ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೋ ಮುಕ್ತ ಭಾರತ ಎಂದು ಘೋಷಣೆ ಮಾಡಿರುವುದು ಹೆಮ್ಮೆಯ ಸಂಗತಿ ; ಶಾಸಕ ತಮ್ಮಯ್ಯ

0 209

ಚಿಕ್ಕಮಗಳೂರು : ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೋ ಮುಕ್ತ ಭಾರತ ಎಂದು ಘೋಷಣೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ನಗರದ ಜಿಲ್ಲಾ ಆಸ್ಪತ್ರೆ (ಹೆರಿಗೆ ವಿಭಾಗ) ಆವರಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಮಗುವಿಗೆ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದ ಅವರು, ದೇಶದಲ್ಲಿ ಪೋಲಿಯೋ ನಿರ್ಮೂಲನೆ ಮಾಡುವ ದೃಷ್ಟಿಯಿಂದ 1994-95 ರಿಂದ ಪ್ರಾರಂಭ ಮಾಡಿದ ಪಲ್ಸ್ ಪೋಲಿಯೋ ಲಸಿಕೆಯಿಂದ ಇಂದು ಭಾರತದಲ್ಲಿ ಪೋಲಿಯೋ ಮುಕ್ತವಾಗಿದ್ದು, 2014-15ನೇ ಸಾಲಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪೋಲಿಯೋ ಮುಕ್ತ ಭಾರತ ಎಂದು ಘೋಷಣೆ ಮಾಡಿರುವುದು ದೇಶದ ಸಾಧನೆಯಾಗಿದೆ ಎಂದರು.


ಇಂದು ಜಿಲ್ಲೆಯಾದ್ಯಂತ 74,592 ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿಯನ್ನು ಹಾಕುವ ಗುರಿ ಇದ್ದು 879 ಪೋಲಿಯೋ ಲಸಿಕಾ ಬೂತ್‌ಗಳನ್ನು ತೆರೆಯಲಾಗಿದೆ. ಇದರಲ್ಲಿ 75 ಸಂಚಾರಿ ಬೂತ್‌ಗಳು ಕಾರ್ಯನಿರ್ವಹಿಸುತ್ತವೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪೋಲಿಯೋ ಲಸಿಕಾ ಬೂತ್‌ಗಳನ್ನು ತೆರಯಲಾಗಿದೆ. ಬೂತ್‌ಗಳಿಗೆ ಆಗಮಿಸಿ ಮಕ್ಕಳಿಗೆ ಇಂದು ಪೋಲಿಯೋ ಲಸಿಕೆ ಹಾಕಿಸದೆ ಇರುವ ಮಕ್ಕಳಿಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆಯನ್ನು ಹಾಕಲು 1894 ವಿಷೇಶ ತಂಡಗಳನ್ನು ರಚಿಸಲಾಗಿದ್ದು, ಮೂರು ದಿನಗಳ ಕಾಲ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಲ್ಸ್ ಪೋಲಿಯೋ ಮುಕ್ತ ಭಾರತವನ್ನು ಮಾಡಲು ಎಲ್ಲ ತಾಯಂದಿರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವಂತೆ ಅವರು ಮನವಿ ಮಾಡಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ವಿರುದ್ಧ ಹೋರಾಡಲು ಕೇವಲ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾತ್ರವಲ್ಲದೆ ಸಂಘ ಸಂಸ್ಥೆಗಳು ಸಾರ್ವಜನಿಕರು ಇದಕ್ಕೆ ಬೆಂಬಲವನ್ನು ನೀಡುತ್ತಿದ್ದಾರೆ. ಜಿಲ್ಲೆಯ ಯಾವುದೇ ಮಗುವು ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ಎಲ್ಲಾ ಮಕ್ಕಳಿಗೂ ಲಸಿಕೆಯನ್ನು ನೀಡುವ ತಯಾರಿ ಮಾಡಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಭರತ್ ಕುಮಾರ್ ಕೆ., ಡಾ. ಮಂಜುನಾಥ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!