ಜೈನ ಮುನಿ ಹತ್ಯೆ ; ವಿವಿಧ ಮಠದ ಶ್ರೀಗಳಿಂದ ಖಂಡನೆ

0 36


ಎನ್.ಆರ್.ಪುರ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತೀವ್ರವಾಗಿ ಖಂಡಿಸಿದ್ದಾರೆ.


ಅವರು ಭಾನುವಾರ ದಾವಣಗೆರೆ ನಗರದ ಶ್ರೀಮದಭಿನವ ರೇಣುಕ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ, ಅಹಿಂಸಾ ಮಾರ್ಗದಲ್ಲಿ ಸಾಗುತ್ತಿದ್ದ ಮತ್ತು ತಮ್ಮ ಕೈಯಿಂದ ಬಡ ಜನರಿಗೆ ಉಪಕಾರ ಮಾಡುತ್ತಿದ್ದ ಜೈನಮುನಿ ಕಾಮಕುಮಾರ ನಂದಿ ಮುನಿಗಳ ಅಮಾನುಷ ಹತ್ಯೆ ಇಡೀ ನಾಗರೀಕ ಪ್ರಪಂಚಕ್ಕೆ ತಲೆ ತಗ್ಗಿಸುವಂಥ ಘಟನೆಯಾಗಿದೆ. ಮಾನವೀಯತೆ ಇಲ್ಲದ ದುಷ್ಟ ಶಕ್ತಿಗಳು ಈ ಕೃತ್ಯ ಎಸೆಗಿದ್ದು ತಪ್ಪತಸ್ಥರಿಗೆ ಕಠಿಣ ಶಿಕ್ಷೆಯನ್ನು ಸರ್ಕಾರ ವಿಧಿಸುವಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಬಯಸಿದ ಜಗದ್ಗುರುಗಳು ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸುವವರಿಗೆ ಸರಕಾರ ರಕ್ಷಣೆಯನ್ನು ಕೊಡಬೇಕೆಂದು ಒತ್ತಾಯಪಡಿಸಿದ್ದಾರೆ. ಅಲ್ಲದೇ ಇಂಥ ಘಟನೆ ಮುಂದೆ ನಡೆಯಲಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದರು.

ರಂಭಾಪುರಿ ಶ್ರೀಗಳು


ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಲದ ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಲ್ಲಿ ಸಂಘರ್ಷ ಉಂಟಾಗಿ 12 ಜನರು ಸಾವಿಗೀಡಾಗಿದ್ದು ನೋವಿನ ಸಂಗತಿ. ರಾಜಕೀಯ ಅಧಿಕಾರ ಪಡೆಯಲು ವ್ಯಾಪಕವಾದ ಸಂಘರ್ಷಗಳು ಇತ್ತೀಚೆಗೆ ಹೆಚ್ಚೆಚ್ಚು ನಡೆಯುತ್ತಿರುವುದು ಒಳ್ಳೆಯದಲ್ಲ. ರಾಜಕೀಯ ಧುರೀಣರು ಉದ್ರೇಕ ಭಾವನೆಗಳಿಂದ ಆಗುವ ಅನಾಹುತಕ್ಕೆ ಅವಕಾಶ ಕೊಡದೇ ಜನ ಸಮುದಾಯ ಪರಸ್ಪರ ಶಾಂತಿ ಸಾಮರಸ್ಯದಿಂದ ಬಾಳಲು ಶ್ರಮಿಸಬೇಕೆಂದು ತಿಳಿಸಿದ್ದಾರೆ.

ಹೊಂಬುಜ ಶ್ರೀಗಳ ಖಂಡನೆ

ರಿಪ್ಪನ್‌ಪೇಟೆ: ಪ್ರಸ್ತುತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತದಲ್ಲಿನ ಜೈನ ಮಂದಿರದ ಮುನಿ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮಹಾರಾಜರು ನಾಪತ್ತೆಯಾಗಿ ಹತ್ಯೆಯಾಗಿರುವುದು ಅತ್ಯಂತ ದುಃಖದ ವಿಷಯವಾಗಿದೆ. ಮುನಿಮಹಾರಾಜರನ್ನು ತೀವ್ರ ಹಿಂಸಾತ್ಮಕ ರೀತಿಯಲ್ಲಿ ಕೊಲೆ ಮಾಡಿರುವುದು ಖಂಡನೀಯ. ಇಂತಹ ಅಹಿತಕರ ಘಟನೆಗಳು ನಾಗರೀಕ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮುನಿಶ್ರೀಗಳ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಗ್ರಹಿಸಿದ್ದಾರೆ.

ಆಧ್ಯಾತ್ಮ ಪ್ರವರ್ತಕರೂ, ಶಾಂತಿ ಪ್ರಿಯರೂ ಮತ್ತು ಅಹಿಂಸೆಯ ಪ್ರತಿಪಾದಕರೂ ಆಗಿರುವ ಜೈನ ಮುನಿಗಳಿಗೆ ಇಂತಹ ಅಹಿತಕರ ಘಟನೆಗಳಿಂದ ತೊಂದರೆಯಾಗದಂತೆ ಭದ್ರತೆಯನ್ನು ನೀಡಬೇಕು ಮತ್ತು ಎಲ್ಲ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕರ್ನಾಟಕ ಸರ್ಕಾರದವರು ಕೈಗೊಂಡು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಒತ್ತಾಯಿಸಿದ್ದಾರೆ.

ಲಕ್ಕವಳ್ಳಿಯ ಮೋಕ್ಷ ಮಂದಿರ ಶ್ರೀಗಳ ವಿಷಾದ

ಸೊರಬ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತದಲ್ಲಿ ಜೈನ ಮಂದಿರದ ಮುನಿ ಆಚಾರ್ಯ ಶ್ರೀ 108 ಕಾಮ‌ಕುಮಾರ ನಂದಿ ಮಹಾರಾಜರ ಹತ್ಯೆ ಅತ್ಯಂತ ದುಃಖದ ಹಾಗೂ ಖಂಡನೀಯ ವಿಷಯ ಎಂದು ಲಕ್ಕವಳ್ಳಿಯ ಮೋಕ್ಷ ಮಂದಿರ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಲಕ್ಕವಳ್ಳಿಯ ಶ್ರೀ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಕುಮಾರನಂದಿ ಮಹಾರಾಜರನ್ನು ತೀವ್ರ ಹಿಂಸಾತ್ಮಕವಾಗಿ ಹತ್ಯೆ ಮಾಡಲಾಗಿದೆ. ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯನ್ನು ಬೋಧಿಸಿದ ಜೈನ ಸಮಾಜದ ಮುನಿಗಳನ್ನು ಅಮಾನುಷವಾಗಿ ಕೊಲೆ ಮಾಡಿರುವುದು ಘೋರ ಅಪರಾಧವಾಗಿದ್ದು, ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಲಕ್ಕವಳ್ಳಿ ಮೋಕ್ಷ ಮಂದಿರ ಶ್ರೀಗಳ

ಶ್ರೀಗಳ ಹತ್ಯೆ ಘಟನೆಯಿಂದ ಅಲ್ಪ ಸಂಖ್ಯಾತರ ಜೈನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆಧ್ಯಾತ್ಮ ಪ್ರವರ್ತಕರು, ಶಾಂತಿ ಪ್ರಿಯರು ಮತ್ತು ಅಹಿಂಸಾ ಪ್ರತಿಪಾದಕರಾದ ಜೈನ ಮುನಿಗಳಿಗೆ ಅಹಿತಕರ ಘಟನೆಗಳಿಂದ ತೊಂದರೆಯಾಗದಂತೆ ಭದ್ರತಾ ಕ್ರಮ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸುರೇಶ್ ವೀರಾಪುರ, ಸೋಮಪ್ಪ ಜೈನರ್ ತಲಗಡ್ಡೆ ಸೇರಿದಂತೆ ಇತರರಿದ್ದರು.

Leave A Reply

Your email address will not be published.

error: Content is protected !!