ಕುಂದಾದ್ರಿ ವಾರ್ಷಿಕ ಜಾತ್ರಾ ಮಹೋತ್ಸವ | ಮಕರ ಸಂಕ್ರಾಂತಿ ಆಚರಣೆ ಜೀವನದಲ್ಲಿ ಸರ್ವರಿಗೂ ಸುಕೃತ ಫಲ ನೀಡಿ ರಾಷ್ಟ್ರವನ್ನು ಸಮೃದ್ಧಗೊಳಿಸಲಿ ; ಹೊಂಬುಜ ಶ್ರೀಗಳು

0 263

ತೀರ್ಥಹಳ್ಳಿ : ನಮ್ಮ ಪ್ರಾಚೀನ ಧಾರ್ಮಿಕ ಆಚರಣೆಗಳು ಜೀವನದಲ್ಲಿ ಉತ್ಕೃಷ್ಠ ಮೌಲ್ಯಗಳನ್ನು ರೂಢಿಸುವಂತೆ ಪ್ರೇರಣೆ ನೀಡುತ್ತವೆ. ನಿಸರ್ಗದ ಪ್ರಶಾಂತ ಪರಿಸರದಲ್ಲಿ ಆರಾಧನಾ ಪುಣ್ಯಕ್ಷೇತ್ರಗಳನ್ನು ನಿರ್ಮಿಸಿ, ಧಾರ್ಮಿಕ ಶ್ರದ್ಧೆಯ ಆಚರಣೆಗಳನ್ನು ನೆರವೇರಿಸಲು ಸಮಾಜ ಬಾಂಧವರನ್ನು ಒಗ್ಗೂಡಿಸುವ ಮೌಲ್ಯಾಧಾರಿತ ಪ್ರಜ್ಞೆಯನ್ನು ಭಾವೈಕ್ಯತೆಯ ಧರ್ಮಪ್ರಜ್ಞೆಯನ್ನು ಪೂರ್ವಿಕರು ನಮ್ಮ ದೇಶದಲ್ಲಿ ತಿಳಿಸಿದ್ದಾರೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಹೇಳಿದರು.

ಅವರು ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶಾಖಾ ಕೇಂದ್ರವಾಗಿರುವ ಶ್ರೀ ಕುಂದಕುಂದಾಚಾರ್ಯರ ತಪೋಭೂಮಿ ಶ್ರೀ ಕುಂದಾದ್ರಿ ಕ್ಷೇತ್ರದಲ್ಲಿ ಜ. 14 ಭಾನುವಾರದಂದು ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ದೀಪೋತ್ಸವ ಸಂದರ್ಭದಲ್ಲಿ ಧಾರ್ಮಿಕ ಪ್ರವಚನ ನೀಡುತ್ತಾ ಮಕರ ಸಂಕ್ರಾಂತಿ ಆಚರಣೆಯಿಂದ ಜೀವನದಲ್ಲಿ ಸರ್ವರಿಗೂ ಉತ್ತರೋತ್ತರ ಸುಕೃತಫಲ ನೀಡಿ ರಾಷ್ಟ್ರವನ್ನು ಸಮೃದ್ಧಗೊಳಿಸಲಿ ಎಂದು ಹರಸಿ, ಆಶೀರ್ವಚನ ನೀಡಿದರು.

ಪ್ರತಿಯೋರ್ವರೂ ವಿದ್ಯಾಸಂಪನ್ನರಾಗಿ ತಮ್ಮ ಜೀವನದಲ್ಲಿ ಅಹಿಂಸಾತ್ಮಕ ಮನೋಧರ್ಮದ ದಾರಿಯಲ್ಲಿ ಯಶಸ್ಸನ್ನು ಸಾಧಿಸಲು ಸ್ವಸ್ತಿಶ್ರೀಗಳು ತಿಳಿಸುತ್ತಾ ಏಳ್ಳು ಬೆಲ್ಲದಂತೆ ಜೀವನ ಬಾಂಧವ್ಯ ಸಾಮರಸ್ಯದಿಂದ ಬೆಸೆಯಲೆಂದು ಹರಸಿದರು.


ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ, ಆಚಾರ್ಯ ಶ್ರೀ ಕುಂದಕುಂದರ ಪಾದಚರಣಗಳಿಗೆ ವಿಶೇಷ ಪೂಜೆ, ಆರಾಧನೆ ಸಮರ್ಪಿಸಿದ ಶ್ರೀಗಳವರು ಕುಂದಾದ್ರಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಸಂರಕ್ಷಿಸಲು ಸರಕಾರದ, ಸಮಾಜ ಬಾಂಧವರ, ದಾನಿಗಳ ಸಹಕಾರವನ್ನು ಸ್ಮರಿಸಿದರು. ಕ್ಷೇತ್ರದ ಅಭಿವೃದ್ಧಿಯ ವಿವಿಧ ಯೋಜನೆಗಳನ್ನು ಹಂತಹಂತವಾಗಿ ಅನುಷ್ಠಾನ ಮಾಡುವ ವಿಚಾರವನ್ನು ಸ್ವಸ್ತಿಶ್ರೀಗಳವರು ತಿಳಿಸಿದರು.

ಜಿನಭಜನೆ, ಫಲಪುಷ್ಪಾಲಂಕಾರದಿಂದ ಪೂಜೆ ನೆರವೇರಿದವು. ಅನ್ನಪ್ರಸಾದದ ವ್ಯವಸ್ಥೆ ಸಾಂಗವಾಗಿ ಭಕ್ತರಿಗೆ ಮುದನೀಡಿತು. ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್, ತೀರ್ಥಹಳ್ಳಿಯ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಜೀವಂಧರ್ ಜೈನ, ಶೃಂಗೇರಿಯ ಡಾ. ನಿರಂಜನ್, ಧರಣೇಂದ್ರ ಮಲೆನಾಡು ಜೈನ ಮಿಲನ್ ಸದಸ್ಯರು ಹಾಗೂ ಶಿವಮೊಗ್ಗ, ಜಯಪುರ, ಕೊಪ್ಪ, ಚಿಕ್ಕಮಗಳೂರು, ಸಾಗರ, ಮೂಡಬಿದಿರೆ, ಕಳಸ, ದಕ್ಷಿಣ ಕನ್ನಡ, ಹುಂಚ ಶ್ರಾವಕ-ಶ್ರಾವಿಕೆಯರು ಹಾಗೂ ಕುಂದಾದ್ರಿ ಪರಿಸರದ ಭಕ್ತ ಸಮುದಾಯದವರು ಕುಂದಾದ್ರಿ ಜಾತ್ರೆಯಲ್ಲಿ ಪಾಲ್ಗೊಂಡರು. ರಾತ್ರಿ ಲಕ್ಷದೀಪೋತ್ಸವವು ಪೂರ್ವಪರಂಪರೆಯಂತೆ ಏರ್ಪಡಿಸಲಾಗಿತ್ತು.

Leave A Reply

Your email address will not be published.

error: Content is protected !!