೀಗಾಗಿ ಮುಂದಿನ ಎಲ್ಲಾ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ಪ್ರವೇಶಿಸಿ ದೀನ, ದಲಿತರು ಹಾಗೂ ಕನ್ನಡಾಂಭೆಯ ಸೇವೆಗೆ ಸದಾಸಿದ್ಧರಾಗಬೇಕು ಎಂದರು.


ತರೀಕೆರೆ-ಅಜ್ಜಂಪುರ ಕ್ಷೇತ್ರದ ನೂತನ ಅಧ್ಯಕ್ಷ ಬಿ.ಪಿ.ವಿಕಾಸ್ ಮಾತನಾಡಿ, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ವೃದ್ಧರು ಅನ್ಯಾಯಗೊಳಗಾದ ವೇಳೆಯಲ್ಲಿ ಕನ್ನಡಸೇನೆ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ರೂಪಿಸಿ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದೆ. ಜೊತೆಗೆ ಕನ್ನಡ ಪ್ರೇಮವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ಮಾತ್ರ ಮಾತೃ ಭಾಷೆಗೆ ಗೌರವ ಸಲ್ಲಿಸಿದಂತೆ ಎಂದು ತಿಳಿಸಿದರು.


ಸರ್ಕಾರ ಈಗಾಗಲೇ ಪ್ರತಿ ಅಂಗಡಿ ಮುಂಗಟ್ಟುದಾರರಿಗೆ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿದ್ದರೂ ಇದುವರೆಗೂ ಕೆಲವೇ ಮಂದಿ ಈ ನಿರ್ಧಾರವನ್ನು ಬೆಲೆಕೊಟ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಇನ್ನುಳಿದ ಬಹುತೇಕ ಅಂಗಡಿದಾರರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇದೇ ರೀತಿ ಮುಂದುವರೆದರೆ ರಾಜೇಗೌಡರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದರು.


ಇದೇ ವೇಳೆ ತರೀಕೆರೆ-ಅಜ್ಜಂಪುರ ಕ್ಷೇತ್ರಕ್ಕೆ ನೂತನ ಅಧ್ಯಕ್ಷರಾಗಿ ಬಿ.ಪಿ.ವಿಕಾಸ್, ಯುವಘಟಕದ ಅಧ್ಯಕ್ಷ  ಜಿ.ರಾಘವೇಂದ್ರ, ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ್ ಕರಡಿ, ರೈತ ಘಟಕದ ಅಧ್ಯಕ್ಷ ಭೂಪೇಶ್ ಕುಮಾರ್, ವಾಹನ ಘಟಕ ಅಧ್ಯಕ್ಷ ಮಂಜುನಾಥ್ ರಾವ್, ಕಾರ್ಯದರ್ಶಿ ಅಭಿಜಿತ್ ಅವರುಗಳನ್ನು ನೇಮಕಗೊಳಿಸಲಾಗಿದೆ.


ಈ ಸಂದರ್ಭದಲ್ಲಿ ಕನ್ನಡಸೇನೆ ಉಪಾಧ್ಯಕ್ಷ ಜಿ.ವಿನಯ್, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ನಗರ ಸಂಘಟನಾ ಕಾರ್ಯದರ್ಶಿ ಸತೀಶ್, ಕಾರ್ಮಿಕ ಘಟಕದ ಉಪಾಧ್ಯಕ್ಷ ಶಂಕರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!