ಬ್ರಾಹ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದಾಂಬೆ

0 193

ಶೃಂಗೇರಿ: ಇಲ್ಲಿಯ ಶಾರದಾ ಮಠದಲ್ಲಿ ಶಾರದಾ ದೇವಿಗೆ ಭಾನುವಾರ ಹಂಸವಾಹನ (ಬ್ರಾಹ್ಮೀ) ಅಲಂಕಾರ ಮಾಡಲಾಗಿತ್ತು.

ಶಾರದ ಮಠದಲ್ಲಿ ಶ್ರೀಸೂಕ್ತಜಪ, ಭುವನೇಶ್ವರಿ ಜಪ, ದುರ್ಗಾ ಜಪಗಳ ಬಳಿಕ ಶ್ರೀ ಚಕ್ರಕ್ಕೆ ನವಾಹರಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಕುಮಾರೀ ಪೂಜೆ, ಸುವಾಸಿನೀ ಪೂಜೆ, ಭಕ್ತಾದಿಗಳಿಂದ ವಿಶೇಷ ಪೂಜೆ ನೆರವೇರಿತು.

ಶಾರದಾ ಮಠದಲ್ಲಿ ಸಂಜೆ 6ಗಂಟೆಗೆ ನಡೆದ ಬೀದಿ ಉತ್ಸವದಲ್ಲಿ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದರು. ಎನ್.ಆರ್ ಪುರ, ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ, ಯುವವಿಪ್ರ ವೇದಿಕೆ, ಕಾವಡಿ ಅಗ್ರಹಾರದ ಉಮಾಮಹೇಶ್ವರ ಸೇವಾ ಸಮಿತಿ, ಹೆಗ್ಗದ್ದೆ ಅನಂತಪದ್ಮನಾಭ ಸೇವಾ ಸಮಿತಿ, ನೇತ್ರವಳ್ಳಿ ದುರ್ಗಾಪರಮೇಶ್ವರಿ ಭಕ್ತ ಮಂಡಳಿ, ಉಳುವೇಬೈಲು ಜೈಶಂಕರ್ ಯುವಕ ಸಂಘ, ಅಡ್ಡಗದ್ದೆ ವಿನಾಯಕ ಯುವಕ ಸಂಘ, ಕೆಳಕೊಪ್ಪ ವಿನಾಯಕ ಸೇವಾ ಸಮಿತಿ, ಕೊಪ್ಪ ಶ್ರೀನಿಕೇತನ ಭಜನಾ ಮಂಡಳಿ, ಹಿಂದೂ ಜಾಗರಣ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಗಳ ಒಕ್ಕೂಟ, ಪ್ರಕೃತಿ ರೈತ ಮಿತ್ರಕೂಟಗಳು ಬೀದಿ ಉತ್ಸವದಲ್ಲಿ ಪಾಲ್ಗೊಂಡರು.

ಶಾರದಾ ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಮಾಧುರಿ ಸೀತಾರಾಮನ್, ವೈಷ್ಣವಿ ಸೀತಾರಾಮನ್ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು.

ಶಾರದಾ ಮಠದ ಕಿರಿಯ ಸ್ವಾಮೀಜಿಗಳಾದ ವಿಧುಶೇಖರಭಾರತೀ ಸ್ವಾಮೀಜಿ ಅವರು ವಜ್ರದ ಕಿರೀಟ, ಚಿನ್ನದ ಆಭರಣಗಳನ್ನು ಧರಿಸಿ ಸಿಂಹಾಸನದಲ್ಲಿ ಕುಳಿತು ದರ್ಬಾರ್ ನಡೆಸಿದರು. ಸಿಂಹಾಸನದಲ್ಲಿ ಇರುವ ಶಾರದೆಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಇಡಲಾಯಿತು. ವೇದ, ವಾದ್ಯ ಘೋಷಗಳೊಂದಿಗೆ ಶಾರದಾ ದೇವಸ್ಥಾನದ ಒಳಪ್ರಾಂಗಣದಲ್ಲಿ  ಮೂರು ಸುತ್ತು ಉತ್ಸವ ನೆರವೇರಿತು.

ಸಪ್ತಶತಿ ಪಾರಾಯಣದ ಅಧ್ಯಯನ, ಅಮ್ಮನವರಿಗೆ ಮಂಗಳಾರತಿ, ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ದರ್ಬಾರು ಮುಕ್ತಾಯಗೊಂಡಿತು

Leave A Reply

Your email address will not be published.

error: Content is protected !!