ಸರ್ಕಾರದ ಹಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಬರಿಗೈಯಲ್ಲಿ ಬಂದು ವಿರೋಧ ಪಕ್ಷಗಳಿಗೆ ಟೀಕಿಸಿ ಹೋದ ಮುಖ್ಯಮಂತ್ರಿ ; ಬಿಜೆಪಿ ಖಂಡನೆ

0 268

ಚಿಕ್ಕಮಗಳೂರು: ಗ್ಯಾರಂಟಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಭಾನುವಾರ ಇಲ್ಲಿ ಜಿಲ್ಲಾಡಳಿತದಿಂದ ಆಯೋಜನೆಗೊಂಡಿದ್ದ ಕಾಂಗ್ರೆಸ್ ಸಮಾವೇಶಕ್ಕೆ ಬರಿಗೈಯಲ್ಲಿ ಬಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಯೋಜನೆ, ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯೊಂದಿಗೆ ವಿರೋಧ ಪಕ್ಷಗಳನ್ನು ಟೀಕಿಸಿ ಹೋದ ಮುಖ್ಯಮಂತ್ರಿ ನಡೆಯನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದ್ದಾರೆ.

ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿರುವುದರಿಂದ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಬಹುದೆಂದು ಜಿಲ್ಲೆಯ ಜನರು ನಿರೀಕ್ಷಿಸಿದ್ದರು. ಆದರೆ, ಯಾವುದೇ ಹೊಸ ಯೋಜನೆ, ಕಾರ್ಯಕ್ರಮಗಳೊಂದಿಗೆ ಬಾರದೆ ಬರಿಗೈಯಲ್ಲಿ ಬಂದಿದ್ದ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಕಾಮಗಾರಿ ಮುಗಿದಿದ್ದ ಯೋಜನೆಗಳನ್ನು ಉದ್ಘಾಟಿಸಿ ಹಿಂದಿರುಗಿದ್ದು ಜಿಲ್ಲೆಯ ಜನರಲ್ಲಿ ತೀವ್ರ ನಿರಾಸೆಗೊಳಿಸಿದೆ ಎಂದು ಅವರು ಭಾನುವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಡಳಿತ ಒಂದು ವಾರದಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಸರ್ಕಾರದ ಹಣವನ್ನು ವ್ಯಯಿಸಿ ಕಾರ್ಯಕ್ರಮ ಆಯೋಜಿಸಿತ್ತು. ಎಲ್ಲವೂ ನಿಯಮಾನುಸಾರವೇ ನಡೆಯಬೇಕಿತ್ತು. ಆದರೆ, ಅದು ಸರ್ಕಾರಿ ಕಾರ್ಯಕ್ರಮದ ಬದಲು ಕಾಂಗ್ರೆಸ್ ಸಮಾವೇಶವಾಗಿ ಪರಿವರ್ತನೆಗೊಂಡಿತ್ತು. ಮುಖ್ಯ ವೇದಿಕೆಯಲ್ಲಿ ಮಾಜಿ ಸಚಿವೆ ಮೋಟಮ್ಮ, ರಾಜ್ಯ ಸಭೆ ಮಾಜಿ ಸದಸ್ಯ ಹನುಂತಯ್ಯ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ವೇದಿಕೆ ಹಂಚಿಕೊಂಡಿದ್ದು, ಜನರ ದುಡ್ಡಲ್ಲಿ ಕಾಂಗ್ರೆಸ್ ಸಮಾವೇಶವಾಗಿ ಪರಿವರ್ತನೆಗೊಂಡಿದ್ದಕ್ಕೆ ನಿದರ್ಶನವಾಗಿತ್ತು ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶಿವಕುಮಾರ್ ಮಾತನಾಡುವ ಬದಲು ನಮ್ಮ ಪಕ್ಷದ ಮಾಜಿ ಸಚಿವ ಡಾ.ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ನಿಂದಿಸಿ, ವಿರೋಧ ಪಕ್ಷ ಬಿಜೆಪಿಯನ್ನು ಟೀಕಿಸುವ ಮೂಲಕ ಗ್ಯಾರಂಟಿ ಫಲಾನುಭವಿಗಳ ಹೆಸರಿನಲ್ಲಿ ಸರ್ಕಾರದ ಹಣ ಪೋಲಾಗಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಈ ಸಮಾವೇಶಕ್ಕೆ ಫಲಾನುಭವಿಗಳ ಹೆಸರಿನಲ್ಲಿ ಜನರನ್ನು ಕರೆ ತರಲು ಕೆಎಸ್‌ಆರ್‌ಟಿಸಿ ಹಾಸನ ವಿಭಾಗದಿಂದ ಸುಮಾರು ಮೂರು ನೂರು ಪ್ರಯಾಣಿಕರ ಬಸ್‌ಗಳನ್ನು ಬಳಸಿಕೊಂಡಿದ್ದು, ನಿತ್ಯ ಸಂಚರಿಸುವ ಮಾರ್ಗಗಳಲ್ಲಿ ಪ್ರಯಾಣಿಕರು ಪರದಾಡಲು ಜಿಲ್ಲಾಡಳಿತವೇ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.

ಇನ್ನು ಸಮಾವೇಶಕ್ಕೆ ಬಂದಿದ್ದ ಹೆಚ್ಚಿನವರು ಫಲಾನುಭವಿಗಳೇ ಆಗಿರಲಿಲ್ಲ. ಗ್ಯಾರಂಟಿ ಸವಲತ್ತುಗಳನ್ನು ಕೊಡಿಸುವ ಭರವಸೆಗಳೊಂದಿಗೆ ಜನರನ್ನು ಕರೆತರಲಾಗಿತ್ತು. ಭಾಗವಹಿಸಿದ್ದ ಹೆಚ್ಚಿನವರು ಗ್ಯಾರಂಟಿ ಸೌಲಭ್ಯಗಳು ದೊರಕದಿರುವ ಬಗ್ಗೆ ಅರ್ಜಿಗಳನ್ನು ಹಿಡಿದಿದ್ದರು. ಆದರೆ, ಅವರ ಸಮಸ್ಯೆಗಳನ್ನು ಆಲಿಸದೆ ಸಿಎಂ ತೆರಳಿದನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!