ಮೂಲೆಗದ್ದೆ ಶಿವಯೋಗಾಶ್ರಮದಲ್ಲಿ ಮಕರ ಸಂಕ್ರಾಂತಿ ಧಾರ್ಮಿಕ ಸಭೆ | ಸಂಸ್ಕಾರವಿಲ್ಲದೇ ಎಷ್ಟೇ ಗಳಿಸಿದರೂ ಅದು ವ್ಯರ್ಥ ; ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

0 460

ಹೊಸನಗರ : ಪ್ರಪಂಚ ದಿನದಿಂದ ಬದಲಾಗುತ್ತಿದೆ. ವೈಜ್ಞಾನಿಕ ಅನ್ವೇಷಣೆಗಳು ಹೆಚ್ಚಿದಂತೆಲ್ಲಾ ಸೌಕರ್ಯಗಳು ಸಹ ಹೆಚ್ಚತೊಡಗಿವೆ. ಇಷ್ಟಾದರೂ, ಮನುಷ್ಯನಿಗೆ ನೆಮ್ಮದಿಯ ಜೀವನ ಕಾಣಲು ಸಾಧ್ಯವಾಗುತ್ತಿಲ್ಲಎಂದು ಆನಂದಪುರದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಮಾರುತಿಪುರ ಸಮೀಪದ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಸೋಮವಾರ ಮಕರ ಸಂಕ್ರಾಂತಿ ಪ್ರಯುಕ್ತ ಏರ್ಪಡಿಸಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಮಕರ ಸಂಕ್ರಾಂತಿಯು ಮೂಲತಃ ರೈತರ ಸುಗ್ಗಿ ಹಬ್ಬವಾದರೂ, ವಿಶೇಷ ಮಾನ್ಯತೆಯಿದೆ. ಸೂರ್ಯ ತನ್ನ ಕಕ್ಷೆಯನ್ನು ಬದಲಿಸುವ ಕಾಲ. ಹೊಸ ಬದಲಾವಣೆಯ ಹೊಸ್ತಿಲು ಎನ್ನುವ ಪ್ರತೀತಿಯಿದೆ. ಹಾಗಾಗಿ ಸಂಕ್ರಾಂತಿ ಹಬ್ಬದ ಆಚರಣೆಗೆ ವಿಶೇಷ ಮಹತ್ವ ಅನಾದಿ ಕಾಲದಿಂದಲೂ ಇದೆ ಎಂದರು.

ಪ್ರಕೃತಿ ಪ್ರಾಣಿಗಳ ಮೇಲೆ ಸೂರ್ಯನ ಈ ಚಲನೆ ಪರಿಣಾಮ ಬೀರುತ್ತದೆ. ಮನುಷ್ಯ ಇಂದು ದಾರಿ ತಪ್ಪ ತೊಡಗಿದ್ದಾನೆ. ಆಧುನಿಕತೆಯ ದುರಂತ ಎನ್ನಬಹುದು. ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗಲು ಸಂಕಲ್ಪ ಮಾಡುವ ಕಾಲ ಇದಾಗಿದೆ. ಮೂಲೆಗದ್ದೆ ಮಠದ ಸಂಕ್ರಾಂತಿ ಆಚರಣೆಯನ್ನು ಅರ್ಥ ಪೂರ್ಣವಾಗಿ ನಡೆಸಿಕೊಂಡು ಬರುತ್ತಿರುವುದು ಹೆಗ್ಗಳಿಕೆಯ ವಿಷಯ ಎಂದರು.

ಹಿಂದಿನ ಕಾಲದಲ್ಲಿ ಸೂರ್ಯ ಉದಯಿಸುವ ಮುನ್ನಜನತೆ ಎದ್ದು, ಉದಯದ ಸಮಯಕ್ಕೆ ಸ್ವಾಗತ ಕೋರುತ್ತಿದ್ದರು. ಇಂದು ಸೂರ್ಯನೇ ಜನರನ್ನು ಎದ್ದೇಳಿಸುವಂತಾಗಿದೆ. ಪ್ರಾಣಿ ಪಕ್ಷಿ ಸಂಕುಲಗಳು ಜಗದ ನಿಯಮಗಳನ್ನು ಪಾಲಿಸುತ್ತಿವೆ. ಮಾನವ ಮಾತ್ರ ತನ್ನ ಆಚಾರ ವಿಚಾರಗಳಲ್ಲಿ ವಿಚಲಿತನಾಗಿರುವುದು ಕಂಡುಬಂದಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಗದಗ ಜಿಲ್ಲೆಯ ಗವಿಸಿದ್ದಯ್ಯ ಅಳ್ಳಿಕೇರಿಮಠ ಮಾತನಾಡಿ, ಜಾನಪದದ ಸೊಗಡು ಕಳೆಗುಂದಿದೆ. ಅದರಲ್ಲಿ ಹುದುಗಿರುವ ಭಾವ ಎಂದಿಗೂ ನವನವೀನ. ಅದ್ಭುತ ಸಾಹಿತ್ಯವನ್ನು ಇಂದು ನಾವು ಕಡೆಗಣಿಸಿದ್ದೇವೆ. ಇಂದು ಹಣ ಗಳಿಕೆಯೊಂದೇ ಗುರಿಯಾಗಿದೆ. ಸಂಸ್ಕೃತಿ, ಸಂಸ್ಕಾರ ಇಲ್ಲದೇ ಎಷ್ಟು ಗಳಿಸಿದರೂ ಅದು ವ್ಯರ್ಥ ಎಂದರು.

ಮಠದ ಪೀಠಾಧಿಪತಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಠ ಮಾನ್ಯಗಳು ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗದೇ, ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕೆರೆಗಳ ಪುನಶ್ಚೇತನ, ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಪುನರಚನೆ ಕುರಿತು ನಡೆಯುತ್ತಿರುವ ಹೋರಾಟದಲ್ಲಿ ಜನರನ್ನು ಸಂಘಟಿಸುವ ಕಾರ್ಯದಲ್ಲಿ ತಾವು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರಕಬೇಕೆನ್ನುವುದು ನಮ್ಮಆಶಯ ಎಂದರು.

ಅಕ್ಕಿ ಆಲೂರು ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾಸಕರಾದ ಬೇಳೂರು ಗೋಪಾಲಕೃಷ್ಣ, ಡಿ.ಎಸ್.ಅರುಣ್, ಆರಗ ಜ್ಞಾನೇಂದ್ರ ಮಾತನಾಡಿದರು. ಕೋಣಂದೂರು ಬ್ರಹನ್ಮಠದಶ್ರೀ ಪಂಡಿತಾರಾಧ್ಯ ಸ್ವಾಮೀಜಿ, ತೊಗ್ಗರ್ಸಿ ಹಿರೇಮಠದ ಶ್ರೀ ಮಹಾಂತ ದೇಶೀಕೇಂದ್ರ ಸ್ವಾಮೀಜಿ, ಹರ‍್ನಹಳ್ಳಿಯ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಿವಮೊಗ್ಗದ ಸರ್ಜಿಆಸ್ಪತ್ರೆಯ ವೈದ್ಯ, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಬಿ.ಸ್ವಾಮಿರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡುರತ್ನಾಕರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಮೌಳಿಗೌಡ, ಮಾವಿನಕಟ್ಟೆ ಶಿವಾನಂದ, ಮಿಲ್ ಈಶ್ವರ ಗೌಡ, ಜಿ.ಟಿ ಈಶ್ವರ ಗೌಡ, ಕೊಗಟಿ ರಾಜಶೇಖರ ಗೌಡ, ಜಯಶೀಲಪ್ಪ ಗೌಡ, ಮತ್ತಿತರರು ಉಪಸ್ಥಿತರಿದ್ದರು.

ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಂಗೀತ, ನೃತ್ಯ ಮೊದಲಾದ ಮನರಂಜನಾ ಕಾರ್ಯಕ್ರಮಗಳು ನಡೆಯಿತು. ಅಶ್ವಿನಿ ಪಂಡಿತ್ ನಿರೂಪಿಸಿದರು.

Leave A Reply

Your email address will not be published.

error: Content is protected !!