ಬಟ್ಟೆಮಲ್ಲಪ್ಪದಲ್ಲಿ ಜನಸ್ಪಂದನ ಸಭೆ | ಜನಸ್ನೇಹಿ ಆಡಳಿತ ನೀಡಲು ಅಧಿಕಾರಿವರ್ಗ ಸಜ್ಜಾಗಿ ; ಶಾಸಕ ಬೇಳೂರು ಸೂಚನೆ

0 340

ಹೊಸನಗರ : ಸರ್ಕಾರಿ ಕಛೇರಿಗಳು ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೇ ಹೊರತು. ಪದೇ ಪದೇ ಕಚೆರಿ ಅಲೆಯುಂತಾಗಬಾರದು. ಅಧಿಕಾರಿಗಳು ಈ ನಿಟ್ಟಿನಲ್ಲಿ ಉತ್ತಮ ಸೇವೆ ನೀಡಲು ಮುಂದಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರು ತಮ್ಮ ಸಮಸ್ಯೆ ಹಿಡಿದುಕೊಂಡು ಕಛೇರಿಗಳಿಗೆ ಆಗಮಿಸುತ್ತಾರೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಅವರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಿ. ಇದರಿಂದ ಜನರಿಗೆ ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ವಿಶ್ವಾಸ ಹೆಚ್ಚುತ್ತದೆ. ಯೋಜನೆಗಳ ಜಾರಿಗೆ ಸಹಕಾರಿಯಾಗುತ್ತದೆ ಎಂದರು.

ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವುದು ಸದ್ಯದ ಮಟ್ಟಿಗೆ ಸವಾಲಿನ ಕೆಲಸವಾಗಿದೆ. ಅಧಿಕಾರಿವರ್ಗ ಜನಸಾಮಾನ್ಯರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಕುಡಿಯುವ ನೀರು ಸಮಸ್ಯೆಗೆ ಮೊದಲ ಆದ್ಯತೆ ನೀಡಬೇಕು. ಅಗತ್ಯ ಬಿದ್ದಲ್ಲಿ ಕೊಳವೆ ಬಾವಿ ನಿರ್ಮಾಣ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸರ್ಕಾರದಿಂದ ಅಗತ್ಯ ಅನುದಾನ ಲಭ್ಯವಿದೆ. ಆದರೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿರುವ ದೂರುಗಳು ಬರುತ್ತಿವೆ. ಜಲಜೀವನ್ ಮಿಷನ್ ಕಾಮಗಾರಿ ಅನುಷ್ಠಾನದಲ್ಲಿ ಯಾವುದೇ ಪಕ್ಷಪಾತ ಧೋರಣೆ ತೋರದೇ, ಪ್ರತಿಯೊಂದು ಕುಟುಂಬಕ್ಕೂ ನಲ್ಲಿ ಸಂಪರ್ಕ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಜನರೂ ಸಹಾ ನೀರಿನ ಮಿತವಾದ ಬಳಕೆ ಕುರಿತು ಜಾಗ್ರತೆ ವಹಿಸಬೇಕು ಎಂದರು.

ಸುಮಾರು 35ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಬಹುತೇಕ ಅಹವಾಲುಗಳು ಕುಡಿವ ನೀರು, ವಿದ್ಯುತ್ ಸಮಸ್ಯೆ ಸಂಬಂಧಿಸಿತ್ತು. ಆಲಗೇರಿಮಂಡ್ರಿ ಗ್ರಾಮದಲ್ಲಿ ಕೊಳವೆಬಾವಿಯಲ್ಲಿ ಸಾಕಷ್ಟು ನೀರಿದ್ದರೂ, ವಿದ್ಯುತ್ ಸಮಸ್ಯೆಯಿಂದ ಸಾರ್ವಜನಿಕರಿಗೆ ನೀರು ಲಭ್ಯವಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಹವಾಲು ಸಲ್ಲಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಿ ಯೋಜನೆಗಳಿಗೂ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ. ಅನಗತ್ಯವಾಗಿ ಅಡ್ಡಿಪಡಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಮಾನವೀಯ ನೆಲಗಟ್ಟಿನಲ್ಲಿ ಕಾರ‍್ಯನಿರ್ವಹಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ರಶ್ಮಿ ಹಾಲೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರತ್ನಮ್ಮ, ಗುರುಮೂರ್ತಿ, ತಾಲೂಕು ಪಂಚಾಯಿತಿ ಇಓ ನರೇಂದ್ರಕುಮಾರ್, ಬಗರ್‌ಹುಕುಂ ಸಮಿತಿ ಸದಸ್ಯೆ ಸಾಕಮ್ಮ ಮನೋಹರ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!