ಸಹಕಾರ ಕ್ಷೇತ್ರಗಳು ಕೇವಲ ಉಳ್ಳವರ ಪಾಲಾಗದೆ ಬಡ ಮತ್ತು ಸಣ್ಣ ರೈತರ ಪಾಲಿಗೆ ವರವಾಗಬೇಕು ; ಮಧು ಬಂಗಾರಪ್ಪ

0 316

ಹೊಸನಗರ : ಎಲ್ಲ ವರ್ಗದ ರೈತರು ಸಹಕಾರ ಸಂಘಗಳ ಜೊತೆ ಕೈಜೋಡಿಸಬೇಕು, ಸಹಕಾರಿ ಕ್ಷೇತ್ರ ರೈತರ ಪಾಲಿಗೆ ಶಕ್ತಿಯಾಗಿದೆ. ಸಹಕಾರ ಕ್ಷೇತ್ರಗಳು ಕೇವಲ ಉಳ್ಳವರ ಪಾಲಾಗದೆ ಬಡ ಮತ್ತು ಸಣ್ಣ ರೈತರ ಪಾಲಿಗೆ ವರವಾಗಬೇಕು ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಯಡೂರು ಗ್ರಾಮದಲ್ಲಿ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ನೆರವಾಗುವ ಸಲುವಾಗಿ ಸರ್ಕಾರ ಶೂನ್ಯ ಬಡ್ಡಿದರದ ಸಾಲವನ್ನು 5 ಲಕ್ಷ ರೂ.ಗೆ ಏರಿಸಲಿದೆ. ಮಧ್ಯಮ ವರ್ಗದ ಸಾಲಮನ್ನಾ ಕುರಿತಂತೆ ಸಿಎಂ ಉತ್ಸುಕರಾಗಿದ್ದಾರೆ ಎಂದ ಅವರು, ಸಹಕಾರಿ ಸಂಸ್ಥೆಗಳು ಠೇವಣಿ ಸಂಗ್ರಹದ ಬಗ್ಗೆ ಗಮನಹರಿಸಬೇಕು. ಆ ಮೂಲಕ ರೈತರಿಗೆ ಸಿಗಬೇಕಾದ ವಿವಿಧ ಸವಲತ್ತು ನೀಡಲು ಮುಂದಾಗಬೇಕು. ಬಡ್ಡಿರಹಿತ ಸಾಲ ನೀಡುವ ಕಾರಣ ಅದರ ಹೊರೆ ಸರ್ಕಾರಕ್ಕೆ ಬರುತ್ತದೆ. ಇದಕ್ಕೆ ಪೂರಕವಾಗಿ ಸಹಕಾರ ಸಂಸ್ಥೆಗಳು ಸರ್ಕಾರದ ಬೆನ್ನಿಗೆ ನಿಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಕರೆತರಬೇಕು, ಶಿಕ್ಷಣ ಅರಸಿ ಬರುವ ಮಕ್ಕಳ ಕೈಗೆ ಪೆನ್ನು, ಪೆನ್ಸಿಲ್ ನೀಡಬೇಕು. ಅದು ಬಿಟ್ಟು ಕಸಪೊರಕೆ ನೀಡಿದರೆ, ಅಂತವರ ವಿರೂಬದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಪ್ರತಿ ಎರಡು ಗ್ರಾಪಂಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶ ಇರಲಿ, ನಗರ ಪ್ರದೇಶವಿರಲಿ ಶಿಕ್ಷಣದ ಸಕಲ ಸವಲತ್ತು ನೀಡಬೇಕು. ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಂಕಷ್ಟದಲ್ಲಿದ್ದ ಹಲವಷ್ಟು ಸಹಕಾರ ಸಂಸ್ಥೆಗಳಿಗೆ ಆರ್ಥಿಕವಾಗಿ ಬಲ ತುಂಬುವ ಮೂಲಕ ಪುನಶ್ವೇತನಗೊಳಿಸಲಾಗಿದೆ. ನಗರ, ಸೊನಲೆ, ಮೇಗರವಳ್ಳಿ, ಯಡೂರು ಸೇರಿದಂತೆ ನಷ್ಟದಲ್ಲಿದ್ದ ಸಾಕಷ್ಟು ಸಹಕಾರ ಸಂಘಗಳು ಇಂದು ಉತ್ತಮ ವ್ಯವಹಾರ ದಾಖಲಿಸಿದೆ. ರೈತರು ಬೇರೆಡೆ ಸಾಲಕ್ಕಾಗಿ ಕೈ ಚಾಚದೆ ಸಹಕಾರ ಸಂಸ್ಥೆಗಳ ಜತೆ ನಿಲ್ಲಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಯಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಾಂಕ ಕೊಳವಾಡಿ ಮಾತನಾಡಿ, ನಮ್ಮ ಬ್ಯಾಂಕ್ ಹಿಂದೆ ಸಂಕಷ್ಟದಲ್ಲಿತ್ತು. ಆದರೆ ಡಿಸಿಸಿ ಬ್ಯಾಂಕ್ ಮತ್ತು ಅಂದಿನ ಸಹಕಾರ ಸಚಿವ ಮಹದೇವ ಪ್ರಸಾದ್ ರವರ ಸಹಕಾರದಿಂದ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಸೇರಿದಂತೆ ಸಹಕಾರಿ ಕ್ಷೇತ್ರದ ಮಾಜಿ ನಿರ್ದೇಶರು ಹಾಗೂ ಹಾಲಿ ನಿದೇರ್ಶಕರನ್ನು ಗೌರವಿಸಿ ಸನ್ಮಾನಿಸಿದರು.

ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಸುಳುಗೋಡು ಗ್ರಾಪಂ ಅಧ್ಯಕ್ಷೆ ಶೃತಿ ಶೇಷಾದ್ರಿ, ಯಡೂರು ಗ್ರಾಪಂ ಅಧ್ಯಕ್ಷ ಡಿ.ಜಯ ಪ್ರಕಾಶ್, ಖೈರಗುಂದ ಗ್ರಾಪಂ ಅಧ್ಯಕ್ಷ ಕೆ.ಬಿ.ಕೃಷ್ಣಮೂರ್ತಿ, ಸಂಘದ ಉಪಾಧ್ಯಕ್ಷ ನಾಗೇಶ ಗೌಡ, ನಿರ್ದೇಶಕರಾದ ಮಂಜುನಾಥ ಹೊಸಗದ್ದೆ, ಟೀಕಪ್ಪಗೌಡ ಹುಮ್ಮಡಗಲ್ಲು, ಪುರುಷೋತ್ತಮ ಜಗನಕೊಪ್ಪ, ರಮೇಶ ಅಚ್ಚುಮನೆ, ಪ್ರಶಾಂತ ಹಂದಿಗೆಮನೆ, ವಿನೋದ ರಾಜಶೇಖರ ಗಿಣಿಕಲ್ಲು, ಪ್ರೇಮಾ, ಸರಸ್ವತಿ ರತ್ನಾಕರ್, ಯಶೋಧ ಚಂದ್ರಶೇಖರ್, ಮಹೇಶ ಮಾಗಲು, ಯಡೂರು ಮಹಮ್ಮದ್ ಷರೀಫ್, ಡಿಸಿಸಿ ಬ್ಯಾಂಕ್‌ನ ಶಿವಕುಮಾರ್ ಶೋಭ ಮಂಜುನಾಥ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ರಾಘವೇಂದ್ರ ಶೆಟ್ಟಿ, ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್ ಸೇರಿದಂತೆ ಇತರರಿದ್ದರು.

Leave A Reply

Your email address will not be published.

error: Content is protected !!