ಕುಡಿಯುವ ನೀರಿನ ಸಮಸ್ಯೆ ಮೊದಲು ಸರಿಪಡಿಸಿ

0 229

ಶಿಕಾರಿಪುರ : ಪಟ್ಟಣದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಅದರಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಪೂರೈಕೆ ಮತ್ತು ಯುಜಿಡಿ (ಒಳ ಚರಂಡಿ) ಸಮಸ್ಯೆಗಳಿಂದ ನೊಂದಿದ್ದಾರೆ ಇದನ್ನು ಮೊದಲು ಸರಿಪಡಿಸಬೇಕು ಎಂದು ಪುರಸಭಾ ಸದಸ್ಯ ಹಾಗೂ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಹೇಳಿದರು.

ಪುರಸಭೆ ಸಭಾಂಗಣದಲ್ಲಿ ಸೋಮವಾರ ಸಾಗರ ಉಪವಿಭಾಗಾಧಿಕಾರಿ ಯತೀಶ್ ಅಧ್ಯಕ್ಷತೆಯಲ್ಲಿ ನಡೆದ ಆಯ-ವ್ಯಯದ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಭರತ್ ರವರು ಸಭೆಗೆ ಕಳೆದ ವರ್ಷದ ಡಿಸೆಂಬರ್ ಅಂತ್ಯದವರೆಗೂ ಕುಡಿಯುವ ನೀರು ಸರಬರಾಜಿಗಾಗಿ 46,15,172 ರೂಪಾಯಿ ಖರ್ಚಾಗಿದೆ ಎಂದು ಹೇಳಿದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಇದರ ನಿರ್ವಹಣೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಒದಗಿಸಬೇಕು ಎಂದ ಅವರು, ಕಳೆದ ಬಾರಿ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಸೇರಿ ಪಟ್ಟಣದ ಹಲವು ಸಮಸ್ಯೆಗಳ ಕುರಿತು ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆ ಸಮಸ್ಯೆಗಳು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗದೇ ಬರಗಾಲದ ಛಾಯೆಯುಂಟಾಗಿದೆ. ಅಂಜನಾಪುರ ಜಲಾಶಯದಲ್ಲಿ ಹೇರಳವಾಗಿ ನೀರು ಸಂಗ್ರಹವಾಗಿದೆ ಹೀಗಿರುವಾಗ ಬೇಸಿಗೆ ಕಾಲ ಆರಂಭವಾಗುತ್ತಿದಂತೆಯೇ ಒಂದು ವಾರದಲ್ಲಿ 3 ಬಾರಿ ವಿದ್ಯುತ್ ಸಮಸ್ಯೆ ಇದ್ದು ವಾರದಲ್ಲಿ ಮೂರೇ ದಿನ ನೀರು ಬಿಟ್ಟಿದ್ದೀರಿ, ಈಗಾಗಲೇ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯುಂಟಾಗಿದ್ದು, ಇನ್ನು 3-4 ತಿಂಗಳು ಕಾಲ ಪುರಸಭೆಯಿಂದ ಸಾರ್ವಜನಿಕರಿಗೆ ನೀರು ಹೇಗೆ ಒದಗಿಸಲಾಗುತ್ತದೆ. ಅಲ್ಲದೇ ಅನೇಕ ಕಡೆ ಯುಜಿಡಿ ಕಾಮಗಾರಿ ಪೂರ್ಣಗೊಂಡಿಲ್ಲ ಆದರೂ ಒಳಚರಂಡಿಯ ಬಳಕೆಗೆ ಹಲವು ಬೀದಿಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಜನತೆ ಪುರಸಭೆ ಮುಖ್ಯ ಅಧಿಕಾರಿಗಳ ಮೇಲೆ ಹಾಗೂ ಚುನಾಯಿತ ಪ್ರತಿನಿಧಿಗಳ ಮೇಲೆ ಕೋಪಗೊಂಡಿದ್ದಾರೆ. ಈ ಬಗ್ಗೆ ಮುಖ್ಯಾಧಿಕಾರಿಗಳು ಸಭೆಗೆ ಸ್ಪಷ್ಟನೆ ಕೊಡಬೇಕು ಎಂದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಭರತ್ ವಿದ್ಯುತ್ತಿನ ಸಮಸ್ಯೆಯಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು ಈ ಬಗ್ಗೆ ಕೆಇಬಿ ಅದಿಕಾರಿಗಳ ಗಮನಕ್ಕೆ ತರಲಾಗಿದೆ. ಯುಜಿಡಿ ಬಗ್ಗೆ ಹೇಳುವುದಾದರೆ ನಾವು ಇನ್ನು ಎಲ್ಲಿಯೂ ಸಂಪರ್ಕ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಉಳ್ಳಿ ದರ್ಶನ್ ಮಾತನಾಡಿ, ಮುಖ್ಯಾಧಿಕಾರಿಗಳಿಗೆ ಹಲವು ದಿನಗಳ ಹಿಂದೆ ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಇದನ್ನು ಸರಿಪಡಿಸಿ ನಂತರ ಪಟ್ಟಣದ ಮನೆಗಳಿಂದ ಸಂಪರ್ಕ ಕಲ್ಪಿಸಬೇಕು ಎಂದು ಸಲಹೆ ನೀಡಿದರೂ ಉದ್ದೇಶ ಪೂರಕವಾಗಿ ಪುರಸಭೆಯಿಂದ ಯುಜಿಡಿಗೆ ಸಂಪರ್ಕ ಕಲ್ಪಿಸಲಾಗಿದೆ ಇದರಿಂದಾಗಿ ಯುಜಿಡಿಯಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುವುದಲ್ಲದೇ ಮನೆಯೊಳಗೆ ನುಗ್ಗುತ್ತಿದೆ ಎಂದು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ವಿಡಿಯೋವನ್ನು ಸಭೆಗೆ ತೋರಿಸಿದರು.

ನಂತರ ಉಪವಿಭಾಗಾದಿಕಾರಿ ಯತೀಶ್ ರವರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಖ್ಯಾಧಿಕಾರಿಯವರಿಂದ ಮಾಹಿತಿ ಪಡೆದು, ಕೆಇಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಾರದಲ್ಲಿ ಒಂದು ದಿನ ಎಲ್ ಸಿ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಯುಜಿಡಿ ಕಾಮಗಾರಿಯು ಸರ್ಕಾರದ ಅಧೀನದಲ್ಲಿ ಬರುವುದರಿಂದ ಇದನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದರು.

ಆಯ-ವ್ಯಯದ ಬಗ್ಗೆ ಚರ್ಚಿಸಲು ಗಮನ ಸೆಳೆದಾಗ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಮಂಜುನಾಥ ಮಾತನಾಡಿ, ಪಟ್ಟಣದಲ್ಲಿ ಸಿಸಿ ಕ್ಯಾಮೆರಾವಿಲ್ಲದೆ ಅನೇಕ ಅಹಿತಕರ ಘಟನೆಗಳು ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಒಂದೆಡೆಯಾದರೆ, ದೊಡ್ಡಪೇಟೆಯಲ್ಲಿರುವ ಶ್ರೀ ವಿಠಲ ರುಕುಮಾಯಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಆದಕಾರಣ ಸಿಸಿ ಟಿವಿ ಅಳವಡಿಕೆಗೆ ಹಣವಿಡಬೇಕು ಎಂದು ಒತ್ತಾಯಿಸಿದರು.

ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ನಡೆದಿದ್ದ ಸರ್ವ ಸದಸ್ಯರ ಸಭೆಯ ನಂತರ ಈ ಆಯ-ವ್ಯಯದ ಸಭೆಯನ್ನು ಕರೆಯಲಾಗಿದ್ದು ಆಯವ್ಯಯ ವಿಷಯದ ಬಗ್ಗೆ ಚರ್ಚೆ ನಡೆಸಬೇಕಿದ್ದ ಪುರಸಭಾ ಸದಸ್ಯರು, ಕುಡಿಯುವ ನೀರು, ಒಳಚರಂಡಿ, ರಸ್ತೆ, ಇ ಸ್ವತ್ತು, ವಿವಿಧ ದಾಖಲೆಗಳಿಗಾಗಿ ಜನತೆಯ ಅಲೆದಾಟ ಹೀಗೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆಯೇ ಚರ್ಚೆ ನಡೆದಿದ್ದು ವಿಶೇಷವೆನಿಸಿತು. ಪುರಸಭಾ ಮುಖ್ಯಾಧಿಕಾರಿಗಳ ಬೇಜವಾಬ್ದಾರಿ ಆಡಳಿತ, ಆಡಳಿತ ಮಂಡಳಿಯ ದುರಾಡಳಿತದ ಬಗ್ಗೆ ಅಸಮಾದಾನಗೊಂಡಿದ್ದ ಎಲ್ಲಾ ಸದಸ್ಯರು ಸಭೆಯಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ ರೀತಿಯಲ್ಲಿ ಸಭೆ ಅಂತ್ಯಗೊಂಡಿತು.

ಈ ಸಭೆಯಲ್ಲಿ ಪುರಸಭಾ ಸದಸ್ಯರಾದ ಗೋಣಿ ಪ್ರಕಾಶ್, ರೋಶನ್, ಶಕುಂತಲಮ್ಮ, ಸೌಭಾಗ್ಯಮ್ಮ, ಜಯಶ್ರೀ, ರೇಣುಕ ಸ್ವಾಮಿ, ರಮೇಶ (ಗುಂಡ), ರೂಪಕಲಾ ಹೆಗಡೆ, ರೇಖಾಬಾಯಿ, ಪ್ರಶಾಚಿತ್ ಸೇರಿದಂತೆ ಅನೇಕ ಸಾರ್ವಜನಿಕರು ಪುರಸಭಾ ಆಡಳಿತ ಸಿಬಂದಿ ಹಾಜರಿದ್ದರು.

Leave A Reply

Your email address will not be published.

error: Content is protected !!