ಹೊಸನಗರ ತಾಲ್ಲೂಕನ್ನು ಅಭಿವೃದ್ಧಿ ಮಾಡದಿದ್ದರೂ ಚಿಂತಿಸುವುದಿಲ್ಲ ಆದರೆ ಮೊದಲು ಈ ಕೆಲಸ ಮಾಡಿ ಕೊಡಿ ನೂತನ ಶಾಸಕರೇ….

0 129


ಹೊಸನಗರ: ಸುಮಾರು ಹತ್ತು ವರ್ಷಗಳಿಂದ ಹೊಸನಗರ ಪಟ್ಟಣವನ್ನು ಸುಂದರವಾಗಿ ಮಾಡುತ್ತೇವೆ ಹೊಸನಗರ ತಾಲ್ಲೂಕಿನಲ್ಲಿ ಎಲ್ಲ ಸವಲತ್ತುಗಳು ಸಿಗುವಂತೆ ಮಾಡುತ್ತೇವೆ ಸುಮಾರು 3 ಸಾವಿರ ಜನರು ಕೆಲಸ ಮಾಡುವ ಫ್ಯಾಕ್ಟರಿ ತರುತ್ತೇವೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸುಂದರ ಪಾರ್ಕ್ ಮಾಡುತ್ತೇವೆ ಎಂಬ ಆಶ್ವಾಸನೆ ಕೇಳಿ-ಕೇಳಿ ಹೊಸನಗರ ತಾಲ್ಲೂಕಿನ ಜನರ ಕಿವಿ ತೂತು ಆಗಿದೆ ಸ್ವಾಮಿ, ಇನ್ನೂ ಅಭಿವೃದ್ಧಿ ಮಾಡದಿದ್ದರೂ ಚಿಂತೆಯಿಲ್ಲ ದಿನದ 24 ಗಂಟೆ ವಿದ್ಯುತ್ ಸ್ಥಗಿತವಾಗದಂತೆ ನೋಡಿಕೊಳ್ಳಿ ಎಂದು ನೂತನವಾಗಿ ಆಯ್ಕೆಯಾಗಿರುವ ಬೇಳೂರು ಗೋಪಾಲಕೃಷ್ಣರವರಿಗೆ ಹೊಸನಗರ ತಾಲ್ಲೂಕಿನ ಜನರು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.


ಹೊಸನಗರ ತಾಲ್ಲೂಕು ಮಲೆನಾಡು ಪ್ರದೇಶವಾಗಿದ್ದು ಇಡೀ ಕರ್ನಾಟಕ ಜನರಿಗೆ ಬೆಳಕು ನೀಡುವ ತಾಲ್ಲೂಕು ಆಗಿದೆ. ದೀಪದ ಕೆಳಗೆ ಕತ್ತಲೆ ಎಂಬಂತೆ ನಾವು ನಮ್ಮ ತಾಲ್ಲೂಕಿನ ಜನರು ಕತ್ತಲೆಯಲ್ಲಿ ಕುಳಿತುಕೊಳ್ಳುವ ಪರಿಸ್ಥತಿ ಬಂದಿದೆ ಇದಕ್ಕೆಲ್ಲ ಕಾರಣ ನಮ್ಮನ್ನೂ ಆಳುತ್ತಿರುವ ನಮ್ಮ ಶಾಸಕರೆ ಹೊಣೆ. ಸುಮಾರು 10ವರ್ಷಗಳ ಹಿಂದೆ ಸಾಗರ- ಹೊಸನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಗೋಡು ತಿಮ್ಮಪ್ಪನವರಲ್ಲಿ ಹೊಸನಗರ ತಾಲ್ಲೂಕಿನ ಜನರು ಬೇಡಿಕೆ ಸಲ್ಲಿಸಿ ಸುಸ್ತಾಗಿದ್ದಾರೆ ನಂತರ ಇದೇ ಕ್ಷೇತ್ರಕ್ಕೆ ಆಯ್ಕೆಯಾದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದ ಹರತಾಳು ಹಾಲಪ್ಪನವರ ಗಮನಕ್ಕೂ ಜನರು ತಂದಾಗ 4ವರ್ಷ ಅವರು ತಳ್ಳಿ-ತಳ್ಳಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹೊಸನಗರ ತಾಲ್ಲೂಕು ಅಲಗೇರಿ ಮಂಡ್ರಿಯಲ್ಲಿ ಸಬ್ ಸ್ಟೇಶನ್ ನಿರ್ಮಿಸಲು ಜಾಗ ಸಿಕ್ಕಿದೆ ಇನ್ನೂ ಮುಂದೆ ಹೊಸನಗರ ತಾಲ್ಲೂಕಿನ ಜನರಿಗೆ ವಿದ್ಯುತ್ ಅಭಾವ ಸಂಭವಿಸುವುದಿಲ್ಲ ದಿನದ 24ಗಂಟೆಯು ವಿದ್ಯುತ್ ನೀಡುತ್ತೇವೆ ಎಂದು 33 ಕೆ.ವಿ ವಿದ್ಯುತ್ ಸಬ್ ಸ್ಟೇಶನ್ ಉದ್ಘಾಟನೆಯು ಆಯಿತು ಆದರೆ ಮುಂದೆ ಅದೇನಾಯಿತೋ ಗೊತ್ತಿಲ್ಲ ಶಾಸಕರಾಗಿ ಗೆದ್ದು ಬಂದವರು ಹೊಸನಗರ ತಾಲ್ಲೂಕಿನ ಜನರಿಗೆ ಕಿವಿಗೆ ದಾಸಳ ಹೂವು ಇಡುವುದರಲ್ಲಿಯೇ ತಮ್ಮ 5ವರ್ಷದ ಅವಧಿ ಮುಗಿಸುತ್ತಿದ್ದಾರೆ ಹೊಸನಗರ ತಾಲ್ಲೂಕಿನ ಜನರು ಇಂದು ಸರಿಯಾಗುತ್ತದೆ-ನಾಳೆ ಸರಿಯಾಗುತ್ತದೆ ಎಂದು ತಮ್ಮ ವಯಸ್ಸು ಮಾತ್ರ ಹೆಚ್ಚಿಸಿಕೊಳ್ಳುತ್ತಿದ್ದು ಇಲ್ಲಿಯವರೆಗೆ ಗೆದ್ದಿರುವ ಯಾವ ಶಾಸಕರು ಹೊಸನಗರ ತಾಲ್ಲೂಕಿನ ವಿದ್ಯುತ್ ಸ್ಥಗಿತ ಕಣ್ಣು ತೆರೆಸುವ ಗೋಜಿಗೆ ಹೋಗದಿರುವುದು ವಿಪರ್ಯಾಸ.


ಅಂಗಡಿಯವರ ಗೋಳು ಕೇಳುವವರ‍್ಯಾರು?

ಹೊಸನಗರ ತಾಲ್ಲೂಕಿನಲ್ಲಿ ಪಟ್ಟಣದಲ್ಲಿ ಸಾಕಷ್ಟು ಜನರು ತಮ್ಮ ಹೊಟ್ಟೆ ಪಾಡಿಗಾಗಿ ಸಣ್ಣ-ಸಣ್ಣ ಜೆರಾಕ್ಸ್ ಅಂಗಡಿಗಳು- ಹೋಟೆಲ್‌ಗಳು ದಿನಸಿ ಅಂಗಡಿಗಳನ್ನು ಕಂಪ್ಯೂಟರ್ ಸೆಂಟರ್‌ಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ ವಿದ್ಯುತ್ ಸ್ಥಗಿತದಿಂದ ಅವರು ಜೀವನ ಸಾಗಿಸುವ ದಾರಿ ಏನು? ಶ್ರೀಮಂತರು ಸೋಲಾರ್, ಯುಪಿಎಸ್‌ಗಳನ್ನು ಹಾಕಿಕೊಂಡು ದಿನನಿತ್ಯದ ದುಡಿಮೆ ಮಾಡುತ್ತಾರೆ ರೈತರು ತಮ್ಮ ಅಡಿಕೆ ತೋಟಗಳಿಗೆ ಗದ್ದೆಗಳಿಗೆ ಇತರೆ ಬೆಳೆದ ಬೆಳೆಗಳು ಸರಿಯಾದ ವಿದ್ಯುತ್ ವೋಲ್ಟೇಜ್ ಇಲ್ಲದೇ ಬಿಸಿಲಿನ ತಾಪಕ್ಕೆ ಒಣಗಿ ಹೋಗುತ್ತಿದೆ ತಾಲ್ಲೂಕಿನ ಜನಗಳ ರೈತರ ಕಷ್ಟ ಕೇಳುವವರ‍್ಯಾರು?


ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಅಭಿನಂದನೆ: ಹೊಸನಗರ ತಾಲ್ಲೂಕಿಗೆ ಚಿರಪರಿಚಿತರಾಗಿರುವ ಬೇಳೂರು ಗೋಪಾಲಕೃಷ್ಣರವರು 15ವರ್ಷಗಳ ಹಿಂದೆ ನಮ್ಮ ಕ್ಷೇತ್ರಕ್ಕೆ ಶಾಸಕರಾಗಿ ಸೇವೆ ಸಲ್ಲಿಸಿರುವವರು ಮತ್ತೊಮ್ಮೆ ಆಯ್ಕೆಯಾಗಿರುವುದಕ್ಕೆ ಕ್ಷೇತ್ರದ ಶಾಸಕರ ಪರವಾಗಿ ಅಭಿನಂದನೆಗಳು ಆದರೆ ನಮ್ಮ ಕ್ಷೇತ್ರದ ಬೇಡಿಕೆಯಾದ ವಿದ್ಯುತ್ ಸ್ಥಗಿತವನ್ನು ನಿಲ್ಲಿಸಿ ಹಾಗೂ ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ 24ಗಂಟೆ ವಿದ್ಯುತ್ ನಿಲುಗಡೆಯಾಗದಂತೆ ಮೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿ ಎಂದು ಕ್ಷೇತ್ರದ ಜನರ ಬಹು ದಿನದ ಬೇಡಿಕೆ ಯಾಗಿದ್ದು ಇನ್ನೂ ಮುಂದಾದರೂ ವಿದ್ಯುತ್ ಸ್ಥಗಿತ ನಿಲ್ಲುವುದೇ ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!