ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುವ ನಿರೀಕ್ಷೆ ; ಆಯನೂರು ಮಂಜುನಾಥ್

0 275

ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುವ ನಿರೀಕ್ಷೆ ಇದ್ದು, ಅದಕ್ಕಾಗಿ ನಾಳೆಯಿಂದಲೇ ಕ್ಷೇತ್ರದಲ್ಲಿ ಪ್ರವಾಸ ಮಾಡುವೇ ಎಂದು ಕೆಪಿಸಿಸಿ ವಕ್ತಾರ ಹಾಗೂ ಟಿಕೆಟ್ ಆಕಾಂಕ್ಷಿ ಆಯನೂರು ಮಂಜುನಾಥ್ ಹೇಳಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ಹಲವು ವರ್ಷಗಳಿಂದ ಕಾಲೇಜು ಅತಿಥಿ ಉಪನ್ಯಾಸಕರ ಕಾರ್ಮಿಕರ ಸಮಸ್ಯೆಗಳನ್ನಿಟ್ಟುಕೊಂಡು ಯಾವುದೇ ಸರ್ಕಾರವಿದ್ದರು ಹೋರಾಟ ನಡೆಸುತ್ತಾ ಬಂದಿದ್ದೇನೆ. ಸದನದಲ್ಲಿ ಗಟ್ಟಿ ಧ್ವನಿಯನ್ನು ಎತ್ತಿದ್ದೇನೆ. ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇದೆ. ರಾಜ್ಯದ ನಾಯಕರು ಈ ಸೂಚನೆ ನೀಡಿದ್ದಾರೆ. ಕ್ಷೇತ್ರದಲ್ಲಿ ಓಡಾಡುವಂತೆ ಸಲಹೆ ಕೊಟ್ಟಿದ್ದಾರೆ. ಅದರಂತೆ ನಾಳೆಯಿಂದಲೇ ಕ್ಷೇತ್ರದಲ್ಲಿ ಓಡಾಡುತ್ತೇನೆ. ಕಳೆದ 42 ವರ್ಷಗಳಿಂದ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಈ ಬಾರಿ ಗೆದ್ದು ತೋರಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಹಳೆ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರುವ ಇಂಗಿತವನ್ನು ವ್ಯಕ್ತಪಡಿಸಿದೆ. ಹೊಸ ಪಿಂಚಣಿ ವ್ಯವಸ್ಥೆ ರದ್ದಾಗಲಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಮತ್ತು ಮುಂದಿನ ಆಯ-ವ್ಯಯ ಬಜೆಟ್‌ನಲ್ಲಿಯೂ ಕೂಡ ಚರ್ಚಿಸಲಾಗುತ್ತಿದೆ. ಇದು ಅತ್ಯಂತ ಸ್ವಾಗತದ ವಿಷಯವಾಗಿದೆ ಎಂದರು.

ಆದರೆ, ಸರ್ಕಾರಿ ನೌಕರರಿಗೆ ಜಾರಿಗೆ ಬರುವಂತೆ ಅನುದಾನಿತ ಖಾಸಗಿ, ಅರೆ ಸರ್ಕಾರಿ ಸ್ವಯುತ್ತತೆ ಹೊಂದಿರುವ ಸರ್ಕಾರಿ ನೌಕರರಿಗೂ ಕೂಡ ಈ ಯೋಜನೆಯೂ ವಿಸ್ತಾರವಾಗಬೇಕಾಗಿದೆ. ಏಕೆಂದರೆ 2006ರ ನಂತರ ನೌಕರಿ ಪಡೆದವರಿಗೆ ಇದು ಅನ್ವಯವಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ. ಅದು ಏನೆಂದರೆ 2005ರಲ್ಲಿ ನೋಟಿಪೀಕೇಷನ್ ಆಗಿ, ಪಟ್ಟಿಯೂ ರೆಡಿ ಇದ್ದು, 2006ರಲ್ಲಿ ನೌಕರಿ ನೀಡಿದ್ದರೆ ಅಂತವರಿಗು ಕೂಡ ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಲಿದೆ. ಈ ಅನುಕೂಲವನ್ನು ಅನುದಾನಿತ ಶಾಲೆಯ ನೌಕರರು ಕೂಡ ಪಡೆಯಬೇಕು, ಏಕೆಂದರೆ, ಅನುದಾನ ಪಡೆಯುವ ಮೊದಲು ಹಲವು ವರ್ಷಗಳ ತನಕ ಅಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ಇವರಿಗೂ ಕೂಡ ಓಪಿಎಸ್ ಜಾರಿಯಾಗಬೇಕು. ಸುಮಾರು 11500 ನೌಕರರಿಗೆ ಇದರಿಂದ ಪ್ರಯೋಜನವಾಗುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ಅನಂತ್‌ಕುಮಾರ್ ಹೆಗಡೆ ಮಾತನಾಡಿರುವುದು ಸರಿಯಲ್ಲ. ಯಾರೇ ಆಗಲಿ, ಯಾವ ಪಕ್ಷದವರೇ ಆಗಲಿ ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳಬೇಕು. ಸಾರ್ವಜನಿಕರ ವೇದಿಕೆಯಲ್ಲಿ ಮಾತನಾಡುವಾಗ ಪ್ರಜ್ಞೆ ಬಹಳ ಮುಖ್ಯ, ಇದು ಯಾರು ಮಾಡಿದರೂ ತಪ್ಪೇ ಇತ್ತೀಚೆಗೆ ಶಿವಮೊಗ್ಗದ ಶಾಸಕರು ಕೂಡ, ಬಾರೋ ಮಗನೆ ನೋಡಿಕೊಳ್ಳುತ್ತೇನೆ ಎಂದು ಮಾತನಾಡಿದ್ದರು, ಇದು ಸರಿಯಲ್ಲ. ಅನಂತ್‌ಕುಮಾರ್ ಹೆಗಡೆ ನನ್ನ ಗೆಳೆಯರು ಅವರು ಕ್ಷಮೆ ಕೇಳಿ ಇದನ್ನು ಮುಗಿಸಬೇಕು. ಬಿಜೆಪಿ ನಾಯಕರುಗಳು ದೇವಸ್ಥಾನವನ್ನು ಸ್ವಚ್ಛ ಮಾಡಿದರೆ ಮಾತ್ರ ಸಾಲದು ಅವರ ಮನಸ್ಸನ್ನು ಕೂಡ ಸ್ವಚ್ಛಗೊಳಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಧೀರರಾಜ್ ಹೊನ್ನವಿಲೆ, ಶಿ.ಜು.ಪಾಶ, ಹಿರಣ್ಣಯ್ಯ, ಲಕ್ಷ್ಮಣ್ಣಪ್ಪ, ಎಸ್.ಪಿ.ಪಾಟೀಲ್, ಕೃಷ್ಣ ಇದ್ದರು.

Leave A Reply

Your email address will not be published.

error: Content is protected !!