ಜ.7 ರಂದು ಶ್ರೀ ರಂಭಾಪುರಿ ಜಗದ್ಗುರುಗಳ ಜನ್ಮದಿನೋತ್ಸವ ಸಮಾರಂಭ

0 235

ಎನ್.ಆರ್.ಪುರ : ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ 68ನೇ ಜನ್ಮದಿನೋತ್ಸವ ಜ.7 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ತೆಲಂಗಾಣ ರಾಜ್ಯದ ಕೊಲನುಪಾಕ (ಕೊಲ್ಲಿಪಾಕಿ) ಸ್ವಯಂಭು ಶ್ರೀ ಸೋಮೇಶ್ವರ ದೇವಸ್ಥಾನದ ಪರಿಸರದಲ್ಲಿ ಜರುಗುವುದು.

ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುವ ಸಮಾರಂಭವನ್ನು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಉದ್ಘಾಟಿಸುವರು. ಅಲೇರು ಕ್ಷೇತ್ರದ ಶಾಸಕ ಬರ‍್ಲಾ ಐಲಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ರಂಭಾಪುರಿ ಬೆಳಗು ಮಾಸಿಕ ಬಿಡುಗಡೆ ಮಾಡುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ|| ಶರಣ ಪ್ರಕಾಶ ಪಾಟೀಲ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿಪ್ರಕಾಶ ಮಿರ್ಜಿ ಹಾಗೂ ಕೊಲನಪಾಕ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸುವರು. ಉಪಸ್ಥಿತರಿರುವ ನಾಡಿನ ಮಠಾಧೀಶರು ನೇತೃತ್ವ ವಹಿಸುವರು.

ಐದು ದಿನಗಳ ದಾಸೋಹ ಹಾಗೂ ಸೇವಾರ್ಥಿಗಳಿಗೆ ಗುರುರಕ್ಷೆ ನೀಡುವ ಸೇವೆಯನ್ನು ಕಲಬುರಗಿಯ ಸಮಾಜ ಸೇವಕ ಗಿರಿಯಪ್ಪ ಮುತ್ಯಾ ನಿರ್ವಹಿಸುವರು. ದಿನಾಂಕ 3ರಿಂದ 6ರ ವರೆಗಿನ ಪೂಜಾ ಸೇವಾಕರ್ತರಾಗಿ ಬೆಂಗಳೂರಿನ ಚಂದ್ರಶೇಖರ ನಾಗರಾಳಮಠ, ಚಿಟಗುಪ್ಪದ ಮಲ್ಲಿಕಾರ್ಜುನ ಉಣ್ಣೆ, ಭಾಲ್ಕಿಯ ಚನ್ನಬಸವಣ್ಣ ಬಳಕೆ, ಬೆಂಗಳೂರಿನ ಬೀರೂರು ಶಿವಸ್ವಾಮಿ, ಹೈದರಾಬಾದಿನ ಎಮ್.ವೀರಮಲ್ಲೇಶ, ರಾಮ್ ರೆಡ್ಡಿ, ವಿಜಯಕುಮಾರ ಹೆರೂರು ಹಾಗೂ 7ರಂದು ಶಿವಾಚಾರ್ಯರ ಸಮೂಹ ಪಾಲ್ಗೊಳ್ಳುವರು.

ಜ. 5ರಂದು ವಿಜಯನಗರ ಜಿಲ್ಲೆ ಹರಪನಹಳ್ಳಿ ಸದ್ಭಕ್ತರಿಂದ ಶ್ರೀ ವೀರಭದ್ರಸ್ವಾಮಿ ಗುಗ್ಗುಳ ಮಹೋತ್ಸವ ಜರುಗುವುದು. ಜ. 3ರಿಂದ 7ರ ವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸುವರು.

ಈ ಎಲ್ಲ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಹಾಗೂ ಲಿಂಗಸುಗೂರು ಶ್ರೀ ಮಾಣಿಕ್ಯೇಶ್ವರಿ ಆಶ್ರಮದ ಮಾತಾ ನಂದಿಕೇಶ್ವರಿ ಅಮ್ಮನವರು ಹಾಗೂ ಶ್ರೀ ಜಗದ್ಗುರು ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ ನಿರ್ವಹಿಸುವರು.

ಮಾರ್ಗಸೂಚಿ:
ಕೊಲ್ಲಿಪಾಕಿ (ಕೊಲನುಪಾಕ) ಸುಕ್ಷೇತ್ರಕ್ಕಾಗಿ ರಸ್ತೆ ಮಾರ್ಗವಾಗಿ ಬರುವವರು ಹೈದರಾಬಾದ, ಕಾಚಿಗುಡ್ಡ ಅಥವಾ ಸಿಕಂದರಾಬಾದಿಗೆ ಬಂದು ಅಲ್ಲಿಂದ ವಾರಂಗಲ್ ರಸ್ತೆ ಮೂಲಕ ಭುವನಗಿರಿ-ಅಲೇರು ತಲುಪಿ ಅಲ್ಲಿಂದ ಕೊಲನುಪಾಕ ಕ್ಷೇತ್ರದ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ತಲುಪಬಹುದು.
ರೈಲು ಮೂಲಕ ಆಗಮಿಸುವವರು ಸಿಕಂದರಾಬಾದ ರೇಲ್ವೆ ಸ್ಟೇಷನ್ ಮೂಲಕ ಅಲೇರು ನಿಲ್ದಾಣಕ್ಕೆ ಬಂದರೆ ಅಲ್ಲಿಂದ 7 ಕಿ.ಮೀ.ಅಂತರದಲ್ಲಿರುವ ಕೊಲನುಪಾಕ ಕ್ಷೇತ್ರದ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಆಟೋಗಳ ಮೂಲಕ ಬರಬಹುದಾಗಿದೆ.
ಹುಬ್ಬಳ್ಳಿಯಿಂದ ಕಾಝಿಪೇಟ ಎಕ್ಸ್‌ಪ್ರೆಸ್‌ ಮೂಲಕ ಬೊಂಗಿರ ಸ್ಟೇಷನ್‌ಗೆ ಬಂದರೆ ಬಸ್ ಮೂಲಕ ಕೊಲನಪಾಕ ಕ್ಷೇತ್ರಕ್ಕೆ (35 ಕಿ.ಮೀ.) ಬರಬಹುದಾಗಿದೆ.

Leave A Reply

Your email address will not be published.

error: Content is protected !!