ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಇನ್ನಿಲ್ಲ !

0 1,407

ಮೂಡಿಗೆರೆ : ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ (87) ಸೋಮವಾರ ಮಧ್ಯರಾತ್ರಿ ದಾರದಹಳ್ಳಿಯ ತಮ್ಮ ನಿವಾಸ ‘ಪೂರ್ಣಚಂದ್ರ’ದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.


ಪತ್ನಿ ‍ಪೂರ್ಣಿಮಾ, ನಾಲ್ವರು ಪುತ್ರಿಯರಿದ್ದಾರೆ. ಚಂದ್ರೇಗೌಡ ಅವರ ಪಾರ್ಥೀವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.

ಬುಧವಾರ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಪಟೇಲ್ ಭೈರೇಗೌಡ ಹಾಗೂ ಪುಟ್ಟಮ್ಮ ಅವರ ಪುತ್ರ ಡಿ.ಬಿ. ಚಂದ್ರೇಗೌಡ, 1936 ಆಗಸ್ಟ್ 26 ರಂದು ಜನಿಸಿದ್ದರು. ಆಪ್ತ ವಲಯದಲ್ಲಿ ಡಿಬಿಸಿ ಎಂದೇ ಜನಾನೂರಾಗಿಯಾಗಿದ್ದ ಡಿ.ಬಿ ಚಂದ್ರೇಗೌಡರು, ಕಾನೂನು ಪದವಿ ಪಡೆದು ವಕೀಲ ವೃತ್ತಿಯಲ್ಲಿ ನಿರತರಾಗಿದ್ದರು. 1971ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಅವರು, ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಾಗುವ ಮೂಲಕ ನಾಲ್ಕೂ ಸದನಗಳಲ್ಲಿ ಸದಸ್ಯರಾಗಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1971ರಲ್ಲಿ ಚುನಾವಣ ಅಖಾಡಕ್ಕಿಳಿದ ಡಿ.ಬಿ. ಚಂದ್ರೇಗೌಡ ಅವರು ಮೊದಲ ಬಾರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. 1977ರಲ್ಲಿ 2ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಅವರು, 1978ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಸಂದರ್ಭ ಬಂದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಗೆಲುವಿಗೆ ಶ್ರಮಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.

ಸಂಸದರ ಸ್ಥಾನಕ್ಕೆ ರಾಜೀನಾಮೆಯ ಬಳಿಕ ವಿಧಾನ ಪರಿಷತ್ತಿನ ಸದಸ್ಯರಾಗಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸಂಪುಟದಲ್ಲಿ 1979-1980 ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇವರಾಜು ಅರಸು ಅವರೊಂದಿಗೆ ಕ್ರಾಂತಿರಂಗದಲ್ಲಿ ಗುರುತಿಸಿಕೊಂಡು 1980-81ರ ಅವಧಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು.

1983ರಲ್ಲಿ ಜನತಾ ಪಕ್ಷದಿಂದ ತೀರ್ಥಹಳ್ಳಿ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1983-85ರವರೆಗೆ ಚಂದ್ರೇಗೌಡರು ವಿಧಾನಸಭಾ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 1986ರಲ್ಲಿ ಇವರು ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 1987ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಪಡೆದಿದ್ದರು.

1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೃಂಗೇರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ 1999ರಿಂದ 2004ರವರೆಗೆ ಎಸ್.ಎಂ. ಕೃಷ್ಣಾ ಅವರ ಸಂಪುಟದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2009ರಲ್ಲಿ ಬಿಜೆಪಿ ಸೇರಿದ್ದ ಅವರು ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.

ಸಮಾಜವಾದಿ ಚಿಂತಕರಾಗಿದ್ದ ಡಿ.ಬಿ ಚಂದ್ರೇಗೌಡರು ನಾಲ್ಕೂವರೆ ದಶಕಗಳ ಕಾಲ ರಾಜಕೀಯ, ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2014ರಿಂದ ಈಚೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದ ಅವರು, ದಾರದಹಳ್ಳಿಯ ತಮ್ಮ ‘ಪೂರ್ಣಚಂದ್ರ’ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು

Leave A Reply

Your email address will not be published.

error: Content is protected !!