ಹೊಸನಗರ ಪ.ಪಂ. ಜಾಗದಲ್ಲಿ ನಿರ್ಮಿಸಿರುವ ಅನಧಿಕೃತ ಮಳಿಗೆಗಳ ತೆರವಿಗೆ ನೋಟಿಸ್ ನೀಡಿ ; ಹಾಲಗದ್ದೆ ಉಮೇಶ್

0 1,442

ಹೊಸನಗರ: ಹೊಸನಗರ (Hosanagara) ಪಟ್ಟಣ ಪಂಚಾಯಿತಿ ಜಾಗದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದು ತೆರವಿಗಾಗಿ ನೋಟಿಸ್ ನೀಡಬೇಕೆಂದು ಪಟ್ಟಣ ಪಂಚಾಯತಿ ಸದಸ್ಯ ಹಾಲಗದ್ದೆ ಉಮೇಶ್ ಸಭೆಗೆ ತಿಳಿಸಿದರು.

ಇಲ್ಲಿನ ಪಟ್ಟಣ ಪಂಚಾಯತಿ ಆವರಣದಲ್ಲಿ ಪಟ್ಟಣ ಪಂಚಾಯತಿ ಆಡಳಿತಾಧಿಕಾರಿ ತಹಶೀಲ್ದಾರ್ ರಶ್ಮಿರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಲಾಗಿದ್ದು ಈ ಸಂದರ್ಭದಲ್ಲಿ ತಿಳಿಸಿದರು.

ಹೊಸನಗರ ಪಟ್ಟಣ ಪಂಚಾಯತಿಯ ಕೆಲವು ವಾರ್ಡ್‌ಗಳಲ್ಲಿ ಅನಧಿಕೃತವಾಗಿ ರಸ್ತೆಯವರೆಗೆ ಮಳಿಗೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆಯಲ್ಲದೇ ಪಟ್ಟಣ ಪಂಚಾಯತಿಗೆ ಅನಧಿಕೃತ ಮಳಿಗೆಯ ಕಂದಾಯವು ಬರುತ್ತಿಲ್ಲ ಕಟ್ಟಿಸಿಕೊಳ್ಳಲು ಸರ್ಕಾರದ ಆದೇಶವೂ ಇಲ್ಲ ಇದನ್ನು ತಕ್ಷಣ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅನಧೀಕೃತವಾಗಿ ಮಳಿಗೆಗಳನ್ನು ಕಟ್ಟಿಸಿಕೊಂಡವರಿಗೆ ನೋಟಿಸ್ ನೀಡಿ ತೆರವು ಕಾರ್ಯಕ್ಕೆ ಮುಂದಾಗಬೇಕೆಂದರು.

ನೋಟಿಸ್ ನೀಡಿದರೆ ನೀವೇ ಬರುತ್ತೀರಿ – ತಹಶೀಲ್ದಾರ್ ರಶ್ಮಿ
ಸದಸ್ಯರು ಪಟ್ಟಣ ಪಂಚಾಯತಿಯ ಸಭೆಗಳಲ್ಲಿ ನೋಟಿಸ್ ನೀಡಲು ಅಧಿಕಾರಿಗಳಿಗೆ ಆಗ್ರಹಿಸುತ್ತೀರಿ, ನೋಟಿಸ್ ನೀಡಿದರೆ ಮಳಿಗೆಯ ಮಾಲೀಕರ ಪರವಾಗಿ ನೀವೇ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸುತ್ತೀರಿ ಇದು ಸರಿಯೇ ಎಂದು ಸಭೆಯಲ್ಲಿ ಪ್ರಶ್ನಿಸಿದರು.

ಉದ್ಯಮ ನಿಧಿಯ ಹಣದಲ್ಲಿ ಪಪಂ ನೂತನ ಕಟ್ಟಡಬೇಡ: ಗುರುರಾಜ್ ಆರ್
ಹೊಸನಗರ ಪಟ್ಟಣ ಪಂಚಾಯತಿಯ ಉದ್ಯಮ ನಿಧಿ ಸುಮಾರು ಅಂದಾಜು ಎರಡು ಕೋಟಿಯಷ್ಟು ಹಣವಿದೆ. ಅದನ್ನು ಪಟ್ಟಣ ಪಂಚಾಯತಿ ನೂತನ ಕಾರ್ಯಲಯ ನಿರ್ಮಿಸಿಲು ಹೊರಟಿರುವುದು ಸರಿಯಲ್ಲ ಹಾಗೂ ಪಟ್ಟಣ ಪಂಚಾಯತಿ ಕಾರ್ಯಾಲಯದ ಸ್ಥಳ ಬೇರೆ ಕಡೆಗೆ ಸ್ಥಳಾಂತರಿಸುವುದು ಸರಿಯಲ್ಲ. ಶಾಸಕರು ಸರ್ಕಾರದ ಯಾವುದಾದರೂ ಅನುದಾನದಿಂದ ಹಣ ತಂದು ಪಟ್ಟಣ ಪಂಚಾಯತಿಯ ನೂತನ ಕಟ್ಟಡದ ಶಂಕುಸ್ಥಾಪನೆ ಮಾಡುವುದು ಸೂಕ್ತ ಎಂದು ಪಟ್ಟಣ ಪಂಚಾಯತಿಯ ಸದಸ್ಯ ಗುರುರಾಜ್ ಆರ್ ಹಾಗೂ ಕೆಲವು ಸದಸ್ಯರು ಸಭೆಯಲ್ಲಿ ಧ್ವನಿಗೂಡಿಸಿದರು.

ವಾರ್ಡ್‌ಗಳಲ್ಲಿ ಕಾಮಗಾರಿ ನಡೆಸುವಾಗ ಸದಸ್ಯರ ಗಮನಕ್ಕೆ ತನ್ನಿ – ಸಿಂಥಿಯಾ
ಹೊಸನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿವೆ 11 ವಾರ್ಡ್‌ಗಳಲ್ಲಿ 11 ಜನ ಸದಸ್ಯರಿದ್ದಾರೆ ಆದರೆ ವಾರ್ಡ್‌ಗಳಲ್ಲಿ ಕಾಮಗಾರಿ ನಡೆಸುವಾಗ ಆ ಭಾಗದ ಸದಸ್ಯರ ಗಮನಕ್ಕೆ ತಂದು ಕೆಲಸ ಮಾಡುತ್ತಿಲ್ಲ. ಲೈಟ್‌ಗಳನ್ನು ಹಾಕುವಾಗ ನಾವು ತೋರಿಸುವ ಸ್ಥಳ ಒಂದಾದರೇ ಅವರು ಹಾಕುವ ಸ್ಥಳ ಬೇರೆಯಾಗಿರುತ್ತದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿಂಥಿಯಾ ರವರು ಮುಂದೆ ಯಾವುದೇ ಕಾಮಾಗಾರಿ ಲೈಟ್‌ಗಳನ್ನು ಚರಂಡಿಗಳನ್ನು ರಸ್ತೆಗಳನ್ನು ಮಾಡುವಾಗ ಸದಸ್ಯರ ಗಮನಕ್ಕೆ ತಂದು ಸದಸ್ಯರ ಸಮ್ಮುಖದಲ್ಲಿಯೇ ಕೆಲಸ ಮಾಡಬೇಕೆಂದು ಸಭೆಗೆ ತಿಳಿಸಿದರು.

ಯಾವುದೇ ಬಿಲ್ ಮಾಡುವಾಗ ಸಭೆಗೆ ಗಮನಕ್ಕೆ ತರುವಾಗ ಬಿಲ್ಲಿನ ಹಣ ತೋರಿಸಿ – ಅಶ್ವಿನಿಕುಮಾರ್
ನೀವು ಕೆಲಸ ಮಾಡಿದ ಬಿಲ್‌ಗಳ ಮಂಜೂರಾತಿಗಾಗಿ ಸಭೆಯ ನಡುವಳಿಯಲ್ಲಿ ತೋರಿಸಿರುತ್ತೀರಿ. ಸಭೆಯಲ್ಲಿ ಅನುಮೋದನೆ ಪಡೆದು ಹಣ ಪಡೆಯುತ್ತೀರಿ. ಇದು ಸರಿ ಆದರೆ ಸಭೆ ನಡುವಳಿಯಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೀರಿ ಎಷ್ಟು ಹಣ ಡ್ರಾ ಮಾಡಬೇಕೆಂದು ತಿಳಿಸದೇ ಇಷ್ಟು ಹಣ ಅಷ್ಟು ಹಣ ತೋರಿಸಿದರೆ ಇದು ಸರಿಯಾದ ಕ್ರಮವಲ್ಲ ಮುಂದಿನ ಸಭೆಯಲ್ಲಿ ಇಂತಹ ವಸ್ತುವಿಗೆ ಇಷ್ಟು ಹಣ ನೀಡಬೇಕು ಎಂದು ತೋರಿಸಿದರೆ ಮಾತ್ರ ಹಣ ಡ್ರಾ ಮಾಡಲು ಅವಕಾಶವಿದೆ ಇಲ್ಲವಾದರೆ ಅಧಿಕಾರಿಗಳೆ ಖರ್ಚು ಹಾಕಿಕೊಳ್ಳಬೇಕೆಂದು ಸದಸ್ಯ ಅಶ್ವಿನಿಕುಮಾರ್‌ರವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ ಮಾಜಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಗುರುರಾಜ್, ನಾಗಪ್ಪ, ಸುರೇಂದ್ರ ಕೊಟ್ಯಾನ್, ಚಂದ್ರಕಲಾ ನಾಗರಾಜ್ ಗಾಯಿತ್ರಿ ನಾಗರಾಜ್, ಶಾಹೀನ, ಹಾಲಗದ್ದೆ ಉಮೇಶ್, ಅಶ್ವಿನಿಕುಮಾರ್, ಮುಖ್ಯಾಧಿಕಾರಿ ಮಾರುತಿ, ಇಂಜಿನೀಯರಿಂಗ್ ಹೆಗಡೆ, ಕಂದಾಯ ಇಲಾಖೆಯ ಪರಶುರಾಮ್, ಮಂಜುನಾಥ್, ಉಮಾಶಂಕರ್, ಗಿರೀಶ್, ನೇತ್ರಾ, ಆಸ್ಮಾ, ಲಕ್ಷ್ಮಣ, ಬಸವರಾಜ್, ಚಂದ್ರಪ್ಪ ಯಶೋಧಮ್ಮ, ಕುಮಾರಿ ಇನ್ನೂ ಮುಂತಾದವರು ಸಭೆಯಲ್ಲಿ ಭಾಗವಹಿಸಿ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದರು.

Leave A Reply

Your email address will not be published.

error: Content is protected !!