ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿ ಸಮಗ್ರ ಕೃಷಿ ಬಗ್ಗೆ ಗುಂಪು ಚರ್ಚೆ

0 281

ರಿಪ್ಪನ್‌ಪೇಟೆ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಚಿಗುರು ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಶುಕ್ರವಾರ ಗವಟೂರು ಗ್ರಾಮದ ರೈತ ಶಿವಪ್ಪಗೌಡ ಅವರ ಮನೆಯಲ್ಲಿ ಇರುವಕ್ಕಿ ಮಹಾವಿದ್ಯಾಲಯದ ಕೃಷಿ ವಿಸ್ತರಣೆ ವಿಭಾಗದ ಪ್ರಾಧ್ಯಾಪಕ ಡಾ. ಶಶಿಕಲಾ ಮತ್ತು ಡಾ. ಅರುಣ್ ಅವರ ಉಪಸ್ಥಿತಿಯಲ್ಲಿ ಗುಂಪು ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ರೈತರಿಗೆ ಮುಖ್ಯವಾಗಿ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಯಿತು.

ಅಡಿಕೆಯಲ್ಲಿ ಅಂತರ್ ಬೆಳೆಯಾಗಿ ಕಾಳುಮೆಣಸನ್ನು ಬೆಳೆಯಬಹುದು. ಕಾಳುಮೆಣಸನ್ನು ಕಡಿಮೆ ತೇವಾಂಶ ಮತ್ತು ಸರಿಯಾದ ಪೋಷಕಾಂಶಗಳ ನಿರ್ವಹಣೆಯ ಮೂಲಕ ಬೆಳೆಸಿದಾದಲ್ಲಿ ಕಡಿಮೆ ಜಗದಲ್ಲಿಯೂ ಲಕ್ಷಗಟ್ಟಲೆ ಆದಾಯವನ್ನು ಪಡೆಯಬಹುದು. ಇನ್ನೊಂದು ಅಂತರ್ ಬೆಳೆಯೆಂದರೆ ಜಾಯಿಕಾಯಿ, ಯಾವುದೇ ರೋಗ ಮತ್ತು ಕೀಟಬಾಧೆ ಇಲ್ಲದ ಈ ಸಸ್ಯದ ಕಾಯಿ ಅಲ್ಲದೆ ಅದರ ಸಿಪ್ಪೆಗಳಿಗೂ ಅಪಾರ ಬೆಲೆಯಿದೆ ಎಂದು ಡಾ.ಅರುಣ್ ಕುಮಾರ್ ರವರು ನೆರೆದ ರೈತರಿಗೆ ತಿಳಿಸಿಕೊಟ್ಟರು.

ನಂತರ ರೈತ ಮಹಿಳೆಯರು ಕೇಳಿದ ಕೋಳಿ ಸಾಕಾಣಿಕೆಯ ಬಗೆಗಿನ ಪ್ರಶ್ನೆಗಳಿಗೆ ಕೊಳಿಮರಿಗಳಿಗೆ ಸರಿಯಾದ ಸಮಯದಲ್ಲಿ ಲಸೋಟ ಮುಂತಾದ ಲಸಿಕೆಗಳನ್ನು ಹಾಕಿಸಬೇಕು ಎಂದು ಸಲಹೆ ನೀಡಿದರು.

ಹಸುಗಳ ಸಾಕಾಣಿಕೆಯಲ್ಲಿ ಮೇವಿನ ನಿರ್ವಹಣೆ ಹಾಗೂ ಹೇಗೆ ಜೇನುಸಾಕಾಣಿಕೆಯಿಂದ ಕಡಿಮೆ ವೆಚ್ಚ ಮತ್ತು ಶ್ರಮದಲ್ಲಿ ಉತ್ತಮ ಆದಾಯ ಗಳಿಸಬಹುದು ಎಂಬುದನ್ನೂ ರೈತರ ಜೊತೆ ಚರ್ಚಿಸಲಾಯಿತು.

ಕೋವಿಡ್ ನಂತರ ಕೃಷಿ ಬಗ್ಗೆ ಬದಲಾದ ಜನರ ಪರಿಕಲ್ಪನೆ, ವಾರಾಂತ್ಯದ ಕೃಷಿಕರ ಸಂಘ ಮತ್ತು ತಾರಸಿ ತೋಟಗಾರರ ಸಂಘದ ಬಗ್ಗೆ ಡಾ. ಶಶಿಕಲಾ ರವರು ಮಾಹಿತಿ ನೀಡಿ ನೆರೆದ ರೈತ ಮಹಿಳೆಯರಿಗೆ ಎಂತಹ ವಿಭಿನ್ನವಾದ ಕೃಷಿ ಪದ್ಧತಿಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು.

Leave A Reply

Your email address will not be published.

error: Content is protected !!