ಕೃಷಿ ಉತ್ಪಾದನೆಯ ಮೇಲೆ ಹವಾಮಾನ ಬದಲಾವಣೆಯ ಪ್ರಭಾವ | ಕೃಷಿ ವಿವಿ ವಿದ್ಯಾರ್ಥಿಗಳಿಂದ ಗುಂಪು ಚರ್ಚೆ

0 287

ರಿಪ್ಪನ್‌ಪೇಟೆ : ಅತಿಯಾದ ಮಳೆ, ಮಳೆ ಕೊರತೆ, ಅಕಾಲಿಕ ಮಳೆ, ಪ್ರವಾಹ ಮತ್ತು ಬರಗಾಲ ಮುಂತಾದ ಹವಾಮಾನ ಬದಲಾವಣೆಗಳು ಇತ್ತೀಚಿನ ದಿನಮಾನಗಳಲ್ಲಿ ಸರ್ವೇಸಾಮಾನ್ಯವಾಗಿದ್ದು ಕೃಷಿ ಕ್ಷೇತ್ರದ ಮೇಲೆ ವಿಪರೀತ ಪರಿಣಾಮ ಬೀರಿದೆ. ಈ ಬದಲಾವಣೆಯಿಂದಾಗಿ ಭೂಮಿಯು ತನ್ನ ಸಮತೋಲನವನ್ನು ಕಳೆದುಕೊಂಡು, ಕೃಷಿ ಉತ್ಪಾದನೆಯು ಕುಂಠಿತಗೊಂಡಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ಗಂಧದಗುಡಿ ತಂಡದ ವಿದ್ಯಾರ್ಥಿಗಳು ಕೋಡೂರಿನಲ್ಲಿ ಹಮ್ಮಿಕೊಂಡಿದ್ದ ಕೃಷಿ ಉತ್ಪಾದನೆಯ ಮೇಲೆ ಹವಮಾನ ಬದಲಾವಣೆಯ ಪ್ರಭಾವ ಕುರಿತು ಗುಂಪು ಚರ್ಚೆಯಲ್ಲಿ ಹೇಳಿದರು.

ಕೃಷಿ ಉತ್ಪಾದನೆಯ ಮೇಲಾಗುತ್ತಿರುವ ಪರಿಣಾಮಗಳನ್ನು ತಪ್ಪಿಸಿ ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನದ ಗುಣಮಟ್ಟ ಸುಧಾರಿಸಲು ಹವಾಮಾನ ಬದಲಾವಣೆಗೆ ಪೂರಕ ಕೃಷಿ ತಂತ್ರಜ್ಞಾನಗಳು ಅತ್ಯಂತ ಅವಶ್ಯಕವಾಗಿವೆ ಎಂದು ಚರ್ಚಿಸಲಾಯಿತು.

ಅರಣ್ಯನಾಶ, ಬೆಳೆ ಉಳಿಕೆ ಸುಡುವಿಕೆ, ತೀವ್ರ ಕೃಷಿ, ಗಣಿಗಾರಿಕೆ ಮತ್ತು ಕೈಗಾರಿಕೆ, ಭತ್ತ ಬೆಳೆಯುವ ಪ್ರದೇಶದಿಂದ ಬಿಡುಗಡೆಯಾಗುವ ಮೀಥೇನ್ ಅನಿಲ ಮುಂತಾದವುಗಳು ಬದಲಾವಣೆಯ ಕಾರಣಗಳಾಗಿವೆ.

ಬದಲಾದ ಹವಾಮಾನಕ್ಕೆ ರೈತರ ಅನುಸರಿಸಬೇಕಾದ ಪೂರಕ ಕೃಷಿ ವಿಧಾನಗಳು.

ಸಮಗ್ರ ಕೃಷಿ ಪದ್ಧತಿ


ಬದಲಾಗುತ್ತಿರುವ ಹವಾಮಾನದೊಂದಿಗೆ ಹಾಗೂ ಕಡಿಮೆ ಖರ್ಚಿನಲ್ಲಿ ಕೃಷಿ ಸಂಪನ್ಮೂಲ ಮರುಬಳಕೆ ಮಾಡಲು ಸಮಗ್ರ ಕೃಷಿ ವ್ಯವಸ್ಥೆ ಅಗತ್ಯವಿದೆ. ಈ ಪದ್ಧತಿಯಲ್ಲಿ ಉತ್ತಮ ಬೆಳೆ ಉತ್ಪಾದನೆ ಮುಖ್ಯ ಗುರಿಯಾಗಿದ್ದು, ಇತರೆ ಪದ್ಧತಿಗಳಾದ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಜಾನುವಾರು ಸಾಕಾಣಿಕೆ ಆಧಾರಿತ ಕೃಷಿ ಪದ್ಧತಿಗಳು ಬೆಳೆ ಉತ್ಪಾದನೆಗೆ ಪೂರಕವಾಗಿರುತ್ತದೆ.

ಅಂತರ ಬೆಳೆ

ಬೆಳೆ ಪರಿವರ್ತನೆ ಮತ್ತು ಉತ್ಪಾದನೆ ಸಂಬಂಧಿಸಿದಂತೆ ಹೆಚ್ಚಿನ ಬೆಳೆ ವೈವಿಧ್ಯತೆಯನ್ನು ಕಾಪಾಡುವುದು, ಏಕದಳ ಧಾನ್ಯಗಳೊಂದಿಗೆ ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ ಅಳವಡಿಸಿಕೊಳ್ಳುವುದು, ಕಾಲಕ್ಕನುಗುಣವಾಗಿ ಬೆಳೆ ಬದಲಾವಣೆ ಮತ್ತು ಉತ್ತಮ ತಳಿಗಳ ಬಳಕೆ ಮಾಡಬೇಕು.

ಬದುಗಳ ನಿರ್ಮಾಣ

ಮಣ್ಣು ಮತ್ತು ನೀರಿನ ಸಂಪನ್ಮೂಲಗಳ ಉತ್ತಮ ನಿರ್ವಹಣೆಯು ಭೂ ಸವಕಳಿಯನ್ನು ತಡೆಯಲು ಮತ್ತು ಬಿದ್ದ ನೀರನ್ನು ಇಂಗುವಂತೆ ಮಾಡಲು ಮಣ್ಣು ಮತ್ತು ನೀರಿನ ಸಂರಕ್ಷಣಾ ತಂತ್ರಗಳಾದ ಸಮಪಾತಳಿ ಬದುಗಳು, ಇಳಿಜಾರಿಗೆ ಅಡ್ಡಲಾಗಿ ಬದುಗಳು, ಕೃಷಿ ಹೊಂಡ, ಚೆಕ್ ಡ್ಯಾಮ್, ನಾಲಾ ಬದುಗಳ ನಿರ್ಮಾಣ ಮಾಗಿ ಉಳಿಮೆ, ಇಳಿಜಾರಿಗೆ ಅಡ್ಡಲಾಗಿ ಉಳಿಮೆ ಹಾಗೂ ಜಮೀನಿನಲ್ಲಿ ಅಲ್ಲಲ್ಲಿ ಸಣ್ಣ ಬದುಗಳ ನಿರ್ಮಾಣ ಮಾಡುವುದು.

ನವೀಕರಿಸಬಹುದಾದ ಶಕ್ತಿ ಬಳಕೆ

ಇಂಧನ ಚಾಲಿತ ಯಂತ್ರಗಳ ಬಳಕೆ ಬದಲಾಗಿ ನವೀಕರಿಸಬಹುದಾದ ಶಕ್ತಿ ಮೂಲಗಳಾದ ಸೌರಶಕ್ತಿ, ಜಲಶಕ್ತಿ, ಹಾಗೂ ಜೈವಿಕ ಇಂಧನಗಳನ್ನು ಕೃಷಿಯಲ್ಲಿ ಬಳಸುವುದರಿಂದ ಹವಾಮಾನ ಬದಲಾವಣೆಯನ್ನು ತಡೆಗಟ್ಟಬಹುದು.

ಈ ಮೇಲ್ಕಂಡ ಕೃಷಿ ವಿಧಾನಗಳನ್ನು ಅನುಸರಿಸಿ ಜಾಗತಿಕ ಹವಮಾನ ಬದಲಾವಣೆಯ ಪರಿಣಾಮದಿಂದಾಗಿ ಕೃಷಿ ಉತ್ಪಾದನೆಯ ಮೇಲಾಗುತ್ತಿರುವ ಪರಿಣಾಮಗಳನ್ನು ತಪ್ಪಿಸಿ ರೈತರ ಆರ್ಥಿಕ ಪರಿಸ್ಥಿತಿ ಮತ್ತು ಜೀವನದ ಗುಣಮಟ್ಟ ಸುಧಾರಿಸಿದರ ಜೊತೆಗೆ ಜೀವ ವೈವಿಧ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

Leave A Reply

Your email address will not be published.

error: Content is protected !!