ಸಂತರ ಮೇಲಿನ ದೌರ್ಜನ್ಯ ತಡೆಯಲು ಸಾಧು-ಸಂತರು ಸಂಘಟಿತರಾಗಬೇಕು ; ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ

0 34


ಹೊಸನಗರ : ಇತ್ತೀಚೆಗೆ ಸಂತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಸಂತರುಗಳ ಮಾನಹಾನಿ ಮಾಡುವಂತ ಪ್ರಸಂಗಗಳು ನಿರಂತರವಾಗಿ ನಡೆಯುತ್ತಿದೆ. ಇವೆಲ್ಲವುಗಳು ನಿಲ್ಲಬೇಕು ಎಂದರೆ ಸಂತರ ಸಂಘಟನೆಗಳು ರೂಪುಗೊಳ್ಳಬೇಕು ಎಂದು ಅಖಿಲ ಭಾರತ ಸಂತ ಸಮಿತಿ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ಶ್ರೀ ಮಠ ಚೀಲಂಬಿ, ಮಂಗಳೂರು ಇದರ ಪೀಠಾಧ್ಯಕ್ಷರಾದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮಿಗಳು ಹೇಳಿದರು.


ಪ್ರಸಿದ್ದ ಪ್ರವಾಸಿ ತಾಣ ಹಾಗೂ ಶ್ರದ್ಧಾ ಕೇಂದ್ರವಾದ ಕೊಡಚಾದ್ರಿ ಪರ್ವತದಲ್ಲಿ ಮಂಗಳವಾರ ನಡೆದ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಇದರ ಮೊದಲ ಸಭೆ ಹಾಗೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಮಿತಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿ ಮಾಡನಾಡಿದ ಅವರು
ಸನಾತನ ಹಿಂದೂ ಧರ್ಮವನ್ನು ನಿರಂತರ ಕಾಪಾಡಿಕೊಂಡು ಬರುತ್ತಿರುವ ಸಾಧು ಸಂತರ ಮೇಲೆ ಜನರ ಗೌರವ ಕಡಿಮೆಯಾಗುತ್ತಿದೆ. ಸಂತರನ್ನು ಕಳ್ಳರಂತೆ ನಡೆಸಿಕೊಳ್ಳಲಾಗುತ್ತಿದೆ‌‌. ಸರ್ಕಾರ ಕೂಡ ಸಂತರ ಬೆಂಬಲಕ್ಕೆ ಯಾವುದೇ ಕಾರ್ಯಕ್ರಮವನ್ನು ಇದುವರೆಗೆ ಹಮ್ಮಿಕೊಳ್ಳಲಿಲ್ಲ. ಸಾಧು ಸಂತರ ಸಂಘಟನೆಗಾಗಿ ಈ ಸಮಿತಿಯನ್ನು ರಚನೆ ಮಾಡಿದ್ದು,ಮುಂದಿನ ದಿನಗಳಲ್ಲಿ ಎಲ್ಲಾ ಸಾದು ಸಂತರ ಹಿತ ರಕ್ಷಣೆ ಈ ಸಮಿತಿಯಿಂದ ನಡೆಯಲಿದೆ ಎಂದರು.


ಸಂತರ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಧಾರವಾಡದ ಶ್ರೀ ಕ್ಷೇತ್ರ ದ್ವಾರಾಪುರ ಸೇವಾ ತತ್ವ ಸಮನ್ವಯ ಪರಮಾತ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀ ಪರಮಾತ್ಮಾಜಿ ಮಹರಾಜ್ ಅವರು ಮಾತನಾಡಿ, ಇದೇ ಮೊದಲ ಭಾರಿಗೆ ಸಾಧು ಸಂತರ ಸಂಘಟನೆಯ ಸಮಿತಿಯೊಂದು ರಚನೆಯಾಗುತ್ತಿದೆ. ಸಾಧು ಸಂತರ ರಕ್ಷಣೆಯ ಕಾರಣಕ್ಕೆ ಈ ಸಮಿತಿ ಅನಿವಾರ್ಯ ಕೂಡ ಆಗಿದೆ. ರಾಜ್ಯಾದ್ಯಂತ ಇರುವ ಸುಮಾರು 4500 ಮಠಗಳ 27 ಸಾವಿರ ಸಾಧು ಸಂತರನ್ನು ಭೇಟಿ ಮಾಡಿ ಸಮಿತಿಗೆ ಸೇರಿಸಿಕೊಂಡು ಸಂಘಟನೆಗೆ ಬಲ ನೀಡುವ ಉದ್ದೇಶ ಹೊಂದಲಾಗಿದೆ. ರಾಜ್ಯ ಮಟ್ಟದ ಸಂತರ ಸಮಿತಿಯ ಮೊದಲ ಸದಸ್ಯರು ನಾವಾಗಿದ್ದೇವೆ ಎಂಬುದು ಹೆಮ್ಮೆಯ ವಿಚಾರವಾಗಿದೆ. ರಾಜ್ಯದ ಎಲ್ಲಾ ಸಂತರ ಭೇಟಿ ಮಾಡಿ ಅವರುಗಳ ಅಭಿಪ್ರಾಯ ಸಂಗ್ರಹಿಸಿ ಜೂನ್ ತಿಂಗಳ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಭೆ ನಡೆಸಿ, ಸಂಘಟನೆಯ ಬಲ ಹೆಚ್ಚಿಸಲಾಗುತ್ತದೆ. ನಂತರ ಇದೇ ನವೆಂಬರ್ ತಿಂಗಳಲ್ಲಿ ಕಾಶಿಯಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ಸಾದು ಸಂತರ ಸಭೆಗೆ ರಾಜ್ಯದ ಎಲ್ಲಾ ಸಂತರುಗಳು ಭಾಗವಹಿಸುವುದರ ಮೂಲಕ ಸಂತರ ಸಮಿತಿ ಅಧಿಕೃತವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಲಿದೆ ಎಂದರು.

ಕೊಡಚಾದ್ರಿ ಅಭಿವೃದ್ಧಿಗೆ ಸಂತರ ಸಮಿತಿ ಬೆಂಬಲ :
ವನ್ಯಜೀವಿ ವಿಭಾಗದ ವಿಪರೀತ ಕಟ್ಟುಪಾಡುಗಳಿಂದಾಗಿ ನೆನೆಗುದಿಗೆ ಬಿದ್ದಿರುವ ಕೊಡಚಾದ್ರಿ ಪರ್ವತದ ಅಭಿವೃದ್ದಿಗೆ ಸಂತರ ಸಮಿತಿಯ ಮೂಲಕ ಸರಕಾರದ ಮತ್ತು ವನ್ಯಜೀವಿ ಇಲಾಖೆಯ ಮೇಲೆ ಒತ್ತಡ ತಂದು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿ ಸಾಧಿಸುವುದು ಮತ್ತು ಸಾಧು ಸಂತರ ಶ್ರದ್ಧಾಕೇಂದ್ರವಾದ ಕೊಡಚಾದ್ರಿಯ ಚಿತ್ರಾಮೂಲಕ್ಕೆ ಭಕ್ತರು ಮತ್ತು ಸಂತರನ್ನು ಹೋಗದಂತೆ ತಡೆ ಒಡ್ಡಲಾದ ವನ್ಯ ಜೀವಿ ವಿಭಾಗದ ನಿಯಮದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸಂತರ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.


ಸಮಿತಿಯ ಕಾರ್ಯದರ್ಶಿಗಳಾದ ಏಕ ಜಾತಿ ಧರ್ಮಪೀಠ ದ್ವಾರಕಾಮಯಿ ಮಠ ಶಂಕರಪುರ, ಉಡುಪಿ ಇದರ ಪೀಠಾಧ್ಯಕ್ಷರಾದ ಸ್ವಾಮಿ ಶ್ರೀ ಸಾಯಿ ಈಶ್ವರ ಗುರೂಜಿ, ಚಿತ್ರದುರ್ಗ ಮಾದಾರ ಚನ್ನಯ್ಯ ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮತ್ತು ಚಿತ್ರದುರ್ಗ ಮದ್ರಾಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ ಮತ್ತು ಕಡೂರಿನ ಅಯ್ಯಪ್ಪ ಧರ್ಮಪೀಠದ ಭದ್ರರಾಜ ಸ್ವಾಮೀಜಿ ಸೇರಿದಂತೆ ವಿವಿಧ ಧರ್ಮಪೀಠದ ಸ್ವಾಮೀಜಿಗಳು ಮತ್ತು ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಸಂಪದಮನೆ ಹಾಗೂ ಅರ್ಚಕ ನಾಗೇಂದ್ರ ಜೋಗಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!