ವಿಧಾನಸೌಧದಲ್ಲಿ ಬಂಗಾರಪ್ಪನವರ ಸಂತಾಪ ಸಭೆಯಲ್ಲಿ ಮಾತನಾಡದವರು ಮಾನಸ ಪುತ್ರರಾಗಲು ಹೇಗೆ ಸಾಧ್ಯ ?

0 45

ರಿಪ್ಪನ್‌ಪೇಟೆ: ಸಮಾಜವಾದಿ ನೇತಾರ ವರ್ಣರಂಜಿತ ನಾಯಕ ಎಸ್.ಬಂಗಾರಪ್ಪನವರು ನಿಧನದ ಕುರಿತು ವಿಧಾನಸೌಧದಲ್ಲಿ ಆಯೋಜಿಸಲಾದ ಸಂತಾಪ ಸಭೆಯಲ್ಲಿ ಅವಕಾಶವನ್ನು ನೀಡಲಾದರೂ ಕೂಡಾ ಬಂಗಾರಪ್ಪನವರ ಬಗ್ಗೆ ಗುಣಗಾನ ಮಾಡದವರು ಮಾನಸಪುತ್ರರಾಗಲು ಹೇಗೆ ಸಾಧ್ಯವೆಂದು ಶಾಸಕ ಹರತಾಳು ಹಾಲಪ್ಪ ಹೆಸರು ಹೇಳದೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಮೇ 10 ರಂಧು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಹರತಾಳು ಹಾಲಪ್ಪ ಮತಯಾಚಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ ಐದು ವರ್ಷದ ಅವಧಿಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳಿಗಾಗಿ 36 ಕೋಟಿ ರೂ. ಅನುದಾನವನ್ನು ತಂದಿರುವುದಾಗಿ ವಿವರಿಸಿ ಈ ಹಿಂದೆ 10 ವರ್ಷದ ಅವಧಿಯಲ್ಲಿ ಶಾಸಕರಾಗಿದ್ದವರು ಎಷ್ಟು ಅನುದಾನ ತಂದಿದ್ದಾರೆಂದು ಪ್ರಶ್ನಿಸಿ ಎಂದು ಹೇಳಿ ಈಗಾಗಲೇ ನಾನು ಚುನಾವಣೆಯ ಸಂದರ್ಭದಲ್ಲಿ ರಿಪ್ಪನ್‌ಪೇಟೆಯ ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ವಿನಾಯಕ ವೃತ್ತದಿಂದ ತಲಾ ಒಂದು ಕಿ.ಮೀ. ಡಬಲ್ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದು ಅದರಂತೆ ಸಾಗರ ರಸ್ತೆಯಲ್ಲಿ ಡಬಲ್ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದು ಕಾಮಗಾರಿ ಸಹ ಆರಂಭವಾಗಿದೆ ಉಳಿದ ಇನ್ನೂ ಮೂರು ರಸ್ತೆಗಳನ್ನು ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸುವ ಬಗ್ಗೆ ಸರ್ಕಾರದಿಂದ ಅನುದಾನ ತರುವುದರೊಂದಿಗೆ ಪಳಪಳ ಹೊಳೆಯುವಂತೆ ಮಾಡಲು ನನಗೆ ಮತ ನೀಡಿ ಎಂದು ಮನವಿ ಮಾಡಿದರು.

ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಬಗರ್‌ಹುಕುಂ ಸಾಗುವಳಿ ರೈತರ ಸಮಸ್ಯೆಗೆ ಶಾಸನ ಸಭೆಯ ಒಳಗೆ ಮತ್ತು ಹೊರಗೆ ಹೋರಾಟ ಮಾಡುವುದರೊಂದಿಗೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವವರ ಪರ ಕಾಗೋಡು ಹೋರಾಟದಂತೆ ಉಳುವವನೆ ಹೊಲದೊಡೆಯ ತತ್ವ ಸಿದ್ದಾಂತದಂತೆ ಹೋರಾಟ ನಡೆಸಿ ಶಾಶ್ವತ ಪರಿಹಾಕ ಕೊಡಿಸಲು ನನಗೆ ಈ ಭಾರಿ ಮತ ಕೊಡಿ ಎಂದ ಹೇಳಿ ಬಿಜೆಪಿ ಬಡವರ ದೀನದಲಿತ ಪರವಾದ ಪಕ್ಷವಾಗಿದೆ ಬಿ.ಎಸ್.ಯಡಿಯೂರಪ್ಪನವರ ಕನಸು ನನಸು ಮಾಡಲು ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದರು.

ಹೊಸನಗರ ತಾಲ್ಲೂಕಿನ ವೀರಶೈವ ಸಮಾಜಕ್ಕೆ 8 ಕೋಟಿ ರೂ. ನಾರಾಯಣಗುರು ಮಠಕ್ಕೆ 10 ಕೋಟಿ ರೂ. ಹಾಗೂ 600 ಕ್ಕೂ ಅಧಿಕ ದೇವಸ್ಥಾನಗಳ ಅಭಿವೃದ್ದಿ ಹಾಗೂ 880 ಕೋಟಿ ರೂ. ಗ್ರಾಮೀಣ ರಸ್ತೆಗಳಿಗೆ ಹಾಗೂ ಸೇತುವೆ ಕಾಲುಸಂಕ ಹೀಗೆ ಹಲವು ಅಭಿವೃದ್ದಿ ಕಾರ್ಯಗಳಿಗೆ ಜಾತಿ ಬೇದ ಭಾವ ತೊರದೆ ಎಲ್ಲರಿಗೂ ಸಮಾನತೆ ನೀಡಿ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಸಭೆಯಲ್ಲಿ ವಿವರಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಅಭ್ಯರ್ಥಿ ಪರ ಮತಯಾಚಿಸಿ, ಸಾಗರ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹರತಾಳು ಹಾಲಪ್ಪ ಶ್ರಮಿಸಿದ್ದಾರೆ. ಈ ಭಾರಿಯಲ್ಲಿ ಅವರನ್ನು ಗೆಲಿಸುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ದಿಯಾಗುವುದರೊಂದಿಗೆ ಬಗರ್ ಹುಕುಂ ಸಮಸ್ಯೆ ಅರಣ್ಯ ಒತ್ತುವರಿದಾರರ ಸಮಸ್ಯೆಗೆ ಶಾಸನ ಸಭೆಯಲ್ಲಿ ಧ್ವನಿ ಎತ್ತುವುದರೊಂದಿಗೆ ಶಾಶ್ವತ ಪರಿಹಾರ ಕಲ್ಪಿಸುವರೆಂದು ಹೇಳಿ ಮೇ. 10 ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿಪಂ ಮಾಜಿ ಸದಸ್ಯೆ ಎ.ಟಿ.ನಾಗರತ್ನಮ್ಮ, ಸುರೇಶ್‌ಸ್ವಾಮಿರಾವ್, ಬಿಜೆಪಿ ಮುಖಂಡರಾದ ಡಾ.ರಾಜಾನಂದಿನಿ, ತಲ್ಲೂರು ರಾಜು, ಕೆರೆಕೈ ಪ್ರಸನ್ನ, ಗಣಪತಿ ಬಿಳಗೋಡು, ಎಂ.ಬಿ.ಮಂಜುನಾಥ, ಮಂಜುಳಾ ಕೇತಾರ್ಜಿರಾವ್, ಬಿ.ಯುವರಾಜ್, ವೀರೇಶ್‌ ಆಲವಳ್ಳಿ, ಬೆಳ್ಳೂರು ತಿಮ್ಮಪ್ಪ, ಹೊನಗೋಡು ರತ್ನಾಕರ್, ಸುರೇಶ್‌ಸಿಂಗ್ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.

ಬೈಕ್ ರ‍್ಯಾಲಿ :
ಬಹಿರಂಗ ಸಭೆಗೂ ಮುನ್ನ ರಿಪ್ಪನ್‌ಪೇಟೆಯ ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂದಿರದ ಬಳಿಯಿಂದ ಸಾವಿರಾರು ಬೈಕ್‌ಗಳಲ್ಲಿ ಕಾರ್ಯಕರ್ತರು ನಾಲ್ಕು ರಸ್ತೆಯಲ್ಲಿ ಬೈಕ್ ರ‍್ಯಾಲಿ ನಡೆಸಿದರು.

Leave A Reply

Your email address will not be published.

error: Content is protected !!