ಶಿವಮೊಗ್ಗ-‌ಬೆಂಗಳೂರು ಆ. 11ರಿಂದ ವಿಮಾನ ಹಾರಾಟ ಆರಂಭ ; ಬಿವೈಆರ್

0 35

ಶಿವಮೊಗ್ಗ : ಶಿವಮೊಗ್ಗ-‌ಬೆಂಗಳೂರು ನಡುವೆ ಆಗಸ್ಟ್ 11ರಿಂದ ಸಾರ್ವಜನಿಕವಾಗಿ‌ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ‌ ಬಿ.ವೈ.ರಾಘವೇಂದ್ರ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಶಿವಮೊಗ್ಗ ವಿಮಾನ‌ ನಿಲ್ದಾಣ ಉದ್ಘಾಟನೆಯಾಗಿದೆ. ಪ್ರಧಾನಿ ಮೋದಿಯವರು ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿದ್ದಾರೆ. ವಿಮಾನ ಹಾರಾಟದ ಪರೀಕ್ಷೆಗಳು ಕೂಡ ನಡೆದಿವೆ. ಇಂಡಿಗೊ ಏರ್‌ಲೈನ್ಸ್ ಈಗಾಗಲೇ‌ ಹಾರಾಟದ ಅನುಮತಿಯನ್ನು
ಪಡೆದುಕೊಂಡಿದೆ. ಈಗಿರುವ ಮಾಹಿತಿಯ ಅನ್ವಯ ಆ.11ರಂದು ಅವರು ವಿಮಾನ ಹಾರಾಟ ಆರಂಭಿಸಲಿದ್ದಾರೆ. ಇದು ಮತ್ತಷ್ಟು ಮುಂದಕ್ಕೆ ಹೋಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ.‌ ಹಾಗಾಗಿ ಬಹುತೇಕವಾಗಿ ಅಂದೇ ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಹಾರಾಟ
ಆರಂಭವಾಗಲಿದೆ. ಅದರೆ ಟಿಕೆಟ್‌ ಬುಕಿಂಗ್ ವ್ಯವಸ್ಥೆ ಇನ್ನೂ
ಪ್ರಾರಂಭಗೊಂಡಿಲ್ಲ ಎಂದರು.


ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರ ವಿಮಾನ ಹಾರಾಟದ ಕನಸು ನನಸಾಗಿದೆ. ಅವರ ಹುಟ್ಟಿದ ಹಬ್ಬದ ದಿನವೇ ಪ್ರಧಾನಿ ಮೋದಿಯವರೇ ವಿಮಾನದಲ್ಲಿ ಬಂದು ಉದ್ಘಾಟನೆ ಮಾಡಿದ್ದರು. ಅಂದಿನಿಂದ ಸಾರ್ವಜನಿಕವಾಗಿ ವಿಮಾನ ಹಾರಾಟಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.‌ ದೇಶದ ಇತಿಹಾಸದಲ್ಲಿಯೇ ಇಷ್ಟು ಬೇಗ ಹಾರಾಟಕ್ಕೆ ಅವಕಾಶವಾಗಿರುವುದು ವಿಮಾನ ಪ್ರಾಧಿಕಾರದಿಂದ ಲೈಸೆನ್ಸ್ ಸಿಕ್ಕಿರುವುದು, ಟೆಂಡರ್ ಪ್ರಕ್ರಿಯೆ ಮುಗಿದಿರುವುದು ಅತ್ಯಂತ ಸಂಭ್ರಮದ ವಿಷಯವಾಗಿದೆ ಎಂದರು.


ಈಗಾಗಲೇ ವಿಮಾನ ಹಾರಾಟದ ನಾಲ್ಕು ಮಾರ್ಗಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಉಡಾನ್ ಯೋಜನೆಯ ಆರ್‌ಸಿಎಸ್ ಲೈನ್ ಯೋಜನೆಯಡಿ ಪ್ರಯಾಣಿಕರ ಒಂದು ಸೀಟಿಗೆ ಸಬ್ಸಿಡಿ ಕೂಡ ದೊರಕುತ್ತದೆ. ವರ್ಷಕ್ಕೆ 2.5 ಕೋಟಿ ಹಣವನ್ನು ಸಬ್ಸಿಡಿ ನೀಡಲಾಗುತ್ತದೆ. ಒಟ್ಟೂ ನಾಲ್ಕು ಮಾರ್ಗಗಳಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.


ಹೈದರಾಬಾದ್-ಶಿವಮೊಗ್ಗ- ಗೋವಾ-ಶಿವಮೊಗ್ಗ-ತಿರುಪತಿ-
ಶಿವಮೊಗ್ಗ-ಹೈದರಾಬಾದ್ ಇದು ಒಂದು ಮಾರ್ಗ. ಇನ್ನೊಂದು
ಮಾರ್ಗ ಹೈದರಾಬಾದ್- ಶಿವಮೊಗ್ಗ-ದೆಹಲಿ-ಶಿವಮೊಗ್ಗ-
ಚೆನ್ನೈ-ಶಿವಮೊಗ್ಗ-ಬೆಂಗಳೂರು- ಹೈದರಾಬಾದ್ ಆದರೆ ಮತ್ತೊಂದು ಮಾರ್ಗ ಹೈದರಾಬಾದ್- ಶಿವಮೊಗ್ಗ-ಹೈದರಾಬಾದ್
ಆಗಿದೆ. ನಾಲ್ಕನೆಯ ರೂಟ್ ಬೆಂಗಳೂರು-ಸೇಲಂ-ಕೊಚ್ಚಿನ್-ಸೇಲಂ-ಬೆಂಗಳೂರು-ಶಿವಮೊಗ್ಗ-ಬೆಂಗಳೂರು ಆಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನಿಂದ‌ ಸಬ್ಸಿಡಿ ಭರಿಸಬೇಕಾಗುತ್ತದೆ. ಇವೆಲ್ಲವೂ ಸರಿಯಾದ ಸಮಯಕ್ಕೆ ಆದರೆ ಆಗಸ್ಟ್ ಕೊನೆಯ ವಾರದಲ್ಲಿ ಎಲ್ಲಾ ಮಾರ್ಗದ ವಿಮಾನಗಳು ಹಾರಾಟ ಆರಂಭಿಸಲಿವೆ ಎಂದರು.


ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದಂತೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಬೇಕು. ಹೇಳುವುದು ಒಂದು
ಮಾಡುವುದು ಮತ್ತೊಂದು ಆಗಬಾರದು. ಈಗ ಐದು ಕೆಜಿ ಅಕ್ಕಿಯ ಬದಲು ಹಣ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಬಡವರ ಮೊದಲ ತುತ್ತನ್ನೇ ಕಸಿದುಕೊಂಡಂತಾಗಿದೆ. ಕೇಂದ್ರ ಸರ್ಕಾರ ಐದು ಕಜಿ ಅಕ್ಕಿಯನ್ನು ಈಗಾಗಲೇ ಕೊಡುತ್ತಿದೆ. ಇವರು 10 ಕೆಜಿ ಸೇರಿಸಿ 15 ಕೆಜಿ ಕೊಡಲಿ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಟಿ.ಡಿ. ಮೇಘರಾಜ್, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಪವಿತ್ರಾ ರಾಮಯ್ಯ, ಎಸ್.ಎಸ್. ಜ್ಯೋತಿಪ್ರಕಾಶ್, ಮಾಲತೇಶ್, ಶಿವರಾಜ್,ಜಗದೀಶ್, ಅಣ್ಣಪ್ಪ, ಡಾ.‌ ಧನಂಜಯ ಸರ್ಜಿ, ಶ್ರೀನಾಥ್ ಮುಂತಾದವರಿದ್ದರು.

Leave A Reply

Your email address will not be published.

error: Content is protected !!