ಪ್ರಾಣಿ-ಪಕ್ಷಿಗಳಿಗೆ ನೀರುಣಿಸುತ್ತಿರುವ ಅರಣ್ಯ-ಪೊಲೀಸ್ ಇಲಾಖೆ !

0 430

ರಿಪ್ಪನ್‌ಪೇಟೆ: ಇಲ್ಲಿನ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮುಂಜಾನೆ ನೀರು ತೊಟ್ಟಿಯನ್ನು ಹಿಡಿದುಕೊಂಡು ಕಾಡಿಗೆ ತೆರಳಿದ್ದರು ಬಿಸಿಲಿನಿಂದ ನೀರಿಲ್ಲದೇ ಪರಿತಪಿಸುತ್ತಿರುವ ಪ್ರಾಣಿ- ಪಕ್ಷಿಗಳಿಗೆ ನೀರುಣಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.

ಮಲೆನಾಡಿನಲ್ಲಿ ಬಿಸಿಲ ತಾಪಕ್ಕೆ ಭೂಮಿ ಕೆಂಡದಂತೆ ಸುಡುತ್ತಿದೆ. ನೀರಿನ ಮೂಲಗಳು ಬತ್ತಿ ಬರಿದಾಗುತ್ತಿವೆ. ಪ್ರತಿನಿತ್ಯ ಜಲಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಹಾಗೆಯೇ ಒಂದು ಕ್ಷಣ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಸ್ಥಿತಿಯ ಬಗ್ಗೆ ಯೋಚಿಸಲೇ ಬೇಕಾಲ್ಲವಾ……. ನೀರಿನ ಮೂಲಗಳು ಬರಿದಾಗಿರುವಾಗ ಇವುಗಳ ಬಾಯಾರಿಕೆ ನೀಗಲು ನೆರವಾಗುವವರು ಯಾರು…?

ಹೌದು, ಯಾವುದೇ ಜೀವಿಗಳಾದರೂ ಅವುಗಳ ದೇಹದ ತೂಕಕ್ಕೆ ತಕ್ಕಂತೆ ನಿರ್ದಿಷ್ಟ ಪ್ರಮಾಣದ ನೀರು ಕುಡಿಯಲೇಬೇಕು. ಮನುಷ್ಯ ಕಷ್ಟ ಪಟ್ಟಾದರೂ ಕುಡಿಯಲು ನೀರು ದಕ್ಕಿಸಿಕೊಳ್ಳುತ್ತಾನೆ. ಆದರೆ ಪ್ರಾಣಿ-ಪಕ್ಷಿಗಳ ಪಾಡು ಹೇಳತೀರದು ಅವು ನೀರು ಸಿಗದೆ ಕೆಲವೂಮ್ಮೆ ಸಾವನ್ನಪ್ಪುತ್ತವೆ. ಆದ್ದರಿಂದ ಇಂತಹ ಪ್ರಾಣಿ-ಪಕ್ಷಿಗಳ ದಾಹ ನೀಗುವ ಕುರಿತು ಮನುಷ್ಯರಾದ ನಾವು ಯೋಚಿಸಬೇಕಿದೆ. ಈ ಹಿನ್ನಲೆಯಲ್ಲಿ ‘ಪಕ್ಷಿಗಳಿಗೆ ನೀರುಣಿಸಿ ಪಕ್ಷಿ ಸಂಕುಲ ಉಳಿಸಿ’ ಎಂಬ ಘೋಷವಾಕ್ಯದಡಿಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಹಾಗೂ ಪ್ರಾಣಿ ಪಕ್ಷಿ ಪ್ರಿಯಾ ಬಳಗ, ಪೋಸ್ಟ್ ಮ್ಯಾನ್ ಬಳಗದ ವತಿಯಿಂದ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ವಿನೂತನ ಅಭಿಯಾನಕ್ಕೆ ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಕರ್ತವ್ಯದ ಒತ್ತಡದ ನಡುವೆಯೂ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ವೈ. ನಿಂಗರಾಜ್ ನೇತೃತ್ವದ ಸಿಬ್ಬಂದಿ ತಂಡ ಹಾಗೂ ಹೊಸನಗರ ವಲಯ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಅಕ್ಷಯ್ ನೇತೃತ್ವದ ಸಿಬ್ಬಂದಿ ತಂಡ ಇಲ್ಲಿನ ಸರ್ಕಾರಿ ಕಛೇರಿಗಳಲ್ಲಿ ಮೀಸಲು ಅರಣ್ಯ ಪ್ರದೇಶದ ಕಣಬಂದೂರು, ಮೂಗುಡ್ತಿ ಕಾರಗೋಡು ಹಾಗೂ ವರನಹೊಂಡ ಅರಣ್ಯ ಪ್ರದೇಶದಲ್ಲಿ ಗಿಡಮರಗಳಿಗೆ ತೊಟ್ಟಿಗಳನ್ನು ಅಳವಡಿಸಿ ತೊಟ್ಟಿಗಳಿಗೆ ನೀರುಣಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪಿಎಸ್‌ಐ ನಿಂಗರಾಜ್ ಕೆ.ವೈ.ಮಲೆನಾಡ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು ಪ್ರಾಣಿ ಪಕ್ಷಿಗಳಿಗೆ ಎಲ್ಲೂ ಕೂಡಾ ನೀರು ಸಿಗುವ ಅವಕಶ ಇಲ್ಲದಂತಾಗಿದೆ. ಇದನ್ನು ಮನಗೊಂಡು ನಮ್ಮ ಕೈಲಾದಂತಹ ಸಣ್ಣ ಸೇವೆಯನ್ನು ಮಾಡುವಂತೆ ಯೋಚನೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿ ಸಾರ್ವಜನಿಕರು ತಮ್ಮ ತಮ್ಮ ಮನೆಯ ಸುತ್ತಮುತ್ತ ನೀರಿನ ತೊಟ್ಟಿಗಳನ್ನು ಅಳವಡಿಸುವ ಮೂಲಕ ಪ್ರಾಣಿ-ಪಕ್ಷಿಗಳ ಜೀವಸಂಕುಲಕ್ಕೆ ನೀರು ಉಣಿಸುವ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹೊಸನಗರ ವಯಲ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಅಕ್ಷಯ್ ಕುಮಾರ್, ಪೋಸ್ಟ್ ಮ್ಯಾನ್ ಬಳಗದ ರಫಿ ರಿಪ್ಪನ್‌ಪೇಟೆ, ಪತ್ರಕರ್ತ ಸೆಬಾಸ್ಟಿನ್‌ ಮ್ಯಾಥ್ಯೂಸ್, ಆರಣ್ಯ ಇಲಾಖೆಯ ಸಿಬ್ಬಂದಿ ಭರತ್, ಹರೀಶ್, ನಾಗರಾಜ, ಯಶ್ವಂತ್, ಪೊಲೀಸ್ ಸಿಬ್ಬಂದಿಗಳಾದ ಉಮೇಶ್, ಯೋಗೇಂದ್ರ, ಪ್ರವೀಣ್, ಶಿವಕುಮಾರ್‌ ನಾಯಕ್, ಮಧುಸೂಧನ್ ಇನ್ನಿತರರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!