ಮತ್ತೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆರ್ ಎಂ ಮಂಜುನಾಥ ಗೌಡ

0 50

ಶಿವಮೊಗ : ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಅನರ್ಹತೆಗೊಂಡಿದ್ದ ಆದೇಶವನ್ನು ಹೈಕೋರ್ಟ್ ಸೂಚನೆ
ಮೇರೆಗೆ ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಅವರ ಆದೇಶವನ್ನು ಅಪರ ನಿಬಂಧಕರ ನ್ಯಾಯಾಲಯ
ರದ್ದುಗೊಳಿಸಿದ್ದರಿಂದ ಆರ್.ಎಂ. ಮಂಜುನಾಥ ಗೌಡರು ಮತ್ತೆ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

ಆರ್.ಎಂ ಮಂಜುನಾಥ ಗೌಡರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿದ್ದವರು. 29(ಸಿ) ಸಹಕಾರ ಕಾಯ್ದೆ ಅಡಿಯಲ್ಲಿ ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಅವರ ನಿರ್ದೇಶಕ ಸ್ಥಾನವನ್ನು ರದ್ದು ಮಾಡಿತ್ತು. ಇದರ ವಿರುದ್ದ ಅವರು ಕಾನೂನು ಹೋರಾಟ ನಡೆಸಿದ್ದರು. ನ್ಯಾಯಾಲಯ ಸರ್ಕಾರದ ಆದೇಶಕ್ಕೆ ತಡಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯ ನಡುವೆ ಡಿಸಿಸಿ ಬ್ಯಾಂಕಿಗೆ ಹೊಸ ಅಧ್ಯಕ್ಷರು ಕೂಡ ನೇಮಕವಾಗಿದ್ದರು. ಆದರೆ ಈಗ ಅವರ ಸದಸ್ಯತ್ವವನ್ನು ಊರ್ಜಿತಗೊಳಿಸಿ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಡಿಸಿಸಿ ಬ್ಯಾಂಕಿನ ಬೆಳವಣಿಗೆಗೆ ಹೊಸ ತಿರುವು ಸಿಕ್ಕಂತಾಗಿದೆ. ಇಂದು ಬೆಳಿಗ್ಗೆ ಆರ್.ಎಂ. ಮಂಜುನಾಥ ಗೌಡರು ಮತ್ತು ಕೆಲ ನಿರ್ದೇಶಕರು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಸಹಕಾರ ನಿಬಂಧಕರಿಗೆ ನ್ಯಾಯಾಲಯದ ಆದೇಶದ ಪ್ರತಿಯನ್ನು ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥಗೌಡ, ಕಳೆದ 40 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಇದ್ದೇನೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಡಿಸಿಸಿ ಬ್ಯಾಂಕ್ ಕಷ್ಟದಲ್ಲಿದ್ದಾಗ ಅದನ್ನು ಕಟ್ಟಿ ಬೆಳೆಸಿದ್ದೇನೆ. ಹೀಗಿದ್ದರೂ ಕೇವಲ ರಾಜಕಾರಣಕ್ಕಾಗಿ ನನ್ನ ವಿರುದ್ಧ ಪಿತೂರಿ ಮಾಡಿ ನಿರ್ದೇಶಕ ಸ್ಥಾನದಿಂದ ಅನರ್ಹತೆಗೊಳಿಸಲು ಹಲವರು ಮುಂದಾಗಿದ್ದರು. ಒಮ್ಮೆ 8 ಸದಸ್ಯರನ್ನು ಅನರ್ಹಗೊಳಿಸಿದ್ದರು. ನಂತರ ನನ್ನೊಬ್ಬನನ್ನೇ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನೆ ಮಾಡಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಪ್ರಶ್ನೆ ಮಾಡಿದ್ದೆ ಎಂದರು.

ವಿಭಾಗೀಯ ಪೀಠ ಆರು ವಾರದಲ್ಲಿ ವಿಚಾರಣೆ ನಡೆಸಿ ಸಹಕಾರ ನಿಬಂಧಕರ ಕಚೇರಿಗೆ ಸೂಚನೆ ನೀಡಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು. ಅದರ ಅನ್ವಯ ಸಹಕಾರ ಸಂಘಗಳ ಅಪರ ನಿಬಂಧಕರು ವಿಚಾರಣೆ ನಡೆಸಿ ಕೆಳಗಿನ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಯುವಂತೆ ಆದೇಶ ನೀಡಿದೆ ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದರು.

ನಾನು ಅಧ್ಯಕ್ಷನಾಗಿದ್ದಾಗಲೇ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಹಾಗಾಗಿ ಅಧ್ಯಕ್ಷರ ಚುನಾವಣೆಯೂ ನಡೆದಿತ್ತು. ಈಗ ನಿರ್ದೇಶಕ ಸ್ಥಾನವನ್ನೇ ಮತ್ತೆ ಊರ್ಜಿತಗೊಳಿಸಿದ್ದರಿಂದ ಸಹಜವಾಗಿಯೇ ನಾನು ಅಧ್ಯಕ್ಷನಾಗಿ ಮುಂದುವರಿಯುವ ಅವಕಾಶವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನನ್ನ ಬೆನ್ನಿಗೆ ಚೂರಿ ಹಾಕಿದವರು ಯಾರೆಂದು ನನಗೆ ಗೊತ್ತು. ಏಕೆಂದೂ ಗೊತ್ತು. ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ ಅತಿಹೆಚ್ಚು ಮತ ಪಡೆದ ಮೇಲೆ ನನ್ನ ವಿರುದ್ಧ ಪಿತೂರಿಗಳು ಆರಂಭವಾದವು. ಆದರೆ ನಾನೀಗ ಯಾರನ್ನೂ ದ್ವೇಷ ಮಾಡಲಾರೆ. ನಮ್ಮ ಸರ್ಕಾರ ಇದೆ ಎಂದು ಏನನ್ನೂ ದುರುಪಯೋಗಪಡಿಸಿಕೊಳ್ಳಲಾರೆ. ನಾನೊಬ್ಬ ಸಹಕಾರಿ ಅಷ್ಟೆ. ಮುಂದಿನ ತೀರ್ಮಾನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಷಡಾಕ್ಷರಿ, ನಿರ್ದೇಶಕರಾದ ಸುದೀಪ್, ದುಗ್ಗಪ್ಪಗೌಡರು, ವಿಜಿ ದೇವ್, ಪರಮೇಶ್, ವೆಂಕಟೇಶ್, ಕೆಎಂಎಫ್ ಮಾಜಿ ಅಧ್ಯಕ್ಷ ಜಗದೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮುಖಂಡ ಎಸ್.ಕೆ. ಮರಿಯಪ್ಪ ಸೇರಿದಂತೆ ಹಲವರು ಇದ್ದರು.

Leave A Reply

Your email address will not be published.

error: Content is protected !!