ಚಂದ್ರಮಾವಿನಕೊಪ್ಪಲು ಬಡಾವಣೆ ನಿವಾಸಿಗಳಿಗೆ ನೋಟಿಸ್ ; ಸಾಗರ ನಗರಸಭೆಗೆ ಮುತ್ತಿಗೆ, ಸಮಸ್ಯೆ ಪರಿಹಾರಕ್ಕೆ ಆಗ್ರಹ

0 362

ಸಾಗರ : ಇತ್ತೀಚೆಗೆ ನಗರಸಭೆಯಿಂದ ನಗರದ ವರದಾ ನದಿ ಪಕ್ಕದಲ್ಲಿರುವ ಚಂದ್ರಮಾವಿನಕೊಪ್ಪಲು ಬಡಾವಣೆ ನಿವಾಸಿಗಳಿಗೆ ನೋಟಿಸ್ ನೀಡಿ, ಯಾರೂ ಮನೆ ಕಟ್ಟಬಾರದು, ರಿಪೇರಿ ಮಾಡಬಾರದು ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಯಗೊಂಡ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಸಮಸ್ಯೆಗೆ ಪರಿಹಾರ ಕೊಡುವಂತೆ ಬುಧವಾರ ಪೌರಾಯುಕ್ತ ನಾಗಪ್ಪನವರಿಗೆ ಆಗ್ರಹಿಸಿದರು.


ಈ ಕುರಿತು ನಗರಸಭೆಗೆ ಆಗಮಿಸಿದ ನೂರಾರು ಬಡಾವಣೆ ನಿವಾಸಿಗಳು, ಚಂದ್ರಮಾವಿನಕೊಪ್ಪಲಿನಲ್ಲಿ ಹಾಲಿ ವಾಸವಿರುವ ಮನೆಗಳಿಗೆ ಸುಮರು 50-60 ವರ್ಷಗಳ ಹಿಂದೆಯೇ ಅಂದಿನ ಪುರಸಭೆಯ ವತಿಯಿಂದ ಹಕ್ಕು ಪತ್ರ ನೀಡಿ, ಕಂದಾಯ ಕಟ್ಟಿಕೊಂಡು ಬರಲಾಗುತ್ತಿದೆ. ಎಲ್ಲರೂ ತಮ್ಮ ಸ್ವಂತ ಶಕ್ತಿಯಿಂದ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ. ಯಾರೊಬ್ಬರೂ ಒತ್ತುವರಿ ಮಾಡಿಕೊಂಡಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ನೋಟಿಸ್ ನೀಡಿರುವುದು ಎಲ್ಲರಿಗೂ ಗಾಭರಿಯುಂಟು ಮಾಡಿದೆ. ಕೂಡಲೇ ಅಧಿಕಾರಿಗಳು ಸ್ಪಷ್ಟೀಕರಣ ನೀಡಬೇಕು. ಜತೆಯಲ್ಲಿ ಶಿವಮೊಗ್ಗದಲ್ಲಿ ತುಂಗಾ ನದಿಗೆ 3 ಕಿ.ಮೀ. ತಡೆಗೋಡೆ ನಿರ್ಮಿಸಿದಂತೆಯೇ ಇಲ್ಲೂ ಸಿಮೆಂಟ್ ತಡೆಗೋಡೆ ಕಟ್ಟಿ, ನಿವಾಸಿಗಳಿಗೆ ಸುರಕ್ಷಿತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ನೋಟಿಸ್ ಜಾರಿಯಾಗಿರುವುದರಿಂದ ನೂರಾರು ಬಡವರು, ವೃದ್ಧರು ಹೆದರಿಕೊಂಡಿದ್ದು, ನಗರಸಭೆಯಿಂದ ಮನೆ ಕೆಡವುತ್ತಾರೆ ಎನ್ನುವ ವದಂತಿಯೂ ಹಬ್ಬಿಸಲಾಗಿದೆ. ಜನಪ್ರತಿನಿಧಿಗಳು ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಜನರ ಆತಂಕ ದೂರ ಮಾಡಬೇಕು. ಜನರ ಆಸ್ತಿಪಾಸ್ತಿ ಕಾಪಾಡಿ, ನಮಗೆ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು. ಮುಖ್ಯವಾಗಿ ನೋಟೀಸ್ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.


ರಾಮಕೃಷ್ಣ ಶಾಲೆಯವರು ಒತ್ತುವರಿ ಮಾಡಿಕೊಂಡಿರುವ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಆಯುಕ್ತ ನಾಗಪ್ಪನವರು ಚಂದ್ರಮಾವಿನಕೊಪ್ಪಲು ಬಡಾವಣೆಯಲ್ಲಿರುವ ಎಲ್ಲ ಮನೆಗಳಿಗೂ ನೋಟಿಸ್ ನೀಡಿರುವುದಾಗಿ ನಗರಸಭೆ ಎದುರಿನಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರು.
ಈ ಕುರಿತು ಸಾರ್ವಜನಿಕರಿಗೆ ಉತ್ತರ ನೀಡಿದ ಪೌರಾಯುಕ್ತ ನಾಗಪ್ಪ, ಬಡಾವಣೆಯು ಬಫರ್ ಜೋನ್‍ನಲ್ಲಿ ಬರುವುದರಿಂದ ಲೈಸೆನ್ಸ್ ಕೊಡಲು ಸಾಧ್ಯವಿಲ್ಲ. ಸದ್ಯ ಅಗತ್ಯ ಹಣಕಾಸಿನ ಅಲಭ್ಯತೆಯಿಂದ ಸದ್ಯ ತಡೆಗೋಡೆ ನಿರ್ಮಿಸಲು ಆಗುವುದಿಲ್ಲ. ಈ ಭಾಗದಲ್ಲಿ ಒತ್ತುವರಿ ಮಾಡಿಕೊಂಡಿರುವ ವಿಚಾರವಾಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಸಾರ್ವಜನಿಕರಿಗೆ ನೋಟಿಸ್ ನೀಡಿ ಎಚ್ಚರಿಸಲಾಗಿದೆ ಎಂದರು.

Leave A Reply

Your email address will not be published.

error: Content is protected !!