ರೈತರ ಬದುಕು ಹಸನಾಗಬೇಕಾದರೆ ದೇವರ ಕೃಪೆ ಇರಬೇಕು ; ಕೃಷಿಕ ರತ್ನಾಕರ್

0 1,086

ಹೊಸನಗರ: ರೈತರ ಬದುಕು ಹಸನಾಗಿರಬೇಕಾದರೆ ದೇವರ ಕೃಪೆ ರೈತರ ಮೇಲಿರಬೇಕು ಎಂದು ಹೊಸನಗರ ಕೃಷಿಕ ರತ್ನಾಕರ್‌ರವರು ಹೇಳಿದರು.

ಪಟ್ಟಣಕ್ಕೆ ಸಮೀಪವಿರುವ ಎ.ಪಿ.ಎಂ.ಸಿ ಹಿಂಭಾಗದಲ್ಲಿರುವ ತಮ್ಮ ಅಡಿಕೆ ತೋಟ, ಗದ್ದೆಯ ಆವರಣದಲ್ಲಿ ಅದ್ದೂರಿಯಾಗಿ ಭೂಮಿ ಹುಣ್ಣಿಮೆ ಹಬ್ಬ ಆಚರಿಸಿ ಮಾತನಾಡಿ, ಯಾವುದೇ ಭೂಮಿಯಲ್ಲಿ ಬೆಳೆ ಬೆಳೆಯಬೇಕಾದರೇ ನೀರು, ಮಣ್ಣು, ಗಾಳಿ ಹಾಗೂ ಬಿಸಿಲು ಬೆಳೆಯುವ ಪೈರುಗಳಿಗೆ ಅನುಕೂಲಕರ ವಾತಾವರಣದ ಜೊತೆಗೆ ದೇವರ ಕೃಪೆ ರೈತರ ಪರವಾಗಿದ್ದರೆ ಮಾತ್ರ ರೈತ ಬೆಳೆ ಬೆಳೆಯಬಹುದು, ತಮ್ಮ ಸಂಸಾರ ನಡೆಸಬಹುದು, ನಾಡಿಗೆ ಅನ್ನ ನೀಡಬಹುದು. ದೇಶ ಕಾಯುವ ಸೈನಿಕ ಎಷ್ಟು ಮುಖ್ಯವೋ ನಮ್ಮಂತ ರೈತರು ಈ ದೇಶಕ್ಕೆ ಅಷ್ಟೇ ಮುಖ್ಯ ಎಂದರು.


ಭೂಮಿ ಹುಣ್ಣಿಯ ಹಬ್ಬದ ಸಂಭ್ರಮದಲ್ಲಿರುವ ರತ್ನಾಕರ್‌ರವರ ಮನೆಯಲ್ಲಿ ಹಬ್ಬದ ಹಿಂದಿನ ದಿನ ಜಮೀನನ್ನು ಸ್ವಚ್ಛ ಮಾಡಿ ಬಾಳೆಗಿಡದಿಂದ ಮಂಟಪವನ್ನು ನಿರ್ಮಿಸಿ ಮಣ್ಣಿನಲ್ಲಿ ಭೂತಾಯಿಯ ಮುಖವನ್ನು ತಯಾರಿಸಲಾಗಿದ್ದು ವರ್ಷವಿಡಿ ಭೂಮಿಯಲ್ಲಿ ಉತ್ತಿ ಬಿತ್ತಿ ಬೆಳೆದಿರುವ ಹೊಲ ಗದ್ದೆಗಳಲ್ಲಿ ಬಿತ್ತಿನ ಬೆಳೆಗಳು ತೆನೆ ಕಾಳುಗಟ್ಟಿಯಾಗುವ ಹಂತದಲ್ಲಿದ್ದು ಅವುಗಳಿಗೆ ಮಾಡಿದ ಹಬ್ಬದ ಅಡಿಗೆಯನ್ನು ಬಡಿಸಿದರು.


ಇವರ ತೋಟದಲ್ಲಿ ಅಡಿಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಫಸಲುಗಳು ಚೆನ್ನಾಗಿ ಬಂದಿದ್ದು ಈ ಸಂದರ್ಭದಲ್ಲಿ ಭೂತಾಯಿಯ ಗರ್ಭಿಣಿ ಎಂಬ ನಂಬಿಕೆಯ ವರ್ಗ ಪುರಾತನ ಕಾಲದಲ್ಲಿಯು ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು ಈ ಹಬ್ಬದ ಸಂದರ್ಭದಲ್ಲಿ ವಿವಿಧ ಬಗೆಯ ಅಡುಗೆಯನ್ನು ಮಾಡಿ ಭೂಮಿಗೆ ಬಡಿಸಿದ ನಂತರ ಬಂದ ಜನರಿಗೆ ಉಣಬಡಿಸಿ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ಹಿಂದಿನವರು ಹಾಕಿಕೊಟ್ಟ ದಾರಿಯನ್ನು ಮರೆತರೆ ಭೂಮಿತಾಯಿ ನಮಗೆ ಎಂದು ಕ್ಷಮಿಸುವುದಿಲ್ಲ. ಅದು ಅಲ್ಲದೇ ನಾವು ಹಬ್ಬವನ್ನು ಮರೆತರೆ ಮುಂದಿನ ಪೀಳಿಗೆ ಈ ಹಬ್ಬವನ್ನೇ ಮರೆಯುತ್ತಾರೆ. ಎಷ್ಟೇ ಕಷ್ಟಕರವಾಗಿದ್ದರೂ ಈ ಹಬ್ಬವನ್ನು ಬಿಡುವುದಿಲ್ಲ ಎಂದು ತಿಳಿಸಿದರು.


ಭೂಮಿ ಪೂಜೆ ಕಾರ್ಯ ಬೆಳಗ್ಗೆ 6ಗಂಟೆಗೆ ಪ್ರಾರಂಭಿಸಲಾಗಿದ್ದು 7 ಗಂಟೆಗೆ ಪೂಜೆ ಕಾರ್ಯ ಮುಗಿಸಿ ಭೂಮಿ ತಾಯಿಗೆ ತಂದಿರುವ ವಿವಿಧ ಬಗೆಯ ಊಟ ಬಡಿಸಿ ನಂತರ ಸುಮಾರು 20ಜನರಿಗೆ ಪ್ರಸಾದ ವಿತರಿಸಲಾಯಿತು.

Leave A Reply

Your email address will not be published.

error: Content is protected !!