Shivamogga | ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ, ಕಾನೂನನ್ನು ಎಲ್ಲರೂ ಗೌರವಿಸಬೇಕು ; ಮಧು ಬಂಗಾರಪ್ಪ

0 325

ಶಿವಮೊಗ್ಗ: ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಕಾನೂನನ್ನು ಎಲ್ಲರೂ ಗೌರವಿಸಬೇಕು. ಪಕ್ಷಬೇಧ ಮರೆತು ಶಿವಮೊಗ್ಗದ ಶಾಂತಿಗಾಗಿ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.


ಅವರು ಇಂದು ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ರಾಗಿಗುಡ್ಡದಲ್ಲಿ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಹಾನಿಗೊಳಗಾದವರ ಮನೆಗಳಿಗೆ ಭೇಟಿ ನೀಡಿ, ನಂತರ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ರಾಗಿಗುಡ್ಡದಲ್ಲಿ ಆದ ಘಟನೆ ವಿಷಾದನೀಯ. ಗಣಪತಿ ಮತ್ತು ಈದ್ ಮಿಲಾದ್ ಮೆರವಣಿಗೆಗಳು ಎರಡೂ ಶಾಂತಿಯುತವಾಗಿ ನಡೆದಿವೆ. ಆದರೆ, ಕೊನೆ ಸಂದರ್ಭದಲ್ಲಿ ರಾಗಿಗುಡ್ಡದಲ್ಲಿ ಕಹಿ ಘಟನೆ ನಡೆದಿದೆ. ಅನೇಕ ಮನೆಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಮನೆಯ ಕಿಟಕಿಗಳ ಗ್ಲಾಸ್ ಗಳು ಒಡೆದು ಹೋಗಿದ್ದು, ಹಲವರಿಗೆ ಗಾಯಗಳಾಗಿವೆ. ನಾನು ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ಹಲವರು ತಮಗಾದ ತೊಂದರೆಯಾದ ಬಗ್ಗೆ ಹೇಳಿದ್ದಾರೆ. ಅವರೆಲ್ಲರಿಗೂ ಸಮಾಧಾನ ಮಾಡಿದ್ದೇನೆ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಹಲವು ವಿಡಿಯೋಗಳಿವೆ. ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿವೆ. ಪೊಲೀಸ್ ಇಲಾಖೆ ಎಲ್ಲವನ್ನೂ ಪರಿಶೀಲಿಸಿದೆ. ಘಟನೆಗೆ ಸಂಬಂಧಿಸಿದಂತೆ 60 ಜನರ ಬಂಧಿಸಲಾಗಿದೆ. 24 ಎಫ್‌ಐಆರ್ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಇರುವವರು ಬೇಗನೆ ಗುಣಮುಖರಾಗುತ್ತಿದ್ದಾರೆ. ಯಾರೋ ಕೆಲವು ಕಿಡಿಗೇಡಿಗಳ ಕೆಲಸದಿಂದ ಇಡೀ ಶಿವಮೊಗ್ಗಕ್ಕೆ ಕೆಟ್ಟ ಹೆಸರು ಬಂದಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಸೇರಿದಂತೆ ಎಲ್ಲರಿಗೂ ಸಹನೆ ಬೇಕು. ಮಾಧ್ಯಮಗಳು ದಯವಿಟ್ಟು ವಿಜೃಂಭಿಸಬಾರದು. ಪೊಲೀಸರು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂದರು.


ಶಿವಮೊಗ್ಗದಲ್ಲಿ ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ 144 ಜಾರಿಯ ಅವಶ್ಯಕತೆ ಇತ್ತು. ಅದು ಶಿವಮೊಗ್ಗಕ್ಕೆ ಬೇಡ ಎಂದು ವ್ಯಾಪಾರಸ್ಥರು ಹೇಳಿದ್ದಾರೆ. ಸೆಕ್ಷನ್ 144 ಕೂಡ ಹಲವು ವಿಧದಲ್ಲಿ ಇರುತ್ತದೆ. ಸಿಟಿಗೆ ಸಂಬಂಧಿಸಿದಂತೆ ಅದನ್ನು ಸಡಿಲಗೊಳಿಸಲಾಗಿದೆ. ಆದರೆ, ರಾಗಿಗುಡ್ಡದ ಪ್ರದೇಶದಲ್ಲಿ ಬಿಗಿಯಾಗಿಯೇ ಇದೆ. ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಅಗತ್ಯಕ್ರಮ ಕೈಗೊಂಡಿದ್ದಾರೆ ಎಂದರು.


ವಿಪಕ್ಷಗಳು ಇಡೀ ಘಟನೆಯನ್ನು ಖಂಡಿಸುತ್ತಿವೆ. ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ವಿಪಕ್ಷಗಳ ಆರೋಪಕ್ಕೆ ಉತ್ತರ ಕೊಡುವ ಸಮಯ ಇದಲ್ಲ. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಆರೋಪ ಮಾಡುವುದಕ್ಕಿಂತ ಏನಾದರೂ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ತಿಳಿಸಲಿ. ಧರ್ಮ, ಪಕ್ಷ ಮರೆತು ಇಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ಸಂಯಮದಿಂದ ವರ್ತಿಸಬೇಕಾಗುತ್ತದೆ. ಕಾನೂನಿಗೆ ಗೌರವ ಕೊಡಬೇಕಾಗುತ್ತದೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಯಾವ ಮುಲಾಜು ನೋಡದೇ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹಲವರನ್ನು ಜೈಲಿಗೆ ಕಳಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು. ಇಂತಹ ಘಟನೆಗಳು ಮರುಕಳಿಸಬಾರದು ಮತ್ತು ತೊಂದರೆಯಾದವರಿಗೆ ಸರ್ಕಾರದಿಂದ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ಅದು ಆಗದಿದ್ದರೆ ನಾವೆಲ್ಲಾ ಸೇರಿ ಪಕ್ಷಾತೀತವಾಗಿ ಅವರಿಗೆ ನೆರವು ನೀಡೋಣ. ದುಡಿಯುವ ಕೈಗಳಿಗೆ ತೊಂದರೆ ಆದರೆ ಸಹಾಯ ಮಾಡುವುದು ಮನುಷ್ಯ ಧರ್ಮ ಎಂದರು.


ರಾಗಿಗುಡ್ಡ ಮತ್ತು ಮೆಗ್ಗಾನ್ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ಹಾಗೂ ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್. ಸುಂದರೇಶ್, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಹೆಚ್.ಸಿ. ಯೋಗೀಶ್, ಧೀರರಾಜ್ ಹೊನ್ನವಿಲೆ, ಅಫ್ತಾಬ್ ಫರ್ವಿಜ್ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!