ಐತಿಹಾಸಿಕ ಕಂಚಿನ ದೀಪ ರಥೋತ್ಸವ | ಭಾವೈಕ್ಯ ಸಮ್ಮೇಳನ, ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

0 482

ರಿಪ್ಪನ್‌ಪೇಟೆ : ಸಾಗರ (Sagara) ತಾಲೂಕಿನ ಆನಂದಪುರ ಮುರುಘಾಮಠದಲ್ಲಿ ಮಂಗಳವಾರ ಐತಿಹಾಸಿಕ ಕಂಚಿನ ದೀಪ ರಥೋತ್ಸವ ನಿಮಿತ್ತ ಭಾವೈಕ್ಯ ಸಮ್ಮೇಳನ ವೈಭವದಿಂದ ನಡೆಯಿತು.

ಪ್ರತಿ ವರ್ಷ ಶ್ರೇಷ್ಠ ಸಾಧಕಿ ಮಹಿಳೆಗೆ ಕೆಳದಿ ರಾಣಿ ಚೆನ್ನಮ್ಮ ರಾಣಿ ಪ್ರಶಸ್ತಿ ನೀಡಲಾಗುತ್ತಿದ್ದು ಈ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಮಂಜಮ್ಮ ಜೋಗತಿಗೆ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂಜಮ್ಮ ಜೋಗುತಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಕಲೆ, ಸಂಸ್ಕೃತಿ ಮತ್ತು ಮಾನವೀಯ ಗುಣಗಳ ಗಣಿಯಾಗಿದೆ ಎಂದರು.

ತಮ್ಮ ಆರಂಭದ ದಿನಗಳಲ್ಲಿ ಸಮಾಜದಲ್ಲಿ ಅಪಮಾನ ಉಂಟಾಗುತ್ತಿತ್ತು. ಕಲೆಯಲ್ಲಿ ಅತ್ಯಧಿಕ ಸಾಧನೆ ಮಾಡಿದ ಕಾರಣ ಇಂದು ದೊಡ್ಡ ಗೌರವದ ಸ್ಥಾನ ದೊರೆಯುತ್ತಿದೆ. ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದಕ್ಕೆ ತಮ್ಮ ಜೀವನ ಚರಿತ್ರೆಯೇ ಸಾಕ್ಷಿ ಎಂದರು.

ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಗೌರವ ಸಿಗಬೇಕು ಎಂಬ ಶಿವಶರಣರ ಆಸೆ ಇಂದು ಪರಿಪೂರ್ಣವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ದೊರೆತ ಅವಕಾಶ ಮತ್ತು ಬದುಕಿನ ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಪ್ರತಿಯೊಬ್ಬರೂ ಸಾಧಕರಾಗಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಸಮಾಜ ಸೇವೆಯಲ್ಲಿ ಇಲ್ಲಿನ ಮಲ್ಲಿಕಾರ್ಜುನ ಶ್ರೀಗಳ ಕಾಳಜಿ ಮತ್ತು ಶ್ರಮಕ್ಕೆ ಸಾರ್ವತ್ರಿಕ ಬೆಂಬಲ ಅಗತ್ಯವಿದೆ ಎಂದರು.

ಶಿಮೂಲ ಅಧ್ಯಕ್ಷ ಶ್ರೀಪಾದ ಹೆಗಡೆ ಮಾತನಾಡಿ, ಎಲ್ಲ ಮತ ಧರ್ಮಗಳ ಜನರ ಮನಸ್ಸು ಜೋಡಿಸಿ ಧನಾತ್ಮಕ ಕಾರ್ಯ ನಡೆಸುತ್ತಿರುವ ಕಾರ್ಯ ಅದ್ಭುತ ಎಂದರು.

ಡಾ.ಧನಂಜಯ ಸರ್ಜಿ ಮಾತನಾಡಿ, ಶ್ರೀಗುರುಗಳ ಮಾರ್ಗದರ್ಶನ ನಿರಂತವಾಗಿ ನಡೆಯುತ್ತಿದೆ. ಗುರುಗಳಿಂದ ಸಂಸ್ಕಾರ ದೊರೆಯುತ್ತದೆ. ಸಂಸ್ಕಾರದಿಂದ ಮನುಷ್ಯ ಮಹಾದೇವ ಆಗಲು ಸಾಧ್ಯ ಎಂದರು.

ದೀಪೋತ್ಸವದ ವಿಶೇಷ ಸನ್ಮಾನ ಸ್ವೀಕರಿಸಿದ ಖ್ಯಾತ ಚಲನ ಚಿತ್ರ ನಟ ದೊಡ್ಡಣ್ಣ ಮಾತನಾಡಿ, ಸಮಾಜ, ಮಠ ಮತ್ತು ಮನುಷ್ಯರ ಬದುಕು ಸದಾ ಸಂತಸದಾಯಕವಾಗಿರಬೇಕು ಎಂದ ಅವರು, ಇಲ್ಲಿನ ಮಠದ ವಿವಿಧ ಕಾರ್ಯಕ್ಷೇತ್ರಗಳು ಇತರ ಮಠಗಳಿಗೆ ಮಾದರಿಯಾಗಿದೆ ಎಂದರು. ದುಃಖದ ಬದುಕಿನಲ್ಲೂ ನಗುತ್ತಾ ಬದುಕಿದರೆ ನಮ್ಮ ಜೀವನ ಸುಂದರವಾಗಿರುತ್ತದೆ ಎಂದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹರನಾಥರಾವ್ ಮತ್ತಿಕೊಪ್ಪ, ಶಿವಮೊಗ್ಗದ ವಿದ್ಯುತ್ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ.ಶಶಿಧರ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಫೌಜಿ ಶರಾವತ್, ನಾಟಿ ವೈದ್ಯ ಕೆ.ಟಿ.ತಿಮ್ಮೇಶ್, ಸಮಾಜ ಸೇವಕ ಶೇಣಿಗೆ ರುದ್ರಪ್ಪ ಗೌಡ, ಜಿಲ್ಲಾ ಉತ್ತಮ ಸಹಕಾರ ಪ್ರಶಸ್ತಿ ಪುರಸ್ಕೃತ ಆರ್.ವಿನಯಕುಮಾರ್ ದುಮ್ಮ, ನಾಟಿ ವೈದ್ಯ ಕೆ.ಸಿ.ದೇವಪ್ಪರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

Leave A Reply

Your email address will not be published.

error: Content is protected !!