ಸರ್ಕಾರಿ ಕನ್ನಡ ಶಾಲೆಯ ಮಕ್ಕಳು ಸದೃಢರಾಗಿರುತ್ತಾರೆ ; ಮೂಲೆಗದ್ದೆ ಶ್ರೀಗಳು

0 354

ಹೊಸನಗರ: ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳು ಸಂಸ್ಕೃತ ಪಂಡಿತರಾಗಿ ಸದೃಢರಾಗಿರುತ್ತಾರೆ ಎಂದು ಹೊಸನಗರ ತಾಲ್ಲೂಕು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಹೇಳಿದರು.

ಹೊಸನಗರ ತಾಲ್ಲೂಕಿನ ಮಾವಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಶಾಲೆಯ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಶಾಲೆ ಸರ್ಕಾರಿ ಶಾಲೆ ಎಂಬ ಕೀಳರಿಮೆ ಪೋಷಕ ವರ್ಗದವರಿಂದ ಹೋಗಬೇಕು ಇಲ್ಲವಾದರೇ ಮುಂದಿನ ದಿನದಲ್ಲಿ ಸರ್ಕಾರಿ ಶಾಲೆ ಉಳಿಯುವುದೇ ಕಷ್ಟ ಕನ್ನಡ ಶಾಲೆಯ ಜೊತೆಗೆ ಕರ್ನಾಟಕದಲ್ಲಿ ಕನ್ನಡ ಭಾಷೆ ನಾವೇ ಹುಡುಕುವಂತೆ ಆಗುತ್ತದೆಲ ನೂರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಗೌರವಿಸುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ.

ನಮ್ಮ ಭಾಷೆ ಸಂಸ್ಕೃತಿ ಉಳಿಸಬೇಕಾದರೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿ ನಮ್ಮ ನಾಡು – ನುಡಿ ಸಂಸ್ಕೃತಿ ಉಳಿಸಲು ಮುಂದಾಗಬೇಕು ನಮ್ಮ ಉಸಿರು ಕನ್ನಡ ಕರ್ನಾಟಕವಾಗಿರಬೇಕು. ಇತರೆ ಭಾಷೆ ಕಲಿಯುವುದು ಬೇಡವೆನ್ನುವುದಿಲ್ಲ. ಆದರೆ ಕನಿಷ್ಟ 10ನೇ ತರಗತಿಯವರೆಗೆ ಕನ್ನಡ ಕಲಿಸಿ ಕನ್ನಡ ಉಳಿಸಿ ಕರ್ನಾಟಕದ ಹೆಸರು ವಿಶ್ವಕ್ಕೆ ಪ್ರಸಿದ್ಧಿ ಪಡೆಯುವಂತೆ ಮಾಡಿ ಎಂಬುದೇ ನನ್ನ ಆಸೆ ಎಂದರು.

ಹೊಸನಗರ ಬಿಇಒ ಕೃಷ್ಣಮೂರ್ತಿ ಮಾತನಾಡಿ,
ಸರ್ಕಾರಿ ಶಾಲೆಯ ಮಕ್ಕಳು ಯಾವುದರಲ್ಲಿಯೂ ಕಡಿಮೆಯಿಲ್ಲ. ಹೊಸನಗರ ತಾಲ್ಲೂಕಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ‌‌.93.30ರಷ್ಟು ಈ ವರ್ಷ ಫಲಿತಾಂಶ ಬಂದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಹೊಸನಗರ ತಾಲ್ಲೂಕಿಗೆ ಬಂದಿರುವುದು ಹೆಮ್ಮೆಯ ವಿಷಯವಾಗಿದೆ‌. ನಮ್ಮ ತಾಲ್ಲೂಕಿನಲ್ಲಿ 41 ಪ್ರೌಢ ಶಾಲೆ ಹಾಗೂ 200ಕ್ಕಿಂತಲ್ಲೂ ಹೆಚ್ಚು ಕಿರಿಯ ಹಿರಿಯ ಪ್ರಾಥಮಿಕ ಪಾಠ ಶಾಲೆಗಳಿವೆ. ಸುಮಾರು 16 ಸಾವಿರದಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ವಿಜ್ಞಾನ ಪ್ರಯೋಗಾಲಯ, ಕ್ರೀಡೆಯಲ್ಲಿ ರಾಜ್ಯ ರಾಷ್ಟ್ರ ಮಟ್ಟದವರೆಗೆ ಹೋಗಿ ಪ್ರಶಸ್ತಿ ಪಡೆದಿದ್ದಾರೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಓದಿನಿಂದ ಹಿಡಿದು ಎಲ್ಲ ರಂಗಗಳಲ್ಲಿಯೂ ಮುಂದಿದ್ದು ಪೋಷಕ ವರ್ಗ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಉತ್ತಮ ಶಿಕ್ಷಣ ಪಡೆಯಲಿ ಸರ್ಕಾರಿ ಶಾಲೆಗಳಲ್ಲಿ ಬೆಳಿಗ್ಗೆ ಹಾಲು, ಮಧ್ಯಾಹ್ನ ಬಿಸಿಯೂಟದ ಜೊತೆಗೆ ವಾರಕ್ಕೆ ಮೂರು ದಿನ ಪೌಷ್ಟಿಕಾಂಶ ಭರಿತ ಮೊಟ್ಟೆ, ಚಿಕ್ಕಿ ಕೊಡುತ್ತೇವೆ. ಪ್ರತಿ ವರ್ಷ ಬಟ್ಟೆ, ಶೂ ಹಾಗೂ ಪುಸ್ತಕಗಳನ್ನು ವಿತರಿಸುತ್ತೇವೆ. ನುರಿತ ಶಿಕ್ಷಕ ವರ್ಗವಿದೆ ಇಷ್ಟೆಲ್ಲ ಸೌಲಭ್ಯಗಳಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಎಂಬ ಪ್ರಶ್ನೆ ಕಾಡುತ್ತಿದ್ದು ಮುಂದಿನ ದಿನದಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕೆಂದು ಮನವಿ ಮಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಗುರುರಾಜ್ ಆರ್ ಮಾತನಾಡಿ, ಸರ್ಕಾರಿ ಶಾಲೆ ಉಳಿಯಬೇಕಾದರೆ ಪೋಷಕರು ಶಾಲೆಯ ಶಿಕ್ಷಕರು ಮತ್ತು ಶಾಲೆಯ ಎಸ್‌ಡಿಎಂಸಿಯವರ ನಡುವೆ ಹೊಂದಾಣಿಕೆ ಮುಖ್ಯವಾಗಿದ್ದು ಪ್ರತಿಯೊಬ್ಬ ತಂದೆ ತಾಯಿಯವರು ಶಾಲೆಗೆ ಬರಬೇಕು. ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು‌. ಶಾಲೆಯ ವಾತಾವರಣ ತಿಳಿದುಕೊಳ್ಳಬೇಕು.‌ ನಮ್ಮ ಮಕ್ಕಳು ಯಾವ ಮಟ್ಟದಲ್ಲಿ ಓದುತ್ತಿದ್ದಾರೆ ಎಂದು ತಿಳಿದುಕೊಂಡು ಶಾಲೆಯ ಬಗ್ಗೆ ಅಕ್ಕ-ಪಕ್ಕದವರಿಗೆ ತಿಳಿಸಿದರೇ ಸರ್ಕಾರಿ ಶಾಲೆಯ ಬಗ್ಗೆ ಪೋಷಕ ವರ್ಗದವರನ್ನು ಸೆಳೆಯಲು ಅನುಕೂಲವಾಗುತ್ತದೆ. ಇದರ ಜೊತೆಗ ಎಸ್‌ಡಿಎಂಸಿಯವರು ಮತ್ತು ಶಿಕ್ಷಕರು ಎಲ್ಲ ವಿಷಯದಲ್ಲಿಯೂ ಹೊಂದಾಣಿಕೆಯಿಂದ ರಜೆ ದಿನಗಳಲ್ಲಿ ಮನೆ-ಮನೆಗೆ ಭೇಟಿ ಮಾಡಿ ಮಕ್ಕಳನ್ನು ಸೆಳೆಯುವ ಪ್ರಯತ್ನ ಮಾಡಬೇಕೆಂದರು.

ಈ ಕಾರ್ಯಕ್ರಮದಲ್ಲಿ ಮಾರಿಗುಡ್ಡ ಶಾಲೆಯ ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಬೇಂದ್ರಪ್ಪ, ಪಟ್ಟಣ ಪಂಚಾಯತಿ ಸದಸ್ಯರಾದ ಹಾಲಗದ್ದೆ ಉಮೇಶ್, ಕೆ.ಕೆ ಅಶ್ವಿನಿಕುಮಾರ್, ಗುಲಾಬಿ ಮರಿಯಪ್ಪ, ಗಾಯಿತ್ರಿ ನಾಗರಾಜ್, ಕೃಷ್ಣವೇಣಿ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಚಂದ್ರಮೌಳಿ ಗೌಡ, ಕಳೂರು ಸೊಸೈಟಿಯ ಅಧ್ಯಕ್ಷರಾದ ದುಮ್ಮ ವಿನಯ್ ಕುಮಾರ್, ಅಕ್ಷರ ದಾಸೋಹ ಸಂಯೋಜನಾಧಿಕಾರಿ ನಾಗರಾಜ್, ಕರಿಬಸಪ್ಪ, ಪರಮೇಶ್ವರಪ್ಪ, ಉಪಾಧ್ಯಕ್ಷೆ ಸಹನ, ಅಶ್ವಿನಿ ಪಂಡಿತ್, ಸುಜಾತ ಸುರೇಶ್, ಎಸ್‌ಡಿಎಂಸಿ ಮಾಾಜೀ ಅಧ್ಯಕ್ಷ ರಾಘವೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!