ಪರಿಶಿಷ್ಟ ಪಂಗಡದ ಕುಟುಂಬಕ್ಕೆ ಹಕ್ಕುಪತ್ರ ವಿತರಿಸಲು ಮನವಿ

0 150

ಚಿಕ್ಕಮಗಳೂರು : ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಮೂಲನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಸಾಗರ ಬಣ) ನೇತೃತ್ವದಲ್ಲಿ ಗ್ರಾಮಸ್ಥರು ಶಿರಸ್ತೇದಾರ್ ಹೇಮಂತ್‌ಕುಮಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ಕಳಸ ತಾಲ್ಲೂಕಿನ ತೋಟ ದೂರು ಗ್ರಾ.ಪಂ. ವ್ಯಾಪ್ತಿಯ ತನುಡಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ 20ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿಗೆ ಹಕ್ಕು ಪತ್ರ ವಿತರಿಸದೇ ಸತಾಯಿಸಲಾಗುತ್ತಿದೆ ಎಂದು ದೂರಿದರು.

ಪ್ರಸ್ತುತ ತನುಡಿ ಗ್ರಾಮದ ಸರ್ವೆ ನಂ.36 ರಲ್ಲಿ 150ಕ್ಕೂ ಕುಟುಂಬಗಳಿವೆ. ಈ ಪೈಕಿ ಅರಣ್ಯ ಇಲಾಖೆ 130 ಕುಟುಂಬಕ್ಕೆ ಮಾತ್ರ ಹಕ್ಕುಪತ್ರ ವಿತರಿಸಿದ್ದು ಇನ್ನುಳಿದ 20 ಪರಿಶಿಷ್ಟ ಪಂಗಡದ ಕುಟುಂಬಗಳು 94ಸಿ ಯಲ್ಲಿ ಅರ್ಜಿ ಸಲ್ಲಿಸಿದ್ದರೂ ಸಹ ಇದುವರೆಗೂ ಹಕ್ಕುಪತ್ರ ನೀಡಿರುವುದಿಲ್ಲ ಎಂದು ತಿಳಿಸಿದರು.

ಹೀಗಾಗಿ ಜಿಲ್ಲಾಡಳಿತ ಕೂಡಲೇ ಪರಿಶೀಲನೆ ನಡೆಸಿ ತನುಡಿ ಗ್ರಾಮದ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಕಳಸ ತಾಲ್ಲೂಕು ಸಂಚಾಲಕ ವಸಂತ್, ಗ್ರಾಮಸ್ಥರಾದ ಪ್ರಭಾಕರ್, ಸೀನಾ, ಲಕ್ಷ್ಮಣ್ ಹಾಜರಿದ್ದರು.

Leave A Reply

Your email address will not be published.

error: Content is protected !!