ಮಾಜಿಯನ್ನು ಹಾಡಿಹೊಗಳಿದ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ

0 48

ಶಿಕಾರಿಪುರ : ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಯ ಖುರ್ಚಿ ಮೇಲೆ ಅನೇಕರ ಕಣ್ಣಿದೆ. ಮುಖ್ಯಮಂತ್ರಿ ಹುದ್ದೆ ತಾನಾಗಿಯೇ ಹುಡುಕಿಕೊಂಡು ಬರಬೇಕು. ಬಿಎಸ್ವೈ ರವರಿಗೆ ಅದು ತಾನಾಗಿಯೇ ಒಲಿದು ಹುಡುಕಿಕೊಂಡು ಬಂದಿದ್ದು, ಸರಳ ಸಜ್ಜನಿಕೆಯ ಕರ್ನಾಟಕ ರಾಜ್ಯ ಕಂಡ ಅಪರೂಪದ ಕಣ್ಮಣಿ, ಉತ್ತಮ ರಾಜಕಾರಣಿ ಎಂದರೆ ಅದು ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಬಿಎಸ್ವೈ ರವರನ್ನು ಹೊಗಳಿ ಬಣ್ಣಿಸಿದರು.  

ಇಂದು ತಾಲ್ಲೂಕಿನ ಉಡುತಡಿಯಲ್ಲಿ ಜಿಲ್ಲಾಡಳಿತ ಶಿವಮೊಗ್ಗ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಕರ್ನಾಟಕ ನೀರಾವರಿ ನಿಗಮ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಲೋಕೋಪಯೋಗಿ ಇಲಾಖೆ, ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ಮತ್ತು ನಿರ್ಮಿತಿ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೃ ಮುಖ್ಯಮಂತ್ರಿ ರವರಿಂದ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಡೆದ 12ನೇ ಶತಮಾನದ ಬಸವಣ್ಣನವರ ಆಶಯದಂತೆ ಈಗ ಸರ್ವ ಧರ್ಮಗಳ ಅಭಿವೃದ್ಧಿ ಹರಿಕಾರರಾಗಿ ರೈತರ ಬಗ್ಗೆ ವಿಶೇಷವಾದ ಕಾಳಜಿ ಬಡವರಿಗೆ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸೈಕಲ್ ವಿತರಣೆ ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮಿ ಯೋಜನೆ ಜಾರಿ ಮಾಡುವುದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ ರುವಾರಿಯಾದ ಬಿಎಸ್ವೈ ರವರು ಸಾಮಾಜಿಕ ಬದಲಾವಣೆ ತಂದು ಕ್ರಾಂತಿಕಾರಿ ಬೆಳವಣಿಗೆಗೆ ಪೂರಕ ಚಿಂತನೆ ನಡೆಸಿದ 21ನೇ ಶತಮಾನದ ಬಸವಣ್ಣ ಎಂದರೆ ತಪ್ಪಾಗಲಾರದು ಎಂದು ಹೊಗಳಿದರು.

ಶಿಕಾರಿಪುರವು ಒಂದು ಪುಣ್ಯ ಭೂಮಿಯಾಗಿದ್ದು, 12 ನೇ ಶತಮಾನದಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದವರು ಅಲ್ಲಮಪ್ರಭುರವರು, ಇಂತಹಾ ತಾಲ್ಲೂಕಿನಲ್ಲಿ ಸಾಮಾನ್ಯ ಸೇವಕರಾಗಿ ಬೆಳೆದು ಇಲ್ಲಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಲ್ಲದೇ ರಾಜ್ಯದ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಿದ ಹಿರಿಯ ನಾಯಕರು ಎಂದರೆ ಅದು ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಎಂದರು. 

12 ನೇ ಶತಮಾನಕ್ಕೂ 21 ನೇ ಶತಮಾನಕ್ಕೂ ಕಾಕತಾಳೀಯ ಎಂಬಂತೆ 12 ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲಾ ಧರ್ಮಗಳ ನ್ಯಾಯಕ್ಕಾಗಿ ಹೋರಾಟ ನಡೆಸಿದರೆ 21 ನೇ ಶತಮಾನದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಸರ್ವ ಧರ್ಮಗಳ ಅಭಿವೃದ್ಧಿಗೆ ನ್ಯಾಯ ಒದಗಿಸುವ ಮೂಲಕ ಸರ್ವಧರ್ಮಗಳ ಸಮನ್ವಯ ರೂಪಿಸಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪದ ಅಭಿವೃದ್ಧಿಗೆ 600 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಅದೇ ರೀತಿಯಲ್ಲಿ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಅಲ್ಲಮಪ್ರಭು ಜನಿಸಿದ ಸ್ಥಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಶರಣೆ ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿಯ ಅಭಿವೃದ್ಧಿಗೂ ಕೂಡ ಹೆಚ್ಚಿನ ಆದ್ಯತೆ ನೀಡಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ 25 ಕೋಟಿ ರೂಪಾಯಿ ಅನುದಾನ ಬಯಸಿ ಮನವಿ ಮಾಡಿದ್ದಾರೆ ಅದನ್ನು ನೀಡುವುದಾಗಿ ಭರವಸೆ ನೀಡಿದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಮಾತನಾಡಿ, ನಾನು ಅನೇಕ ಮಠ ಮಂದಿರಗಳ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಮಾಡಿದ್ದೇನೆ ನನಗೀಗ 80 ವರ್ಷ ಮುಗಿದಿದೆ ನಾನು ರಿಟೈರ್ಡ್ ಆಗೋದೂ ಇಲ್ಲ ಟೈಯಡ್ ಆಗೋದೂ ಇಲ್ಲ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ ವಿನಃ ರಾಜಕೀಯದಿಂದ ನಿವೃತ್ತಿ ಹೊಂದಿಲ್ಲ. ಪ್ರತಿಪಕ್ಷಗಳ ನಾಯಕರು ನನ್ನ ಬಗ್ಗೆ ಟೀಕೆ ಟಿಪ್ಪಣಿಗಳು ಮಾಡುತ್ತಾರೆ ಇದು ಸಾಮಾನ್ಯವಾಗಿದ್ದು, ಇದರ ಬಗ್ಗೆ ಗಮನ ನೀಡದೆ ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 150 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ವಿರೋಧ ಪಕ್ಷದವರಿಗೆ ಎಚ್ಚರಿಕೆ ನೀಡಿದರು.

ಬೆಕ್ಕಿನ ಕಲ್ಮಟ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪದ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಸೇರಿತ್ತು ಎಂದು ಕೇಳಿದ್ದೇನೆ ಆದರೆ ಈಗ 21 ನೇ ಶತಮಾನದಲ್ಲಿ ಬಸವಣ್ಣನವರಂತಿರುವ ಬಿಎಸ್ವೈ ರವರ ಸಹಕಾರದಿಂದ ಶರಣೆ ಅಕ್ಕಮಹಾದೇವಿಯ ಜನ್ಮಸ್ಥಳದಲ್ಲಿ ಅಕ್ಕಮಹಾದೇವಿಯ ಪುತ್ಥಳಿಯನ್ನು ಅನಾವರಣಕ್ಕೆ ಅಭೂತಪೂರ್ವ ಜನ ಸೇರಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲರನ್ನೂ ಸಮಾನವಾಗಿ ಅಪ್ಪಿಕೊಂಡು ದಯವೇ ಧರ್ಮದ ಮೂಲವಯ್ಯ ಎಂಬಂತೆ ಎಲ್ಲರಿಗೂ ದಯೆ ಕರುಣೆ ತೋರಿ ಸಹಬಾಳ್ವೆಗೆ ನಿಲುವು ಕಂಡಿದ್ದರು. ಇವನ್ಯಾರವ ಇವನ್ಯಾರವ ಎಂದೆನಿಸಿದೆ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂಬಂತೆ ಬಸವಣ್ಣನವರ ಆಶಯದಂತೆ ಈಗ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ತಮ್ಮ ಅಧಿಕಾರಾವಧಿಯಲ್ಲಿ ಎಲ್ಲಾ ಸಮುದಾಯದ ಏಳಿಗೆಗೆ ಸಾಕಷ್ಟು ಶ್ರಮಿಸಿದ ಸಾಧಕರಾಗಿದ್ದಾರೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ, ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಬೈರತ್ತಿ ಬಸವರಾಜ್, ಸೊರಬ ಶಾಸಕ ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಎನ್ ರುದ್ರೇಗೌಡ, ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಹೆಚ್ ಟಿ ಬಳಿಗಾರ್, ಭಾರತಿ ಶೆಟ್ಟಿ, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಪುರಸಭಾ ಅಧ್ಯಕ್ಷೆ ರೇಖಾಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪುರಸಭಾ ಸದಸ್ಯ ಉಳ್ಳಿ ದರ್ಶನ್ ಮಾಧ್ಯಮಕ್ಕೆ ಹೇಳಿಕೆ ನೀಡಿ, ತಾಲ್ಲೂಕಿನ ಉಡುತಡಿಯಲ್ಲಿ 62 ಅಡಿ ಎತ್ತರದ ಅಕ್ಕಮಹಾದೇವಿಯ ಪುತ್ಥಳಿಯನ್ನು ಅನಾವರಣದ ಕಾರ್ಯಕ್ರಮವು ಸರ್ಕಾರದ ಕಾರ್ಯಕ್ರಮವಾಗಿದ್ದು ಇಲ್ಲಿ ಚುನಾಯಿತ ಪ್ರತಿನಿಧಿಗಳು ಮಾತ್ರ ಭಾಗವಹಿಸಲು ಅವಕಾಶವಿದೆ. ಆದರೆ ಯಾವುದೇ ರೀತಿಯ ಚುನಾವಣೆಯಲ್ಲಿ ಸ್ಪರ್ಧಿಸದ, ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರರವರು ಭಾಗವಹಿಸಿರುವುದು ಅಚ್ಚರಿ ಮೂಡಿಸಿದೆ. ಇದರಿಂದಾಗಿ ತಿಳಿಯುವುದು ಇಲ್ಲಿ ಬಿಎಸ್ವೈ ಮತ್ತು ಬಿವೈಆರ್ ರವರ ದಬ್ಬಾಳಿಕೆ ಎಷ್ಟಿದೆ ಎಂದು. ಕೆ ಹೆಚ್ ಬಿ ಕಾಲೋನಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿಯು ಇನ್ನೂ 45% ಕೆಲಸ ಬಾಕಿ ಇದ್ದು, ಉಡುತಡಿಯಲ್ಲಿ ನಿರ್ಮಾಣವಾಗುತ್ತಿರುವ ದೆಹಲಿ ಮಾದರಿಯ ಅಕ್ಷರದಾಮ ಮಾದರಿಯ ಉದ್ಯಾನವನದಲ್ಲಿಯೂ ಕೂಡ ಅನೇಕ ಕೆಲಸ ಬಾಕಿ ಇದೆ. ಆದರೆ, ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸೋಲಿನ ಹಾಗೂ ಬಿಜೆಪಿ ಪಕ್ಷದ ಸರ್ಕಾರ ಪತನದ ಭೀತಿಯಿಂದ ಅಪೂರ್ಣ ಸ್ಥಿತಿಯಲ್ಲಿರುವ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು  ತಾಲ್ಲೂಕಿನ ಶಾಸಕರು ಹಾಗೂ ಜಿಲ್ಲೆಯ ಸಂಸದರನ್ನೊಳಗೊಂಡಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಉದ್ಘಾಟಿಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ಇದು ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ಆರೋಪಿಸಿದರು.

Leave A Reply

Your email address will not be published.

error: Content is protected !!