ಮನುಷ್ಯನಲ್ಲಿ ವೈಚಾರಿಕತೆ ಇರಲಿ ಆದರೆ ನಾಸ್ತಿಕ ಮನೋಭಾವ ಬೇಡ ; ರಂಭಾಪುರಿ ಶ್ರೀಗಳು

0 208

ಬೆಂಗಳೂರು : ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಆದ್ಯ ಕರ್ತವ್ಯವಾಗಿದೆ. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಮನುಷ್ಯನಲ್ಲಿ ವೈಚಾರಿಕತೆ ಬೆಳೆದು ಬರಲಿ ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಸಂಸ್ಕೃತಿ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಸತ್ಯದಿಂದ ಸತ್ಯ ಸಾಕ್ಷಾತ್ಕಾರದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆವ ಗುರಿ ಮನುಷ್ಯನದಾಗಬೇಕು. ಮನುಷ್ಯನ ದೈಹಿಕ ವಿಕಾಸಕ್ಕೆ ಆಹಾರ ನೀರು ಬೇಕು. ಬದುಕಿನ ವಿಕಾಸಕ್ಕೆ ಧರ್ಮಾಚರಣೆ ಬೇಕು. ಜೀವನದಲ್ಲಿ ಸಂಪತ್ತು ಸಂಪಾದಿಸದಿದ್ದರೂ ಚಿಂತೆಯಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಳ್ಳುವುದನ್ನು ಮರೆಯಬಾರದು. ಅತಿ ಶತ್ರುಗಳನ್ನು ನಿಯಂತ್ರಿಸಬಹುದು. ಆದರೆ ಮತಿ ಶತ್ರುಗಳನ್ನು ನಿಯಂತ್ರಿಸುವುದು ಕಷ್ಟ. ಶ್ರೀ ವೀರಭದ್ರಸ್ವಾಮಿಯ ಕ್ರಿಯಾ ಕರ್ತೃತ್ವ ಶಕ್ತಿ ಅಮೋಘ. ದುಷ್ಟ ಶಕ್ತಿಗಳ ದಮನ ಸಾತ್ವಿಕ ಶಕ್ತಿಗಳ ಸಂವರ್ಧನೆಗಾಗಿ ವೀರಭದ್ರಸ್ವಾಮಿ ಅವತಾರ ತಾಳಿ ಬಂದಿದ್ದಾನೆ. ವೀರಶೈವ ಧರ್ಮದಲ್ಲಿ ಜೀವ ಶಿವನಾಗುವ ಸಾಧನಾ ಮಾರ್ಗವನ್ನು ‌ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.

ಎಸ್.ಜೆ.ಆರ್.ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ ಇವರು ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಬಾಳಿನ ಭಾಗ್ಯೋದಯಕ್ಕೆ ಧರ್ಮ ಜ್ಞಾನದ ಅವಶ್ಯಕತೆಯಿದೆ. ವೀರಶೈವ ಲಿಂಗಾಯತ ಧರ್ಮದ ಇತಿಹಾಸ ಮತ್ತು ಆದರ್ಶ ಪರಂಪರೆ ಮರೆಯುವಂತಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತ ಬಸವಾದಿ ಶರಣರ ಸಾಮಾಜಿಕ ಕಳಕಳಿಯನ್ನು ಅರಿತು ಬಾಳಿದರೆ ಸಮಾಜ ಸುಭದ್ರಗೊಳ್ಳಲು ಸಾಧ್ಯವಾಗುವುದೆಂದರು.

ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಮಾತನಾಡಿ, ಇಂದಿನ ವಿಜ್ಞಾನ ಯುಗದಲ್ಲೂ ಸಹ ವೀರಭದ್ರಸ್ವಾಮಿಯ ಲೀಲೆ ಪವಾಡಗಳನ್ನು ಭೇದಿಸಲು ಸಾಧ್ಯವಾಗಿಲ್ಲ. ಶಿವ ಸಂಸ್ಕೃತಿಯ ಸಂವರ್ಧನೆಗಾಗಿ ಅವತರಿಸಿದ ಕಾರಣಿಕ ಪುರುಷ. ವೀರಶೈವರಷ್ಟೇ ಅಲ್ಲ. ವೀರಶೈವೇತರರೂ ಕೂಡಾ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ನಾಡಿನೆಲ್ಲೆಡೆ ಪೂಜೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ನಾಗಲಾಪುರ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಧನಗೂರು ಬೃಹನ್ಮಠದ ಮುಮ್ಮಡಿ ಷಡಕ್ಷರ ಶಿವಾಚಾರ್ಯರು ಗುರು ಹಿರಿಮೆ ಕುರಿತು ಉಪದೇಶಾಮೃತವನ್ನಿತ್ತರು. ಸಣ್ಣ ನೀರಾವರಿ ಇಲಾಖೆ ಜಂಟಿ ಕಾರ್ಯದರ್ಶಿ ಪಂಪನಗೌಡ್ರು ಮೇಲ್ಸೀಮೆ, ಗುಬ್ಬಿ ತೋಟದಪ್ಪ ಛತ್ರದ ಕಾರ್ಯದರ್ಶಿ ಎಂ.ಸದಾಶಿವಯ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ರಾಜಾಪುರ ಸಂಸ್ಥಾನಮಠದ ಡಾ.ರಾಜೇಶ್ವರ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿದರೆ ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಎಡೆಯೂರು ರೇಣುಕ ಶಿವಾಚಾರ್ಯರು ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು.

ಹಲವಾರು ಗಣ್ಯರು ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಕುಮಾರಿ ಜಿ.ಜಿ.ರಕ್ಷಿತಾ ಅವರಿಂದ ಭರತ ನಾಟ್ಯ ಶಿವಶಂಕರ ಶಾಸ್ತ್ರಿಗಳಿಂದ ಭಕ್ತಿಗೀತೆ ಜರುಗಿತು.

ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ನಿರೂಪಿಸಿದರು. ಬೆಳಿಗ್ಗೆ ಚಿಕ್ಕಪೇಟೆ ಮಹಂತಿನಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಬಂದ ಭಕ್ತರಿಗೆ ಶುಭ ಹಾರೈಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ಜಗದ್ಗುರುಗಳ ಆಶೀರ್ವಾದ ಪಡೆದರು.

Leave A Reply

Your email address will not be published.

error: Content is protected !!