ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ; ಶಾಸಕ ಬೇಳೂರು ಗೋಪಾಲಕೃಷ್ಣ

0 31


ರಿಪ್ಪನ್‌ಪೇಟೆ : ರಾಜ್ಯ ಸರ್ಕಾರವು ಕಾರ್ಮಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಸಾಗರ, ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.


ಪಟ್ಟಣದ ಜಿಎಸ್‌ಬಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಕಟ್ಟಡದ ಕಾರ್ಮಿಕರು ಸೇರಿದಂತೆ ಕಟ್ಟಡದ ನಿರ್ಮಾಣದಲ್ಲಿ ಭಾಗಿಯಾಗುವ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಜೀವ ವಿಮೆ ಸೇರಿದಂತೆ ವಿವಿಧ ಯೋಜನೆಗಳನ್ನು ಸರಕಾರವು ಅನುಷ್ಠಾನಗೊಳಿಸಿದೆ‌. ಇದರ ಪ್ರಯೋಜನವನ್ನು ಪ್ರತಿಯೊಬ್ಬ ಫಲಾನುಭವಿಗಳಿಗೂ ಹಾಗೂ ಅವರ ಕುಟುಂಬದವರಿಗೂ ಲಭಿಸುವಂತಾಗಬೇಕು, ಕಾರ್ಮಿಕರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಅವರುಗಳ ಸಂಕಷ್ಟದಲ್ಲಿ ಪ್ರತಿಯೊಬ್ಬರು ಭಾಗಿಯಾಗಿ ಅವರುಗಳಿಗೆ ಉತ್ತಮ ಬದುಕನ್ನು ಕಲ್ಪಿಸಿ ಕೊಡುವಂತಾದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.


ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಲಕ್ಷ್ಮಿ ಗಂಗಾಧರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಕಟ್ಟಡದ ಕಾರ್ಮಿಕರುಗಳು ಒಟ್ಟಾಗಿ ಸಂಘವನ್ನು ಸ್ಥಾಪಿಸಿ ಸಮಾಜದ ಮುಖ್ಯ ವಾಹಿನಿಗೆ ಬಂದಿರುವುದು ಸಂತಸವಾಗಿದೆ. ಕಟ್ಟಡ ಕಾರ್ಮಿಕರುಗಳಿಗೆ ಗ್ರಾಮ ಪಂಚಾಯಿತಿಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಮಣ್ಯ, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೇದುಲ್ಲಾ ಶರೀಫ್, ಹೊಸನಗರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಕೆ. ಸುಂದರ್, ಹೊಸನಗರ ತಾಲೂಕು ಗ್ರಾಮಾಂತರ ವಿಭಾಗದ ನೂತನ ಅಧ್ಯಕ್ಷ ಮಹಮ್ಮದ್ ಹುಸೇನ್, ಗೌರವ ಅಧ್ಯಕ್ಷ ಬಿ.ಆರ್. ರಮೇಶ್, ಪ್ರಧಾನ ಕಾರ್ಯದರ್ಶಿ ಸತೀಶ್.ಆರ್., ಕಾರ್ಯಧ್ಯಕ್ಷ ಪ್ರಭಾಕರ್ ಆಚಾರ್, ಪದಾಧಿಕಾರಿಗಳಾದ ರವೀಶ್, ಮಣಿಕಂಠ, ಪ್ರವೀಣ್ ಸೆಲ್ವಂ, ಸ್ವಾತಿ ಇನ್ನಿತರರಿದ್ದರು.


ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಪಿಎಸ್ಐ ಪ್ರವೀಣ್ ಎಸ್. ಪಿ ಹಾಗೂ ಕಟ್ಟಡ ನಿರ್ಮಾಣದ ಹಿರಿಯ ಕಾರ್ಮಿಕರನ್ನು ಗೌರವಿಸಿ ಅಭಿನಂದಿಸಲಾಯಿತು.


ಕಾರ್ಯಕ್ರಮದ ಮೊದಲು ಗವಟೂರು, 18ನೇ ಮೈಲಿಕಲ್ಲು, ಕೆಂಚನಾಲ, ಅರಸಾಳು, ಕೆಂಚನಾಲ, ಹಾಲುಗುಡ್ಡೆ, ಮೂಗುಡ್ತಿ, ಹೆದ್ದಾರಿಪುರ, ಚಿಕ್ಕಜೇನಿ, ಕೋಡೂರು, ಹುಂಚ, ಗರ್ತಿಕೆರೆ, ಬಟ್ಟೆಮಲ್ಲಪ್ಪದಿಂದ ಆಗಮಿಸಿದ ಕಟ್ಟಡ ಕಾರ್ಮಿಕರು ರಸ್ತೆ ಜಾಥಾ ನಡೆಸಿದರು ಹಾಗೂ ಕಾರ್ಮಿಕರ ಕುಟುಂಬ ವರ್ಗದವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

Leave A Reply

Your email address will not be published.

error: Content is protected !!