ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಆದ್ಯತೆ ನೀಡಿ ; ಸಿದ್ದರಾಮಯ್ಯ

0 231

ಚಿಕ್ಕಮಗಳೂರು: ರಾಜ್ಯದಲ್ಲಿ ಈ ಬಾರಿ ಬರ ಕಾಣಿಸಿಕೊಂಡಿದ್ದು, ಕುಡಿಯುವ ನೀರಿಗೆ, ಜಾನುವಾರುಗಳ ಮೇವಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಬೆಂಗಳೂರಿನ ಗೃಹ ಕಛೇರಿ ಕೃಷ್ಣದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದ ಮೂಲಕ ಅವರು ಮಾತನಾಡಿ, ಬರ ನಿರ್ವಹಣೆಗೆ ಸೂಕ್ತ ಯೋಜನೆ ರೂಪಿಸಬೇಕು. ಕುಡಿಯುವ ನೀರಿಗೆ, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಬರಗಾಲದಿಂದ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬರ ಪರಿಸ್ಥಿತಿ ಗಂಭೀರವಾಗಲಿದೆ ಎಂದ ಅವರು, ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಯೋಜನೆ ರೂಪಿಸಬೇಕು ಪತ್ರಿಕೆಗಳಲ್ಲಿ ಪ್ರಕಟವಾಗುವ ಸಮಸ್ಯೆಗಳ ಕುರಿತು ವರದಿಗಳನ್ನು ಪರಿಶೀಲಿಸಿ ಅವುಗಳಿಗೆ ತಕ್ಷಣ ಸ್ಪಂಧಿಸಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು ಎಂದರು.

ಜನರಿಗೆ ತೊಂದರೆಯಾದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು, ಕುಡಿಯುವ ನೀರಿಗೆ ತೊಂದರೆಯಾಗಬಾರದು, ಜನರು ಕೆಲಸ ಸಿಕ್ಕಿಲ್ಲ ಎಂದು ಬೇರೆಡೆಗೆ ವಲಸೆ ಹೋಗಬಾರದು. ಪ್ರತಿ ವಾರಕ್ಕೊಮ್ಮೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪಿ.ಡಿ.ಒ ಗಳ ಜೊತೆ ಸಭೆ ನಡೆಸಿ ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ತಿಳಿದು ಪರಿಹರಿಸಿ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮಕೈಗೊಳ್ಳುವಂತೆ ಸೂಚಿಸಿದ ಮುಖ್ಯಮಂತ್ರಿಗಳು ಮೇವಿನ ಕಿಟ್‌ಗಳನ್ನು ರೈತರಿಗೆ ನೀಡಲಾಗಿದ್ದು, ರೈತರು ಬೆಳೆದ ಮೇವು ಶೇಖರಣೆಗೆ ಕ್ರಮವಹಿಸಬೇಕು ಜಿಲ್ಲೆಯಿಂದ ಮೇವು ಹೊರಹೋಗದಂತೆ ನೋಡಿಕೊಳ್ಳಬೇಕು. ಕೃಷಿ ಪಂಪ್‌ಸೆಟ್, ಕುಡಿಯುವ ನೀರಿಗೆ ವಿದ್ಯುತ್ ನೀಡಬೇಕು. ಕುಡಿಯುವ ನೀರಿಗೆ ಹೊಸ ಕೊಳಬಾವಿ ಕೊರೆದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ನೀಡಲು ವಿದ್ಯುತ್ ಇಲಾಖೆಯವರು ವಿದ್ಯುತ್ ಸಂಪರ್ಕ ಕಲ್ಪಿಸಬೇಕು ವಿಳಂಬ ಮಾಡಬಾರದು ಎಂದು ಹೇಳಿದರು.

ಕುಡಿಯುವ ನೀರಿಗೆ ಸಮಸ್ಯೆ  ಕಂಡು ಬಂದರೆ ಖಾಸಗಿ ಕೊಳವೆ ಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಯಾವುದೇ ಸಮಸ್ಯೆಯಾಗಬಾರದು ಎಂದು ತಿಳಿಸಿದರು.

ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!