ಶಿಕಾರಿಪುರ ಪುರಸಭೆ ಉಳಿತಾಯ ಬಜೆಟ್ ಮಂಡನೆ

0 239

ಶಿಕಾರಿಪುರ : ಶಿಕಾರಿಪುರ ಪುರಸಭೆಯ  ಆಡಳಿತ ಅವಧಿಯು ಮುಗಿದು ಮುಂದಿನ ಅವಧಿಗೆ ಮೀಸಲಾತಿ ಪ್ರಕಟಗೊಳ್ಳದ ಕಾರಣ  ಆಡಳಿತಾಧಿಕಾರಿಯಾಗಿರುವ ಸಾಗರ ಉಪ ವಿಭಾಗದ ವಿಭಾಗಾಧಿಕಾರಿಯಾದ ಆರ್. ಯತೀಶ್ ಅವರು ಶಿಕಾರಿಪುರ ಪುರಸಭೆಯ 32,08,590 ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.

ಅವರು ಪಟ್ಟಣದ ಪುರಸಭೆಯ, ಪುರಸಭಾ ಸಭಾಂಗಣದಲ್ಲಿ 2024 -25ನೇ ಸಾಲಿನ ಆಯ-ವ್ಯಯ ಮಂಡಿಸಿದರು. ಒಟ್ಟು ಬಜೆಟ್  16,55,08,200 ರೂಪಾಯಿಗಳ ಆದಾಯವನ್ನು ಹಾಗೂ 16,22,99,610 ರೂಪಾಯಿಗಳ ವೆಚ್ಚವನ್ನು ಮಂಡನೆ ಮಾಡಿ 32,08,590 ರೂಪಾಯಿಗಳ ಉಳಿತಾಯ ಬಜೆಟ್ಟನ್ನು ಸಭೆಯಲ್ಲಿ  ಮಂಡಿಸಿದರು.

ಮನೆ ಕಂದಾಯ, ನೀರಿನ ಕಂದಾಯ,  ಮಳಿಗೆಗಳ ಬಾಡಿಗೆ ಇತರೆ ಆದಾಯ ಸರ್ಕಾರದಿಂದ ಅನುದಾನಗಳನ್ನು ಒಟ್ಟು ಕ್ರೋಡೀಕರಿಸಿ 16,22,99,610 ರೂಪಾಯಿಗಳನ್ನು ಆದಾಯ ಎಂದು ನಿರೀಕ್ಷಿಸಲಾಗಿದ್ದು  ಹಾಗೂ ಬೀದಿ ದೀಪ ನಿರ್ವಹಣೆ, ನೈರ್ಮಲೀಕರಣ, ನೀರು ಸರಬರಾಜು ವ್ಯವಸ್ಥೆ ನಿರ್ವಹಣೆ, ರಸ್ತೆ ನಿರ್ಮಾಣ, ರಸ್ತೆ ಬದಿ ಚರಂಡಿ ನಿರ್ಮಾಣ, ಉದ್ಯಾನವನ ನಿರ್ಮಾಣ, ಸೇರಿದಂತೆ ಇತರೆ ಖರ್ಚು ವೆಚ್ಚಗಳಿಗೆ 16 ಕೋಟಿ 55 ಲಕ್ಷದ 8200 ರೂ. ಖರ್ಚು ಎಂತಲೂ ಕಾಯ್ದಿರಿಸಲಾಯಿತು. ಒಟ್ಟಾರೆಯಾಗಿ 2024-25 ನೇ ಸಾಲಿನಲ್ಲಿ 32 ಲಕ್ಷದ 8590 ರೂಪಾಯಿಗಳು ಉಳಿತಾಯ ಬಜೆಟ್ ಮಂಡಿಸಲಾಯಿತು.

     
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮನವಿಯ ಮೇರೆಗೆ ಪತ್ರಕರ್ತರಿಗೆ  ಲ್ಯಾಪ್‌ಟಾಪ್ ಖರೀದಿಗೆ 5 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಿದ್ದು ಹಾಗೂ  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮನವಿಯ ಮೇರೆಗೆ ತಾಲೂಕು ಸಾಹಿತ್ಯ  ಸಮ್ಮೇಳನಕ್ಕಾಗಿ ಎರಡು ಲಕ್ಷ ರೂಪಾಯಿಗಳನ್ನು ಕಾಯ್ದಿಸಲಾಗಿದೆ ಎಂದರು.

ಹಿರಿಯ ಪುರಸಭಾ ಸದಸ್ಯ ನಾಗರಾಜ್ ಗೌಡ ಮಾತನಾಡಿ, ಪಟ್ಟಣದಲ್ಲಿ ಇರುವ ಉದ್ಯಾನವನಗಳು ಅವನತಿಯ ಅಂಚಿನಲ್ಲಿದ್ದು ವ್ಯವಸ್ಥೆ ಸರಿ ಆಗದೆ ಉದ್ಯಾನವನಗಳು ನಶಿಸಿಹೋಗುತ್ತಿವೆ ಎಂದರು. 

ಅರಣ್ಯೀಕರಣಕ್ಕಾಗಿ ಹತ್ತು ಲಕ್ಷಗಳನ್ನು ಕಾಯ್ದಿದಿರಿಸಿದ್ದು ಈ ಹಿಂದೆ ಕಾಯ್ದಿರಿಸಿದ ಹಣದಲ್ಲಿ ಎಲ್ಲೆಲ್ಲಿ ಅರಣ್ಯೀಕರಣ ಮಾಡಿದ್ದೀರಿ ? ಎಂದು ಪ್ರಶ್ನಿಸಿದರು.

ಉದ್ಯಾನವನ ನಿರ್ಮಾಣ ಮತ್ತು ಅರಣ್ಯೀಕರಣಕ್ಕೆ ಕಾಯ್ದಿರಿಸಿರುವ 10 ಲಕ್ಷ ರೂಪಾಯಿಗಳು ಸಾಕಾಗುವುದಿಲ್ಲ ಎಂದು ಹೆಚ್ಚುವರಿ ಕಾಯ್ದಿರಿಸಲು ಸಲಹೆ ನೀಡಿದರು.

       
ಮತ್ತೊಬ್ಬ ಹಿರಿಯ ಸದಸ್ಯ ಮಹೇಶ್ ಹುಲ್ಮಾರ್ ಮಾತನಾಡಿ, ಶಿವಮೊಗ್ಗ-ಶಿರಾಳಕೊಪ್ಪ ರಸ್ತೆಯ ಮಧ್ಯ ಭಾಗದಲ್ಲಿ ಹಾಕಿರುವ ವಿದ್ಯುತ್ ಕಂಬಗಳಿಗೆ ಕೇಸರಿ ಬಟ್ಟೆಯಿಂದ ಅಲಂಕರಿಸಲಾಗಿದ್ದು  ಈ ಬಟ್ಟೆಗಳು ತುಂಡಾಗಿ ವಾಹನಗಳ ಮೇಲೆ ಬಿದ್ದು, ವಾಹನ ಚಾಲಕನಿಗೆ ರಸ್ತೆ ಕಾಣದೆ  ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬಗಳು ಮುರಿದು ಹೋಗಿದ್ದು, ಜೀವಹಾನಿ ಆದರೆ ಇದಕ್ಕೆ ಯಾರು ಹೊಣೆ ಎಂದರು.

       
ಈ ಕುರಿತು ಉತ್ತರಿಸಿದ ಪುರಸಭಾ ಮುಖ್ಯಾಧಿಕಾರಿ ಭರತ್ ರವರು ಸಂಘಟಕರಿಗೆ ಬಟ್ಟೆಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದ್ದು ಅಪಘಾತದಿಂದ ಮುರಿದು ಹೋಗಿರುವ ವಿದ್ಯುತ್ ಕಂಬವನ್ನು  ಸಂಘಟಕರು ತಮ್ಮ ಸ್ವಂತ ಖರ್ಚಿನಿಂದಲೇ ಸರಿಪಡಿಸಿಕೊಡಲು ನಿರ್ದೇಶಿಸಲಾಗಿದೆ ಎಂದರು.

     
ಬಿಜೆಪಿ ಹಿರಿಯ ಸದಸ್ಯ ಭದ್ರಪುರ ಪಾಲಾಕ್ಷಪ್ಪ  ಮಾತನಾಡಿ, ಹಳಿಯೂರು ಆಶ್ರಯ ಬಡಾವಣೆಯಲ್ಲಿ ನಗರೋಥ್ಥಾನ ಯೋಜನೆಯಲ್ಲಿ ಕಾಮಗಾರಿ ಕೈಗೊಂಡಿದ್ದು ಇದುವರೆಗೆ ಪೂರ್ಣ ಆಗದೆ                  ಅಪೂರ್ಣಗೊಂಡಿದ್ದು ಸಾರ್ವಜನಿಕರು ಶಪಿಸುತ್ತಿದ್ದು ಓಡಾಡಿಸಲು ತೊಂದರೆ ಉಂಟಾಗಿದೆ ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

   
ಆಯ-ವ್ಯಯ ಸಭೆಯಲ್ಲಿ ಪುರಸಭಾ ಸದಸ್ಯರಾದ ಗೋಣಿ ಪ್ರಕಾಶ್, ಉಳ್ಳಿ ದರ್ಶನ್, ರೇಣುಕಸ್ವಾಮಿ, ಸುರೇಶ್, ರಮೇಶ್ ಗುಂಡ, ರೋಶನ್, ಸಾಧಿಕ್, ಲಕ್ಷ್ಮಿ ರೂಪಕಲಾ ಹೆಗಡೆ, ರೇಖಾ ಬಾಯಿ, ಕಮಲಮ್ಮ, ಜಯಶ್ರೀ, ರೂಪ, ಉಮಾವತಿ ಶೈಲಜಾ ,  ಫೈರೋಜಾ ಬಾನು, ಕಂದಾಯಾಧಿಕಾರಿಯದ ಪರಶುರಾಮ್ ವ್ಯವಸ್ಥಾಪಕ ರಾಜಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!