19 ತಿಂಗಳಿಂದ 35 ಕೆ.ಜಿ ಬದಲು ಕೇವಲ 10 ಕೆ.ಜಿ ಅಕ್ಕಿ ವಿತರಣೆ ! ಬಡ ದಲಿತ ಮಹಿಳೆಗೆ ಅಂತ್ಯೋದಯ ಅಕ್ಕಿ ಮೋಸ ಮಾಡಿದ ನ್ಯಾಯಬೆಲೆ ಅಂಗಡಿ ಮಾಲೀಕ, ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಸಾಮಾಜಿಕ ಹೋರಾಟಗಾರ

0 1,064

ರಿಪ್ಪನ್‌ಪೇಟೆ : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದೇಶದ ಬಡವರು ಹಸಿವಿನಿಂದ ಇರಬಾರದು ಎನ್ನುವ ಸಂಕಲ್ಪದಿಂದ ಉಚಿತವಾಗಿ ಅಕ್ಕಿಯನ್ನು ವಿತರಿಸುತ್ತಿದ್ದು ಆ ಯೋಜನೆ ಯಶಸ್ವಿಯೂ ಆಗಿದೆ.

ನಮ್ಮಲ್ಲಿ ಒಂದು ಗಾದೆ ಮಾತಿದೆ “ದೇವರು ಕೊಟ್ಟರೂ ಪೂಜಾರಿ ಕೊಡಲ್ಲ” ಎಂದು ಆ ಮಾತಿಗೆ ಪೂರಕವೆಂಬಂತೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಾಳೂರು ನ್ಯಾಯಬೆಲೆ ಅಂಗಡಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತಿದೆ.

ಹೌದು, ಬುಧವಾರ ಮಧ್ಯಾಹ್ನ ಜಾಜಮ್ಮ ಕೋಂ ಭರ್ಮಣ್ಣ ಎಂಬ ಮಹಿಳೆ ರಿಪ್ಪನ್‌ಪೇಟೆಯ ಸಾಮಾಜಿಕ ಹೋರಾಟಗಾರ ರಫಿ ರಿಪ್ಪನ್‌ಪೇಟೆಯವರನ್ನು ಭೇಟಿಯಾಗಿ, ನನಗೆ ಹಲವಾರು ತಿಂಗಳಿನಿಂದ ಅಕ್ಕಿಯ ಹಣ ಬರುತ್ತಿಲ್ಲ ಕೇಳಿದರೇ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ ನನಗೆ ನ್ಯಾಯ ದೊರಕಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಅವರ ರೇಷನ್ ಕಾರ್ಡ್ ಅನ್ನು ಪಡೆದು ಪರಿಶೀಲಿಸಿದಾಗ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದೆ.

ದಲಿತ ಬಡ ಮಹಿಳೆಯಾದ ಜಾಜಮ್ಮ ನವರಿಗೆ ಸರ್ಕಾರ ಅಂತ್ಯೋದಯ ಕಾರ್ಡ್ ನೀಡಿ ಹಲವು ವರ್ಷಗಳಾಗಿದ್ದರೂ ಇಂದಿಗೂ ಬಿಪಿಎಲ್ ಕಾರ್ಡ್ ಎಂದು ಪ್ರತಿ ತಿಂಗಳು ಸುಮಾರು 25 ಕೆ.ಜಿ ಯಷ್ಟು ಅಕ್ಕಿ ಮೋಸವಾಗುತ್ತಿರುವುದು ಕಂಡುಬಂದಿದೆ. ಕೂಡಲೇ ಮಹಿಳೆಯೊಂದಿಗೆ ನ್ಯಾಯಬೆಲೆ ಅಂಗಡಿ ಹೋದ ರಫಿ ಈ ತಿಂಗಳ ರೇಷನ್ ಪಡೆಯುವಂತೆ ತಿಳಿಸಿ ಆಟೋದಲ್ಲಿ ಕಳಿಸಿಕೊಟ್ಟು ಅವರ ಹಿಂದೆಯೇ ರಫಿ ಸಹಾ ಹೋಗಿದ್ದಾರೆ. ಆ ನ್ಯಾಯಬೆಲೆ ಅಂಗಡಿಯ ಬ್ರಹ್ಮಾಂಡ ಭ್ರಷ್ಟಾಚಾರ ಹೊರಬೀಳಲೇಬೇಕೆಂದು ದೇವರ ಇಚ್ಚೇ ಇದ್ದಂತೆ ಈ ತಿಂಗಳು ಕೇವಲ 10 ಕೆ.ಜಿ‌ ಅಕ್ಕಿ ವಿತರಿಸಿದ್ದಾರೆ. ಕೂಡಲೇ ಕ್ಯಾಮೆರಾದೊಂದಿಗೆ ಅಂಗಡಿಗೆ ಹೋಗಿ ತೂಕ ಪರೀಕ್ಷಿಸಿ ಅವರಲ್ಲಿ ಯಾಕೆ ಹೀಗೆ ಬಡವರಿಗೆ ಅನ್ಯಾಯ ಮಾಡುತ್ತೀರಾ ಎಂದು ವಿಚಾರಿಸಿದರೆ “ಮಿಸ್” ಆಯ್ತು ಎಂಬ ಉತ್ತರ ಬಂದಿದೆ. ಯಾರದೋ ಜೊತೆ ಫೋನ್ ನಲ್ಲಿ ಮಾತನಾಡುವಂತೆ ಕೂಡ ಒತ್ತಡ ಹೆಚ್ಚಾಗಿದೆ.

ಈ ಕಾರ್ಯಾಚರಣೆ ನಡೆದು ಕೇವಲ ನಾಲ್ಕೈದು ನಿಮಿಷಗಳಲ್ಲಿ ಹಲವಾರು ಪ್ರಭಾವಿಗಳು ಹಾಗೂ ಬಲಾಡ್ಯರಿಂದ ಕರೆ ಬರಲು ಪ್ರಾರಂಭವಾಗಿದೆ. ಬನ್ನಿ “ಕುಳಿತು ಮಾತಾಡೋಣ” , ನಿಮ್ಮನ್ನು ನೋಡಿಕೊಳ್ಳುತ್ತೇವೆ ಹಾಗೇ ಹೀಗೆ… ಇಷ್ಟು ಬೇಗ ನ್ಯಾಯಬೆಲೆ ಅಂಗಡಿ ಮಾಲೀಕ ಡೀಲ್ ಗೆ ಬಂದಿದ್ದಾನೆ ಎಂದಾದರೇ ಅವರ ಭ್ರಷ್ಟಾಚಾರದ ಬಾಹುಳ್ಯ ಎಷ್ಟು ದೊಡ್ಡದಿರಬಹುದು ನೀವೇ ಯೋಚಿಸಿ.

ಕೂಡಲೇ ಹೊಸನಗರ ತಾಲೂಕು ಆಹಾರ ನಿರೀಕ್ಷಕ ನಾಗರಾಜ್, ಶಿವಮೊಗ್ಗ ಆಹಾರ ಇಲಾಖೆಯ ಡಿ ಡಿ ಮುನಿಯಪ್ಪ, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ರವರಿಗೆ ರಫಿ ಮಾಹಿತಿ ತಿಳಿಸಿದ್ದಾರೆ. ಪಿಎಸ್‌ಐ ಪ್ರವೀಣ್ ಪ್ರವೀಣ್ ಕಾರ್ಯನಿಮಿತ್ತ ಹೊರಗಿದ್ದ ಕಾರಣ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್ ಹಾಗೂ ಉಮೇಶ್ ರವರನ್ನು ಸ್ಥಳಕ್ಕೆ ಕಳಿಸಿಕೊಟ್ಟಿದ್ದಾರೆ. ಆಹಾರ ನಿರೀಕ್ಷಕ ನಾಗರಾಜ್ ಮೊದಮೊದಲು ಹೊರಗಿದ್ದೇನೆ ನಾಳೆ ಬರುತ್ತೇನೆ ಅಂದರೂ ನಂತರ ಜಿಲ್ಲಾಧಿಕಾರಿಗಳ ಕರೆ ಬಂದ ನಂತರ ಓಡೋಡಿ ಬಂದಿದ್ದಾರೆ.

ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಅಂಗಡಿಯ ಮಾಲೀಕನಿಗೆ ಯಾಕೆ ಬಡ ದಲಿತ ಮಹಿಳೆಗೆ ಅನ್ಯಾಯ ಮಾಡುತಿದ್ದೀರಿ ? ಎಂದು ರಫಿ ಪ್ರಶ್ನಿಸಿದರೆ ಅವರ ಉತ್ತರ ಇಲ್ಲಾ “ಮಿಸ್” ಆಯ್ತು ಎಂದು. ಒಂದು, ಎರಡು ತಿಂಗಳು ಮಿಸ್ ಆಗಬಹುದು ಆದರೆ ಆ ಮಹಿಳೆಗೆ ಬರೋಬ್ಬರಿ ಕಳೆದ 19 ತಿಂಗಳಿನಿಂದ 35 ಕೆ.ಜಿ ಕೊಡುವ ಬದಲು 10 ಕೆ.ಜಿ ಕೊಡುತ್ತಾ ಬಂದಿದ್ದಾರೆ.

ಕೊನೆಯಲ್ಲಿ ನಾನು ಮೋಸ ಮಾಡಿದ್ದೇನೆ ಎಂದು ಒಪ್ಪಿಕೊಂಡ ನ್ಯಾಯಬೆಲೆ ಅಂಗಡಿಯ ಮಾಲೀಕ ಬಡ ದಲಿತ ಮಹಿಳೆಗೆ 19 ತಿಂಗಳಿನಲ್ಲಿ ಮೋಸ ಮಾಡಿದ 4.75 ಕ್ವಿಂಟಾಲ್ ಅಕ್ಕಿ ಕೊಟ್ಟಿದ್ದಾನೆ. ಹಾಗೇ ಇನ್ನುಳಿದ 137 ಅಂತ್ಯೋದಯ ಕಾರ್ಡ್ ಸಂಪೂರ್ಣ ಮಾಹಿತಿ ಇಲಾಖೆಗೆ ಸಲ್ಲಿಸುವುದಾಗಿಯೂ ತಿಳಿಸಿದ್ದಾನೆ.

ಮಾಲೀಕನ ಮೇಲೆ ಕ್ರಮ …?
ಇಂತಹ ಬ್ರಹ್ಮಾಂಡ ಭ್ರಷ್ಟಾಚಾರ ಕಣ್ಣಾರೆ ನೋಡಿದ ತಾಲೂಕು ಆಹಾರ ನಿರೀಕ್ಷಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಆ ಅಂಗಡಿಯ ಮೇಲೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಅಂತ್ಯೋದಯ ಕಾರ್ಡ್ ಇರುವವರಿಗೆ ಎಷ್ಟೆಷ್ಟು ಅಕ್ಕಿ ವಿತರಿಸುತ್ತಿದ್ದಾರೆ ಒಮ್ಮೆ ಸಾರ್ವಜನಿಕರೇ ಖುದ್ದು ಪರಿಶೀಲಿಸಿಕೊಳ್ಳಬೇಕಾಗಿದೆ.

Leave A Reply

Your email address will not be published.

error: Content is protected !!